ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆಯಲ್ಲಿ 2 ಕೋಟಿ ಸಸಿ ಲಭ್ಯ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ

‘ಕಾವೇರಿ ಕೂಗು’ ಅಭಿಯಾನಕ್ಕೆ ಸರ್ಕಾರದ ಸಂಪೂರ್ಣ ಸಹಕಾರ
Last Updated 8 ಸೆಪ್ಟೆಂಬರ್ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು:‘ಕಾವೇರಿ ನದಿ ಸಂರಕ್ಷಣೆಗೆ ಈಶ ಫೌಂಡೇಷನ್‌ ಹಮ್ಮಿಕೊಂಡಿರುವ ಅಭಿಯಾನಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಅರಣ್ಯ ಇಲಾಖೆಯಲ್ಲಿ ಈಗಾಗಲೇ 2 ಕೋಟಿ ಸಸಿ ಲಭ್ಯವಿದ್ದು, ಈ ರೀತಿಯ ಕೋಟ್ಯಂತರ ಸಸಿಗಳನ್ನು ಸಿದ್ಧಮಾಡಿಟ್ಟುಕೊಳ್ಳುವಂತೆ ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಭಾನುವಾರಜಗ್ಗಿ ವಾಸುದೇವ್‌ (ಸದ್ಗುರು) ನೇತೃತ್ವದ ‘ಕಾವೇರಿ ಕೂಗು’ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 300 ಕಿ.ಮೀ. ವಿಸ್ತಾರದಲ್ಲಿ ಕಾವೇರಿ ನದಿ ಹರಿಯುತ್ತದೆ. ರಾಜ್ಯದ ಜೀವನದಿಯಾಗಿರುವ ಕಾವೇರಿಯ ಪುನಶ್ಚೇತನ ಅತಿ ಅಗತ್ಯವಾಗಿದೆ’ ಎಂದು ಹೇಳಿದರು.

ಸದ್ಗುರು, ‘ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂದಿನ 12 ವರ್ಷಗಳಲ್ಲಿ 242 ಕೋಟಿ ಸಸಿಗಳನ್ನು ನೆಡಲಾಗುವುದು.ಕಾವೇರಿ ನದಿ ಸಂರಕ್ಷಣೆಯ ಜತೆಗೆ, ರೈತರಿಗೆ ಆದಾಯವನ್ನೂ ತಂದುಕೊಡುವ ಈ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದರು.

‘ಕಾವೇರಿ ನೀರಿನ ಹರಿವು ಶೇ 30ರಷ್ಟು ಕಡಿಮೆಯಾಗಿದೆ. ಮಣ್ಣಿನ ಫಲವತ್ತತೆ ತೀರಾ ಕಡಿಮೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಮುಂದಿನ 25 ವರ್ಷಗಳಲ್ಲಿ ಬೆಳೆ ಬೆಳೆಯಲಾರದಷ್ಟರ ಮಟ್ಟಿಗೆ ಮಣ್ಣು ತನ್ನ ಫಲವತ್ತತೆ ಕಳೆದುಕೊಳ್ಳಲಿದೆ’ ಎಂದರು.

‘ಮಳೆಯಿಂದ ಈಗ ಜಲಾಶಯಗಳು ಭರ್ತಿಯಾಗಿವೆ. ಕೆಆರ್‌ಎಸ್‌ ಜಲಾಶಯ ನಾಲ್ಕೇ ದಿನಗಳಲ್ಲಿ ಭರ್ತಿಯಾಯಿತು ಎಂದು ಅಲ್ಲಿನ ರೈತರು ಹೇಳಿದರು. ಆದರೆ, ಜಲಾಶಯ ಭರ್ತಿಯಾಗಲು ಕನಿಷ್ಠ 15ರಿಂದ 20 ದಿನಗಳು ಸಮಯ ತೆಗೆದುಕೊಳ್ಳಬೇಕು. ಆದಾಗ ಮಾತ್ರ ಅಲ್ಲಿನ ಮಣ್ಣು ನೀರನ್ನು ಹೀರಿಕೊಳ್ಳಲು ಸಾಧ್ಯ. ಕಾವೇರಿ ನಡೆಯಬೇಕೇ ವಿನಾ ಓಡಬಾರದು’ ಎಂದರು.

‘ಸದ್ಯ ನಾವು 70 ಸಾವಿರ ಕೋಟಿ ಮರದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಈ ಅಭಿಯಾನದಿಂದ ಅರಣ್ಯ ಕೃಷಿಗೆ ಉತ್ತೇಜನ ಸಿಗುತ್ತದೆ. ಮರವನ್ನು ವ್ಯವಸಾಯದ ಉತ್ಪನ್ನವಾಗಿ ಪರಿಗಣಿಸಿದರೆ ರೈತರಿಗೆ ಆದಾಯ ಸಿಗುತ್ತದೆ’ ಎಂದರು.

‘ಮರಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟುವುದಲ್ಲದೆ, ಮಳೆ ತಂದು ನದಿಗಳನ್ನೂ ರಕ್ಷಿಸುತ್ತವೆ’ ಎಂದರು.

ಬಯೋಕಾನ್‌ ಮುಖ್ಯಸ್ಥರಾದ ಕಿರಣ್‌ ಮಜುಂದಾರ್‌ ಶಾ, ‘₹42ಕ್ಕೆ ಸಸಿ ಖರೀದಿಸಿ ಅಭಿಯಾನಕ್ಕೆ ಕೈಜೋಡಿಸಬೇಕು’ ಎಂದು ಕೋರಿದರು.

*
ಕಾವೇರಿ ಜಲಾನಯನ ಪ್ರದೇಶದಲ್ಲಿ 12 ವರ್ಷಗಳಲ್ಲಿ ಕೋಟ್ಯಂತರ ಸಸಿ ನೆಡುವ ಗುರಿ ಹೊಂದಲಾಗಿದೆ. ಇದು ಮೂರು ವರ್ಷಗಳಲ್ಲಿಯೇ ನೆರವೇರುವಂತಾಗಬೇಕು.
-ಪ್ರಮೋದಾ ದೇವಿ, ರಾಜವಂಶಸ್ಥೆ

ಕಾರ್ಯಕ್ರಮದಲ್ಲಿ ಸೇರಿದ್ದ ಯುವಸಮೂಹ -ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಸೇರಿದ್ದ ಯುವಸಮೂಹ -ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT