ಬುಧವಾರ, ಏಪ್ರಿಲ್ 8, 2020
19 °C
ಕಸ್ಟಮ್ಸ್‌ ಅಧಿಕಾರಿ ಹೆಸರಿನಲ್ಲಿ ₹2.83 ಲಕ್ಷ ವಂಚನೆ l ಕ್ವಿಕರ್‌ ಜಾಲತಾಣದಲ್ಲಿ ಜಾಹೀರಾತು

ಕಾರು ಮಾರಾಟದ ಸೋಗಿನಲ್ಲಿ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿರುವ ಕಾರನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಸುಳ್ಳು ಹೇಳಿ ₹2.83 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಾರು ಮಾರಾಟ ಮಾಡುವುದಾಗಿ ಹೇಳಿ ‘ಕ್ವಿಕರ್’ ಜಾಲತಾಣಗಳಲ್ಲಿ ಜಾಹೀರಾತು ನೀಡಿದ್ದ ಮೋಹನ್ ಕಿಮ್ ಎಂಬಾತ, ₹2.83 ಲಕ್ಷ ಪಡೆದು ವಂಚಿಸಿದ್ದಾನೆ’ ಎಂದು ಆರೋಪಿಸಿ ರವಿಕಿರಣ್ ವಲ್ಲೂರು ಎಂಬುವರು ದೂರು ನೀಡಿದ್ದಾರೆ.

‘ಜಾಹೀರಾತು ನೋಡಿ ಮೋಹನ್‌ನನ್ನು ಸಂಪರ್ಕಿಸಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಆತ, ‘ನನ್ನ ಕಾರನ್ನು 4 ತಿಂಗಳಿನಿಂದ ವಿಮಾನ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದೇನೆ. ಕಸ್ಟಮ್ಸ್ ಅಧಿಕಾರಿಗಳು ಕಾರನ್ನು ಜಪ್ತಿ ಮಾಡಿದ್ದಾರೆ. ಕೆಲ ಶುಲ್ಕಗಳನ್ನು ಪಾವತಿಸಿದರೆ ಕಾರು ಬಿಡುಗಡೆ ಮಾಡುತ್ತಾರೆ. ನೀವು ಶುಲ್ಕ ಭರಿಸಿದರೆ ಕಾರನ್ನೂ ನಿಮಗೇ ಮಾರುತ್ತೇನೆ’ ಎಂದು ಹೇಳಿದ್ದ’ ಎಂಬುದಾಗಿ ದೂರಿನಲ್ಲಿ ರವಿಕಿರಣ್ ತಿಳಿಸಿದ್ದಾರೆ.

‘ಕಸ್ಟಮ್ಸ್ ಅಧಿಕಾರಿ ಎಂಬುದಾಗಿ ಹೇಳಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆ ವಿವರ ನೀಡಿದ್ದ ಆರೋಪಿ, ಆ ಖಾತೆಗೆ ಹಣ ಜಮೆ ಮಾಡುವಂತೆ ಹೇಳಿದ್ದ. ಅದನ್ನು ನಂಬಿ ₹2.83 ಲಕ್ಷ ಹಾಕಿದ್ದೆ. ನಂತರ ಆರೋಪಿ, ಯಾವುದೇ ಕಾರು ನೀಡಿಲ್ಲ. ಹಣ ವಾಪಸು ನೀಡದೇ ನಾಪತ್ತೆಯಾಗಿದ್ದಾನೆ’ ಎಂದು ದೂರಿದ್ದಾರೆ.

ಪೊಲೀಸರು, ‘ಮೋಹನ್ ಕಿಮ್ ನಕಲಿ ಹೆಸರು ಇಟ್ಟುಕೊಂಡು ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದರು.

ಶಿಕ್ಷಕನಿಗೆ ವಂಚನೆ

ಆ್ಯಕ್ಸಿಸ್ ಬ್ಯಾಂಕ್‌ನ ಪ್ರತಿನಿಧಿ ಸೋಗಿನಲ್ಲಿ ಶಿಕ್ಷಕ ಎನ್‌.ಮಹೇಶ್ ಎಂಬುವರಿಗೆ ಕರೆ ಮಾಡಿದ್ದ ಸೈಬರ್ ವಂಚಕರು, ಅವರ ಖಾತೆಯಿಂದ ₹ 67,900 ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಈ ಸಂಬಂಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕ್ರೆಡಿಟ್ ಕಾರ್ಡ್ ಸ್ಥಗಿತವಾಗುವುದಾಗಿ ಹೇಳಿದ್ದ ಆರೋಪಿ, ನವೀಕರಣ ಮಾಡಲು ಕಾರ್ಡ್ ಮಾಹಿತಿ ಕೇಳಿದ್ದ. ಆತನ ಮಾತು ನಂಬಿ ಮಾಹಿತಿ ಹಂಚಿಕೊಂಡಿದ್ದೆ. ಅದಾದ ನಂತರ ಆರೋಪಿ, ಖಾತೆಯಿಂದ ₹ 67,900 ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ’ ಎಂದು ಮಹೇಶ್ ದೂರಿನಲ್ಲಿ ತಿಳಿಸಿದ್ದಾರೆ.

ಕ್ರೆಡಿಟ್ ಕಾರ್ಡ್‌ ವಂಚನೆ

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಸ್ಥಗಿತವಾಗಿರುವುದಾಗಿ ಹೇಳಿ ಕೃಷ್ಣಪ್ರಸಾದ್ ಎಂಬುವರಿಗೆ ಕರೆ ಮಾಡಿದ್ದ ವಂಚಕರು, ನವೀಕರಣದ ನೆಪದಲ್ಲಿ ಕಾರ್ಡ್ ವಿವರ ಪಡೆದು ₹ 1.02 ಲಕ್ಷವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ಮಾರತ್ತಹಳ್ಳಿ ಠಾಣೆಗೆ ಕೃಷ್ಣಪ್ರಸಾದ್ ದೂರು ನೀಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ವೆಂಕಟರಾಮನ್ ಎಂಬುವರ ಖಾತೆಯಿಂದ ₹43,254 ಡ್ರಾ ಮಾಡಿಕೊಂಡು ವಂಚಿಸಲಾಗಿದೆ. ‘ಆ್ಯಕ್ಸಿಸ್ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಇದೆ. ಹಣ ವರ್ಗಾವಣೆ ಸಂಬಂಧ ಯಾವುದೇ ಒಟಿಪಿ (ಒನ್ ಟೈಂ ಪಾಸ್‌ವರ್ಡ್‌) ಬಂದಿಲ್ಲ. ಅಷ್ಟಾದರೂ ಖಾತೆಯಿಂದ ಹಣ ವರ್ಗಾವಣೆ ಆಗಿದೆ’ ಎಂದು ವೆಂಕಟರಾಮನ್ ದೂರಿದ್ದಾರೆ.

ಟೇಬಲ್‌ ಮಾರಾಟಕ್ಕಿಟ್ಟು ₹ 64,800 ಕಳೆದುಕೊಂಡ

ಕಬ್ಬಿಣದ ಟೇಬಲ್ ಮಾರಾಟ ಮಾಡುವುದಾಗಿ ‘ಒಎಲ್‌ಎಕ್ಸ್’  ಜಾಲತಾಣದಲ್ಲಿ ಜಾಹೀರಾತು ನೀಡಿದ್ದ ಹರ್ಷಿತ್ ವರ್ಮ ಎಂಬುವರನ್ನು ಗ್ರಾಹಕರ ಸೋಗಿನಲ್ಲಿ ಸಂಪರ್ಕಿಸಿದ್ದ ಸಂಜಯ್ ಸಿಂಗ್ ಎಂಬಾತ, ಬ್ಯಾಂಕ್ ಖಾತೆಯಿಂದ ₹ 64,800 ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಈ ಸಂಬಂಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

‘ಭಾರತೀಯ ಗಡಿ ಭದ್ರತಾ ಪಡೆಯಲ್ಲಿ (ಬಿಎಸ್‌ಎಫ್‌) ಕೆಲಸ ಮಾಡುವುದಾಗಿ ಹೇಳಿದ್ದ ಸಂಜಯ್ ಸಿಂಗ್, ಟೇಬಲ್ ಖರೀದಿಸುವುದಾಗಿ ತಿಳಿಸಿದ್ದ. ಹಣ ಜಮೆ ಮಾಡುವುದಾಗಿ ತಿಳಿಸಿ ಕ್ಯೂಆರ್‌ ಕೋಡ್‌ ಒಂದನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದ’ ಎಂದು ಹರ್ಷಿತ್ ದೂರಿನಲ್ಲಿ ತಿಳಿಸಿದ್ದಾರೆ.

‘ಕ್ಯೂಆರ್‌ ಕೋಡ್‌ ಅನ್ನು ಗೂಗಲ್ ಪೇ ಖಾತೆಯಲ್ಲಿ ಸ್ಕ್ಯಾನ್ ಮಾಡಿದ್ದೆ. ಅದಾದ ಕೆಲ ಕ್ಷಣದಲ್ಲೇ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿದೆ. ನಂತರ, ಖಾತೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು