ಶುಕ್ರವಾರ, ಜನವರಿ 24, 2020
17 °C
ಪ್ರಜಾವಾಣಿ ವಾರ್ತೆ

ಮತೀಯ ಗಲಭೆಗೆ ಸಂಚು ವಿಫಲಗೊಳಿಸಿದ ಸಿಸಿಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಮತೀಯ ಗಲಭೆ ಹುಟ್ಟುಹಾಕಲು ಶಂಕಿತ ಉಗ್ರರ ಗುಂಪು ರೂಪಿಸಿದ್ದ ಸಂಚನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು (ಸಿಸಿಬಿ) ವಿಫಲಗೊಳಿಸಿದ್ದಾರೆ.

ಆಂತರಿಕ ಭದ್ರತಾ ವಿಭಾಗ ಹಾಗೂ ಗುಪ್ತದಳದ ಜತೆಗೂಡಿ ಸಿಸಿಬಿ ಪೊಲೀಸರು ನಡೆಸಿದ ತನಿಖೆಯ ವೇಳೆ ನಿಷೇಧಿತ ಉಗ್ರ ಸಂಘಟನೆ ಅಲ್‌ ಉಮ್ಮಾದ ಮಾಜಿ ಸದಸ್ಯ ಮೆಹಬೂಬ್‌ ಪಾಷಾ ಅವರ ಸುದ್ದಗುಂಟೆ ಪಾಳ್ಯದ ಮನೆಯಲ್ಲಿ ಶಂಕಿತರು ಸಭೆ ಸೇರಿದ್ದನ್ನು ಪತ್ತೆ ಹಚ್ಚಿದ್ದಾರೆ. 

ಈ ಸಂಬಂಧ ಸಿಸಿಬಿ ಪೊಲೀಸರು ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪಾಷಾ ಮತ್ತು ಆತನ 14 ಸಹಚರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಪಾಷಾ ಅವಿತುಕೊಂಡಿದ್ದಾನೆ ಎನ್ನಲಾಗಿದ್ದು, ಆತನ ಪತ್ತೆಗೆ ಶುಕ್ರವಾರ ರಾತ್ರಿವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸುದ್ದಗುಂಟೆ ಪಾಳ್ಯದಲ್ಲಿ ಜ.7ರಂದು ಬಂಧಿತರಾದ ಮೂವರು ಶಂಕಿತರು ಸದಸ್ಯರಾಗಿರುವ ಅನಾಮಧೇಯ ತಂಡದಲ್ಲಿ ಪಾಷಾ ಕೂಡಾ ಸದಸ್ಯನಾಗಿದ್ದಾನೆ. ಈ ತಂಡ ವಿದೇಶಿ ಮೂಲದ ಉಗ್ರನೊಬ್ಬನ ಜೊತೆ ಸಂಪರ್ಕ ಹೊಂದಿದ್ದು, ಆತನ ನಿರ್ದೇಶನದಂತೆ ಗಲಭೆ ಸೃಷ್ಟಿಸಲು ಉದ್ದೇಶಿಸಿತ್ತು ಎಂದು ಸಿಸಿಬಿ ಜಂಟಿ ಕಮಿಷನರ್‌ ಸಂದೀಪ್‌ ಪಾಟೀಲ ತಿಳಿಸಿದರು.

ವಾಹನ ಚಾಲನೆ ಹಾಗೂ ಮರಗೆಲಸ ಮಾಡುವ ಪಾಷಾ ನಗರದಲ್ಲಿ ನೆಲೆಸಿದ್ದಾನೆ. ಈತನ ಮನೆಯಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದ ತಂಡದ ಸದಸ್ಯರು ತಮ್ಮ ಧರ್ಮಗಳನ್ನು ವಿರೋಧಿಸುವ ಬೇರೆ ಸಮುದಾಯದ ಜನರನ್ನು ಕೊಲ್ಲಲು ಉದ್ದೇಶಿಸಿದ್ದರು. ವಿವೇಕನಗರದಲ್ಲಿರುವ ಇನ್ನೊಂದು ಮನೆಯಲ್ಲೂ ಇವರು ಆಗಾಗ್ಗೆ ಸಭೆ ಸೇರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು