ಬುಧವಾರ, ಸೆಪ್ಟೆಂಬರ್ 29, 2021
20 °C

‘ಕಾರ್ವೆ ಸ್ಟಾಕ್ ಬ್ರೋಕಿಂಗ್’ ವಂಚನೆ; ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಷೇರು ವ್ಯವಹಾರ ಹೆಸರಿನಲ್ಲಿ ನೂರಾರು ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ಸಾರ್ವಜನಿಕರನ್ನು ವಂಚಿಸಿದ್ದ ಆರೋಪದಡಿ ‘ಕಾರ್ವೆ ಸ್ಟಾಕ್ ಬ್ರೋಕಿಂಗ್’ ಕಂಪನಿ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ಸಂಬಂಧ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಭಾರತದ ಹಲವರು ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಹಣ ವಾಪಸು ನೀಡದೇ ವಂಚಿಸಿದ್ದ ಆರೋಪದಡಿ ಕಂಪನಿ ವಿರುದ್ಧ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಪ್ರಕರಣಗಳು ದಾಖಲಾಗಿದ್ದವು. ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಅಲ್ಲಿಯ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಬೆಂಗಳೂರಿನ ಮೂವರು ಉದ್ಯಮಿಗಳು ಸಹ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೀಡಾಗಿದ್ದಾರೆ. ಅವರು ನೀಡಿದ್ದ ದೂರು ಆಧರಿಸಿ ಶೇಷಾದ್ರಿಪುರ ಠಾಣೆಯಲ್ಲಿ ಇತ್ತೀಚೆಗಷ್ಟೇ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಹೊಣೆಯನ್ನು ಸಿಸಿಬಿ ಪೊಲೀಸರಿಗೆ ವಹಿಸಲಾಗಿದೆ.

‘ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಕಂಪನಿ ಪ್ರತಿನಿಧಿ ಎಂದು ಹೇಳಿಕೊಂಡು ಉದ್ಯಮಿಗಳಿಂದ ಹಣ ಹೂಡಿಕೆ ಮಾಡಿಸಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆತ, ಸ್ಥಳೀಯ ನಿವಾಸಿ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಲಾಗುವುದು’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಕರಣದ ಬಗ್ಗೆ ತೆಲಂಗಾಣ ಹಾಗೂ ಆಂಧ್ರಪ್ರದೇಶ ಪೊಲೀಸರಿಂದ ಮಾಹಿತಿ ಪಡೆಯಲಾಗುವುದು’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.