ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾಕರ್ ರೆಡ್ಡಿಯ ಪತ್ನಿ ವಿರುದ್ಧವೂ ಎಫ್‌ಐಆರ್‌

ಸಿಸಿಬಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ
Last Updated 22 ಫೆಬ್ರುವರಿ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು:ಭೂ ಕಬಳಿಕೆ, ವಂಚನೆ ಹಾಗೂ ಜೀವ ಬೆದರಿಕೆ ಆರೋಪದಡಿ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿಯನ್ನು ಗುರುವಾರ ರಾತ್ರಿ ಬಂಧಿಸಿದ್ದ ಸಿಸಿಬಿ ಪೊಲೀಸರು, ಅವರ ಪತ್ನಿ ಪವಿತ್ರಾ ವಿರುದ್ಧವೂ ಎಫ್‌ಐಆರ್‌ ದಾಖಲಿಸಿದ್ದಾರೆ.

‘ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದ ಸಂದರ್ಭದಲ್ಲಿ ಪ್ರಭಾಕರ್ ರೆಡ್ಡಿ ಹಾಗೂ ಪವಿತ್ರಾ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಅದೇ ಆರೋಪದಡಿ ಅವರಿಬ್ಬರ ವಿರುದ್ಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರೆಡ್ಡಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಪವಿತ್ರಾ ಅವರನ್ನು ವಿಚಾರಣೆಗೆ ಕರೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸದಾಗಿ 25 ಜನರಿಂದ ದೂರು: ‘ಆರೋಪಿ ಪ್ರಭಾಕರ್ ರೆಡ್ಡಿಯನ್ನು ಬಂಧಿಸಿದ ಸುದ್ದಿ ತಿಳಿದ 25 ಮಂದಿ ಶುಕ್ರವಾರ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಬಂದು ದೂರು ನೀಡಿದ್ದಾರೆ. ಅವುಗಳನ್ನು ಆಧರಿಸಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧಿಕಾರಿ ಹೇಳಿದರು.

‘ಸಾಯಿ ರಿಯಲ್ ಎಸ್ಟೇಟ್ ಕಂಪನಿ ನಡೆಸುತ್ತಿದ್ದ ಪ್ರಭಾಕರ್ ರೆಡ್ಡಿ, ಸಾರ್ವಜನಿಕರಿಗೆ ಜೀವ ಬೆದರಿಕೆವೊಡ್ಡಿ ಭೂ ಕಬಳಿಕೆ ಮಾಡುತ್ತಿದ್ದರು. ಅವರ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ, ಪರಪ್ಪನ ಅಗ್ರಹಾರ, ಮಡಿವಾಳ, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್ ಮತ್ತು ಬೇಗೂರು ಠಾಣೆಯಲ್ಲಿ 40ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು’ ಎಂದು ಅಧಿಕಾರಿ ಹೇಳಿದರು.

‘ಆಂಧ್ರಪ್ರದೇಶದ ಉದ್ಯಮಿಯೊಬ್ಬರಿಂದ ಒಂದು ಕೋಟಿ ಪಡೆದು ವಂಚಿಸಿದ್ದ ಆರೋಪದಡಿ ರೆಡ್ಡಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಪ್ರಕರಣಗಳ ಗಂಭೀರತೆ ಅರಿತ ಕಮಿಷನರ್ ಟಿ.ಸುನೀಲ್‌ಕುಮಾರ್, ತನಿಖೆಯನ್ನು ಸಿಸಿಬಿಗೆ ವಹಿಸಿದ್ದರು. 1ನೇ ಎಸಿಎಂಎಂ ನ್ಯಾಯಾಲಯದಿಂದ ವಾರಂಟ್ ಪಡೆದು ರೆಡ್ಡಿಯ ಮನೆ ಹಾಗೂ ಕಚೇರಿ ಮೇಲೆ ಗುರುವಾರ ರಾತ್ರಿ ದಾಳಿ ಮಾಡಲಾಯಿತು.’

‘ದಾಳಿ ಸಂದರ್ಭದಲ್ಲಿ ನೂರಾರು ಆಸ್ತಿಗೆ ಸಂಬಂಧಿಸಿದ ಕ್ರಯಪತ್ರಗಳು, ಜಿಪಿಎ, ಲ್ಯಾಪ್‌ಟಾಪ್, ಕಂಪ್ಯೂಟರ್, ಹಣ ಎಣಿಸುವ ಯಂತ್ರವನ್ನು ಜಪ್ತಿ ಮಾಡಲಾಗಿದೆ. ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಆತ ಎಷ್ಟು ಮಂದಿಗೆ ವಂಚಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT