ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಸೈಕಲ್ ಸವಾರಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ‘ಚಕ್ರಥಾನ್’ ಸೈಕ್ಲಿಂಗ್ ಅಭಿಯಾನಕ್ಕೆ ಆ.15ರಂದು ಚಾಲನೆ ನೀಡಲಾಗುವುದು ರೋಟರಿ ಕ್ಲಬ್ ಆಫ್ ಬೆಂಗಳೂರು (ಆರ್‌ಸಿಬಿ) ತಿಳಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಸಿಬಿಯ ಅಧ್ಯಕ್ಷೆ ನಳಿನಿ ನಂಜುಂಡಯ್ಯ, ‘ರೋಟರಿ ಕ್ಲಬ್‌ಗಳ ಮತ್ತು ಡೆಕಥ್ಲಾನ್ ಸಹಯೋಗದಲ್ಲಿ ಈ ಅಭಿಯಾನ ಆ.15ರಿಂದ 2024ರ ಜ.26ರವರೆಗೂ ದೇಶದಾದ್ಯಂತ ನಡೆಯಲಿದೆ. ಇದರಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಜನ ಭಾಗವಹಿಸಲಿದ್ದು, ಆರೋಗ್ಯ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. 165 ದಿನಗಳಲ್ಲಿ 76 ಸಾವಿರ ಕಿ.ಮೀ ದೂರವನ್ನು ಕ್ರಮಿಸುವ ಉದ್ದೇಶವಿದೆ’ ಎಂದು ಮಾಹಿತಿ ನೀಡಿದರು.
‘ಯಲಹಂಕದಲ್ಲಿರುವ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಕಚೇರಿಯಲ್ಲಿ ಅಭಿಯಾನಕ್ಕೆ ಚಾಲನೆ ಸಿಗಲಿದೆ. ರೋಟರಿ ಸದಸ್ಯರು ಮತ್ತು ಬಿಎಸ್‌ಎಫ್ ಯೋಧರು 76 ಕಿ.ಮೀ ದೂರವನ್ನು ಸೈಕ್ಲಿಂಗ್ ಮಾಡುವುದರ ಮೂಲಕ ಜಾಗೃತಿ ಮೂಡಿಸಲಿದ್ದಾರೆ. ಈ ಅಭಿಯಾನದಲ್ಲಿ ವರ್ಚ್ಯುವಲ್ ಹಾಗೂ ಭೌತಿಕವಾಗಿ ಭಾಗವಹಿಸಲು ಅವಕಾಶವಿದೆ. ‘ಚಕ್ರಥಾನ್’ ಆ್ಯಪ್ ಡೌನಲೋಡ್ ಮಾಡಿಕೊಂಡು, 76 ಕಿ.ಮೀ ದೂರವನ್ನು ನೀವಿರುವಲ್ಲಿಯೇ ಸೈಕ್ಲಿಂಗ್ ಮಾಡಬಹುದು. ಅದು ಅಭಿಯಾನದಲ್ಲಿ ದಾಖಲಾಗುತ್ತದೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.