ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ: 13 ಸ್ಥಳಗಳಲ್ಲಿ ಎಸಿಬಿ ಶೋಧ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಮೂವರು ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಶುಕ್ರವಾರ ಬೆಳಿಗ್ಗೆಯಿಂದ ಮೈಸೂರು, ಮಂಡ್ಯ, ಹಾಸನ ಮತ್ತು ಬೆಳಗಾವಿ ಜಿಲ್ಲೆಗಳ 13 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.
ಮೈಸೂರಿನ ಶ್ರೀಗಂಧದ ಕೋಠಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರಸ್ವಾಮಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಹಾಸನ ಕಚೇರಿಯ ಸಹಾಯಕ ಎಂಜಿನಿಯರ್ ಅಶ್ವಿನಿ ಮತ್ತು ಲೋಕೋಪಯೋಗಿ ಇಲಾಖೆಯ ಬೆಳಗಾವಿ ನಂ.1 ವಿಭಾಗದ ಸಹಾಯಕ ಎಂಜಿನಿಯರ್ ಮನೋಜ್ ಸುರೇಶ್ ಕವಳೇಕರ್ ವಿರುದ್ಧ ಪ್ರಕರಣ ಎಸಿಬಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಶಿವಶಂಕರಸ್ವಾಮಿ ಅವರ ಮೈಸೂರಿನ ಮನೆ, ಮೈಸೂರಿನಲ್ಲಿರುವ ಅವರ ಮಾವನ ಮನೆ, ಸ್ನೇಹಿತನ ಮನೆ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮೂಗನೂರಿನಲ್ಲಿರುವ ತಂದೆಯ ಮನೆ ಹಾಗೂ ಶ್ರೀಗಂಧದ ಕೋಠಿಯಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಅಶ್ವಿನಿ ಅವರ ಹಾಸನದ ಮನೆ, ಕಚೇರಿ ಮತ್ತು ತಂದೆಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮನೋಜ್ ಸುರೇಶ್ ಕವಳೇಕರ್ ವಿರುದ್ಧದ ಪ್ರಕರಣದಲ್ಲಿ ಆರೋಪಿ ಅಧಿಕಾರಿಯ ಮನೆ, ಖಾನಾಪುರ ತಾಲ್ಲೂಕಿನ ಸಂಗರಗಾಳಿ ಗ್ರಾಮದಲ್ಲಿರುವ ತೋಟದ ಮನೆ, ಬೆಳಗಾವಿ ನಗರದಲ್ಲಿರುವ ಇಬ್ಬರು ಸಹೋದರಿಯರ ಮನೆ ಮತ್ತು ಕಚೇರಿಯ ಮೇಲೆ ದಾಳಿಮಾಡಿದ್ದು, ಶೋಧ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.