ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್: ಅಗ್ಗದ ಔಷಧಿಗಾಗಿ ‘ಅಮೃತ್ ಮಳಿಗೆ’

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಜತೆಗೆ ಎಚ್​ಎಲ್​ಎಲ್ ಒಪ್ಪಂದ l 24/7 ಸೇವೆ ಲಭ್ಯ
Last Updated 24 ಫೆಬ್ರುವರಿ 2020, 10:32 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸರ್‌ ರೋಗಿಗಳಿಗೆ ಅಗ್ಗದ ದರದಲ್ಲಿ ಔಷಧಿಗಳನ್ನು ಒದಗಿಸುವ ಸಂಬಂಧ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುತ್ತಿರುವಎಚ್ಎಲ್ಎಲ್ (ಹಿಂದೂಸ್ತಾನ್ ಲೆಟೆಕ್ಸ್ ಲಿ.) ಜತೆಗೆ ಒಪ್ಪಂದ ಮಾಡಿಕೊಂಡಿದೆ. ಶೀಘ್ರದಲ್ಲಿಯೇಆಸ್ಪತ್ರೆ ಆವರಣದಲ್ಲಿ ‘ಅಮೃತ್ ಔಷಧಿ ಮಳಿಗೆ’ ಪ್ರಾರಂಭವಾಗಲಿದೆ.

ಕ್ಯಾನ್ಸರ್‌ ರೋಗಿಗಳು ನಿಯಮಿತವಾಗಿ ಔಷಧಿಗಳನ್ನು ಪಡೆಯಬೇಕಾಗುತ್ತದೆ. ಆದರೆ, ಕೆಲ ಔಷಧಿಗಳ ದರ ದುಬಾರಿ ಆಗಿರುವುದು ರೋಗಿಗಳು ಹಾಗೂ ಅವರ ಕುಟುಂಬಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಹೀಗಾಗಿ ಸಂಸ್ಥೆಯು ಎಚ್ಎಲ್ಎಲ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. 2015ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಅಮೃತ್ ಫಾರ್ಮಸಿ ಯೋಜನೆಯನ್ನು ಪ್ರಾರಂಭಿಸಿದ್ದು, ಇದರ ನಿರ್ವಹಣೆಯ ಹೊಣೆಯನ್ನುಎಚ್ಎಲ್ಎಲ್‌ಗೆ ನೀಡಿದೆ. ಸದ್ಯ ದೇಶದಲ್ಲಿ 188 ಮಳಿಗೆಗಳು ಸೇವೆ ನೀಡುತ್ತಿವೆ.

ಸಂಸ್ಥೆಯು ಶಿಫಾನಿ ಮತ್ತು ದಾಗಾ ಕಟ್ಟಡದಲ್ಲಿ ಮಳಿಗೆ ಪ್ರಾರಂಭಕ್ಕೆ ಜಾಗ ನೀಡಿದೆ. ಈ ಮಳಿಗೆಯಲ್ಲಿ ಔಷಧಿಗಳ ಮೇಲೆ ಶೇ 30ರಿಂದ ಶೇ 50ರವರೆಗೆ ರಿಯಾಯಿತಿ ದೊರೆಯಲಿದೆ. 500ಕ್ಕೂ ಅಧಿಕ ಔಷಧಿಗಳು ದೊರೆಯಲಿವೆ.

‘ಮಳಿಗೆಯಲ್ಲಿ ವಾರದ ಎಲ್ಲ ದಿನಗಳಲ್ಲೂ ದಿನದ 24 ಗಂಟೆಗಳ ಕಾಲ ಸೇವೆ ಲಭ್ಯ. ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದಿಸುವ ಔಷಧಿಗಳು ಮಧ್ಯವರ್ತಿಗಳ ಹಾವಳಿ ಇಲ್ಲದೆಯೇ ನೇರವಾಗಿ ಮೂಲ ಬೆಲೆಗೆ ರೋಗಿಯ ಕೈ ಸೇರಲಿವೆ.ಇತರೆ ಆಸ್ಪತ್ರೆಗಳ ಕ್ಯಾನ್ಸರ್ ರೋಗಿಗಳು ಸಹ ಇಲ್ಲಿಗೆ ಬಂದು ಈ ಸೌಲಭ್ಯ ಬಳಸಿಕೊಳ್ಳಬಹುದು’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರು ತಿಳಿಸಿದರು.

‘ಪ್ರಾರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದಲ್ಲಿ ಸುಲಭವಾಗಿ ಗುಣಪಡಿಸಬಹದು. ಜನರು ಇದ್ದ ಕಡೆಯೇ ಹೋಗಿ ಅವರ ತಪಾಸಣೆ ನಡೆಸಲು 3 ವಾಹನಗಳನ್ನು ಬಳಸುತ್ತಿದ್ದೇವೆ. ಅದೇ ರೀತಿ, ಪೌರಕಾರ್ಮಿಕರಲ್ಲೂ ಜಾಗೃತಿ ಮೂಡಿಸಿ, ಕೆಲವೆಡೆ ತಪಾಸಣಾ ಶಿಬಿರ ನಡೆಸಿದ್ದೇವೆ. ಮೂರು ಮಂದಿಯಲ್ಲಿ ಕ್ಸಾನ್ಸರ್‌ ಪತ್ತೆಯಾಗಿದ್ದು, ಹೆಚ್ಚಿನ ಚಿಕಿತ್ಸೆ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದೆಡೆ ಶಿಬಿರ ನಡೆಸಲಾಗುವುದು’ ಎಂದರು.

ಮನೋಗ್ರಂಥಿ ವಿಜ್ಞಾನ ಘಟಕ ಪ್ರಾರಂಭ

ಆಸ್ಪತ್ರೆಗೆ ರಾಜ್ಯದ ವಿವಿಧೆಡೆಯಿಂದ ಪ್ರತಿನಿತ್ಯ ಸರಾಸರಿ 1,200 ಹೊರರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಅದೇ ರೀತಿ, 1,300 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ಸಂಸ್ಥೆಯಲ್ಲಿ ಮನೋಗ್ರಂಥಿ ವಿಜ್ಞಾನ ಘಟಕವನ್ನು (ಸೈಕೋ ಅಂಕಾಲಜಿ ಘಟಕ) ಮಾರ್ಚ್‌ನಲ್ಲಿ ಪ್ರಾರಂಭಿಸಲು ಸಂಸ್ಥೆ ಸಿದ್ಧತೆ ಪ್ರಾರಂಭಿಸಿದೆ.

‘ಈ ಘಟಕದಲ್ಲಿ ಒಬ್ಬ ಮನೋರೋಗ ತಜ್ಞ, ಒಬ್ಬ ಆಪ್ತ ಸಮಾಲೋಚಕ, ಇಬ್ಬರು ಸಿಬ್ಬಂದಿ ಇರುತ್ತಾರೆ. ಮೂವರು ಮನೋರೋಗ ತಜ್ಞರ ನೇಮಕಾತಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸದ್ಯ ಒಬ್ಬರ ನೇಮಕಕ್ಕೆ ಅನುಮತಿ ದೊರೆತಿದೆ’ ಎಂದು ಡಾ.ಸಿ. ರಾಮಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT