ಭಾನುವಾರ, ನವೆಂಬರ್ 29, 2020
20 °C

ಬೆಂಗಳೂರಿನಲ್ಲಿ ಸದ್ದು ಮಾಡಿದ ಪೊಲೀಸ್‌ ರಿವಾಲ್ವರ್; ಇಬ್ಬರಿಗೆ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಪೊಲೀಸ್‌ ರಿವಾಲ್ವರ್ ಸದ್ದು ಮಾಡಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಗುಂಡು ಹಾರಿಸಿ ಸೆರೆ ಹಿಡಿಯಲಾಗಿದೆ.

ಎರಡು ಪ್ರತ್ಯೇಕ ಪ್ರಕರಣದಲ್ಲಿ ಪಶ್ಚಿಮ ವಿಭಾಗ ಹಾಗೂ ಸಿಸಿಬಿ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

‘ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ವಿಶ್ವ ಅಲಿಯಾಸ್ ಸೈಕೊ ಎಂಬಾತನನ್ನು ವಿಜಯನಗರ ಎಸಿಪಿ ನಂಜುಂಡೇಗೌಡ ಹಾಗೂ ಇನ್‌ಸ್ಪೆಕ್ಟರ್ ಪ್ರಶಾಂತ್ ಅವರು ಬುಧವಾರ ನಸುಕಿನಲ್ಲಿ ಗುಂಡು ಹೊಡೆದು ಸೆರೆ ಹಿಡಿದಿದ್ದಾರೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

‘ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ, ಬ್ಯಾಡರಹಳ್ಳಿ ಬಳಿಯ ಬ್ರಹ್ಮದೇವರ ಗುಡ್ಡದಲ್ಲಿ ಅವಿತುಕೊಂಡಿದ್ದ. ಅಲ್ಲಿಗೆ ಪೊಲೀಸರ ವಿಶೇಷ ತಂಡ ಹೋಗಿತ್ತು. ಹೆಡ್ ಕಾನ್‌ಸ್ಟೆಬಲ್ ಮಂಜುನಾಥ್ ಎಂಬುವರ ಮೇಲೆಯೇ ಆರೋಪಿ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿದ್ದ. ಅವಾಗಲೇ ಆರೋಪಿ‌ ಮೇಲೆ ಗುಂಡು ಹಾರಿಸಲಾಗಿದೆ. ಕುಸಿದು ಬಿದ್ದ ಆತನನ್ನು ಹಾಗೂ ಹೆಡ್ ಕಾನ್‌ಸ್ಟೆಬಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದೂ ಅವರು ಮಾಹಿತಿ ನೀಡಿದರು.

ರೌಡಿಗೆ ಗುಂಡೇಟು: 23 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿ ಬೊಂಡಾ ಮಂಜ ಎಂಬಾತನನ್ನು ಸಿಸಿಬಿ ಇನ್‌ಸ್ಪೆಕ್ಟರ್ ಪುನೀತ್ ಅವರು ಗುಂಡು ಹಾರಿಸಿ ಬಂಧಿಸಿದ್ದಾರೆ.

‘ಹಲವು ದಿನಗಳಿಂದ ಆರೋಪಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಸಾರ್ವಜನಿಕರನ್ನು ಬೆದರಿಸುತ್ತಿದ್ದ. ಮಂಗಳವಾರ ರಾತ್ರಿ ಆತನನ್ನು ಬಂಧಿಸಲು ಪೊಲೀಸರ ವಿಶೇಷ ತಂಡ ಹೋಗಿತ್ತು. ಹೆಡ್ ಕಾನ್‌ಸ್ಟೆಬಲ್ ಮೇಲೆಯೇ ಆತ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿದ್ದ. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಪುನೀತ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ. ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು