ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜಪೇಟೆ: ‘ಲೋಡ್ ಬಂದು ಮೂರೇ ಗಂಟೆಯಲ್ಲಿ ಸ್ಫೋಟ’

ಅವಘಡದಿಂದ ಭಯಗೊಂಡ ಸ್ಥಳೀಯರು l ಅಕ್ರಮ ಚಟುವಟಿಕೆ ತಡೆಯಲು ಒತ್ತಾಯ
Last Updated 23 ಸೆಪ್ಟೆಂಬರ್ 2021, 22:13 IST
ಅಕ್ಷರ ಗಾತ್ರ

ಬೆಂಗಳೂರು: ಸ್ಫೋಟದ ಸದ್ದು ಸ್ಥಳೀಯರನ್ನು ಗಾಬರಿಪಡಿಸಿತು. ದೇಹದಿಂದ ಬೇರ್ಪಟ್ಟ ಕೈ, ಕಾಲು, ಬೆರಳುಗಳು ಛಿದ್ರ ಛಿದ್ರವಾಗಿ ಬಿದ್ದಿದ್ದನ್ನು ನೋಡಿ ಜನ ಭಯಗೊಂಡರು. ರಸ್ತೆ, ಗೋಡೆಯಲ್ಲಿ ರಕ್ತದ ಕಲೆಗಳು ಕಾಣುತ್ತಿದ್ದವು. ಮಳಿಗೆ ಸಾಮಗ್ರಿಗಳು ಹಾಗೂ ವಾಹನಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಸ್ಫೋಟದ ತೀವ್ರತೆ ಎಷ್ಟಿತ್ತು ಎಂಬುದನ್ನು ಒತ್ತಿ ಹೇಳಿದವು.

ಚಾಮರಾಜಪೇಟೆಯ ಸೀತಾಪತಿ ಅಗ್ರಹಾರ 4ನೇ ಅಡ್ಡರಸ್ತೆಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದ ಸ್ಥಳದಲ್ಲಿ ಕಂಡ ದೃಶ್ಯಗಳಿವು. ಘಟನಾ ಸ್ಥಳ ನೋಡಿದರೆ ನಡುಕ ಹುಟ್ಟಿಸುವಂತ್ತಿತ್ತು. ಬಾಂಬ್ ಸ್ಫೋಟವಾಯಿತಾ ಎಂಬ ಅನುಮಾನ ಪೊಲೀಸರನ್ನು ಆರಂಭದಲ್ಲಿ ಕಾಡಿತ್ತು. ಗುಪ್ತದಳದ ಅಧಿಕಾರಿಗಳೂ ಸ್ಥಳಕ್ಕೆ ದೌಡಾಯಿಸಿದ್ದರು. ಆದರೆ, ಸ್ಥಳದಲ್ಲಿ ಪಟಾಕಿ ಬಾಕ್ಸ್‌ಗಳು ಹಾಗೂ ಅವುಗಳ ಅವಶೇಷ ಕಂಡಾಗ ಪೊಲೀಸರು ನಿಟ್ಟುಸಿರು ಬಿಟ್ಟರು.

ನ್ಯೂ ತರಗುಪೇಟೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಇಕ್ಕಟ್ಟಾದ ಜಾಗದಲ್ಲಿ ಸಣ್ಣ ಸಣ್ಣ ಮಳಿಗೆಗಳಿವೆ. ಇಂಥ ಸ್ಥಳದಲ್ಲಿದ್ದ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಟಾಕಿಗಳಿಂದ ಸ್ಫೋಟ ಸಂಭವಿಸಿರುವುದು ವ್ಯಾಪಾರಿಗಳು ಹಾಗೂ ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.

‘ಪಟಾಕಿ ವಿತರಕ ಬಾಬು, ಹಲವು ವರ್ಷಗಳಿಂದ ಸಗಟು ದರದಲ್ಲಿ ಪಟಾಕಿ ಮಾರುತ್ತಿದ್ದಾನೆ. ತಮಿಳುನಾಡಿನ ಶಿವಕಾಶಿಯಿಂದ ಎರಡು ದಿನಕ್ಕೊಮ್ಮೆ ಪಟಾಕಿ ಖರೀದಿಸಿ ತರುತ್ತಿದ್ದ ಅತ, ಗೋದಾಮಿನಲ್ಲಿ ಸಂಗ್ರಹಿಸುತ್ತಿದ್ದ. ಗೋದಾಮಿಗೆ ಬರುತ್ತಿದ್ದ ಬಿಡಿ ವ್ಯಾಪಾರಿಗಳು, ಬಾಕ್ಸ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದರು’ ಎಂದು ಸ್ಥಳೀಯ ನಿವಾಸಿ ವೆಂಕಟೇಶ್ ಹೇಳಿದರು.

‘ಗುರುವಾರ ಬೆಳಿಗ್ಗೆ 8.30ರ ಸುಮಾರಿಗೆ ಟ್ರಕ್‌ನಲ್ಲಿ ಪಟಾಕಿ ಬಾಕ್ಸ್‌ಗಳ ಲೋಡ್ ಬಂದಿತ್ತು. 80 ಬಾಕ್ಸ್ ಇಳಿಸಿಕೊಂಡಿದ್ದ ಬಾಬು, ಗೋದಾಮಿನಲ್ಲಿ ಸಂಗ್ರಹಿಸಿದ್ದ. ಟ್ರಕ್‌ ಹೊರಟು ಹೋಗಿತ್ತು. ಮಧ್ಯಾಹ್ನದ ನಂತರ ಬಿಡಿ ವ್ಯಾಪಾರಿಗಳು ಬಂದು ಬಾಕ್ಸ್‌ಗಳನ್ನು ತೆಗೆದುಕೊಂಡು ಹೋಗಬೇಕಿತ್ತು. ಅಷ್ಟರಲ್ಲೇ ಈ ಸ್ಫೋಟ ಸಂಭವಿಸಿದೆ’ ಎಂದೂ ತಿಳಿಸಿದರು.

ತಳ್ಳುಗಾಡಿಯಲ್ಲಿ 10 ಪಟಾಕಿ ಬಾಕ್ಸ್‌: ‘ವ್ಯಾಪಾರಿಯೊಬ್ಬರು ಹೇಳಿದ್ದರಿಂದ ಪಟಾಕಿ ಬಾಕ್ಸ್‌ಗಳನ್ನು ತರಲು ಹೋಗಿದ್ದೆ. ಗೋದಾಮಿನಲ್ಲಿದ್ದ 10 ಪಟಾಕಿ ಬಾಕ್ಸ್‌ಗಳನ್ನು ತಳ್ಳುಗಾಡಿ ಮೇಲೆ ಇರಿಸಿಕೊಂಡು ಹೊರಡಲು ಸಿದ್ಧವಾಗಿದ್ದೆ. ಅದೇ ವೇಳೆ ಗೋದಾಮಿನಲ್ಲಿ ಸ್ಫೋಟ ಸಂಭವಿಸಿತು. ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದೆ’ ಎಂದು ಸ್ಫೋಟದಲ್ಲಿ ಗಾಯಗೊಂಡ ಗಣಪತಿ ಹೇಳಿದರು.

ಪೊಲೀಸರಿಗೆ ದೂರು ನೀಡಿರುವ ಗಣಪತಿ, ‘ಗೋದಾಮಿನಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ’ ಎಂದಿದ್ದಾರೆ.

ವಾಹನ ಬಳಿ ನಿಂತಿದ್ದಷ್ಟೇ ಗೊತ್ತು: ಗಾಯಾಳು ಅಂಗೂಸ್ವಾಮಿ, ‘ಪಂಕ್ಚರ್ ಅಂಗಡಿ ಎದುರು ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ನಿಂತಿದ್ದಷ್ಟೇ ಗೊತ್ತು. ದೊಡ್ಡ ಶಬ್ದ ಕೇಳಿಸಿದಾಗ ನಾನು ದೂರದಲ್ಲಿ ಹೋಗಿ ಬಿದ್ದೆ. ಬಾಂಬ್‌ ಸ್ಫೋಟವಾಗಿದೆ. ನಾನು ಬದುಕುವುದಿಲ್ಲ ಎಂದುಕೊಂಡೆ. ರಕ್ಷಣೆಗಾಗಿ ಚೀರಾಡಿದೆ. ಸ್ಥಳೀಯರು ನನ್ನನ್ನು ಎತ್ತಿಕೊಂಡು ಆಸ್ಪತ್ರೆಗೆ ತಂದು ಸೇರಿಸಿದರು’ ಎಂದರು.

ಗಾಯಾಳು ಜೇಮ್ಸ್, ‘ಮಳಿಗೆ ಎದುರು ನಿಂತಿದ್ದೆ. ದಿಢೀರ್ ಸ್ಫೋಟ ಸಂಭವಿಸಿ ಹಾರಿ ಬಿದ್ದೆ. ಏನಾಯಿತೆಂದು ನೋಡುವಷ್ಟರಲ್ಲಿ ಪ್ರಜ್ಞೆ ಹೋಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಪ್ರಜ್ಞೆ ಬಂದಿದೆ’ ಎಂದರು.

ದೊಡ್ಡ ಶಬ್ದ ಕೇಳಿ ಓಡಿಬಂದೆವು: ‘ಕೂಲಿ ಕೆಲಸ ಮಾಡುತ್ತಿದ್ದೆವು. ದೊಡ್ಡ ಶಬ್ದ ಕೇಳಿ ಏನಾಯಿತೆಂದು ನೋಡಲು ಸ್ಥಳಕ್ಕೆ ಬಂದೆವು. ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು. ಗಾಯಗೊಂಡು ಬಿದ್ದಿದ್ದವರನ್ನು ಎತ್ತಿಕೊಂಡು ಆಸ್ಪತ್ರೆಗೆ ಕಳುಹಿಸಿದೆವು’ ಎಂದು ಕಾರ್ಮಿಕ ಸೆಲ್ವಂ ಹೇಳಿದರು.

‘ದಾರಿಯಲ್ಲೇ ಕೈ, ಕಾಲುಗಳು ತುಂಡರಿಸಿ ಬಿದ್ದಿದ್ದವು. ಹೆಜ್ಜೆ ಇರಿಸಲು ಭಯವಾಗುತ್ತಿತ್ತು. ಜೀವನದಲ್ಲಿ ಇಂಥ ದೃಶ್ಯ ಎಂದಿಗೂ ನೋಡಿರಲಿಲ್ಲ’ ಎಂದೂ ಸ್ಫೋಟದ ತೀವ್ರತೆ ವಿವರಿಸಿದರು.

ಸ್ಥಳೀಯರು, ‘ಘಟನೆಯಿಂದ ನಿವಾಸಿಗಳು ಭಯಗೊಂಡಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಪಟಾಕಿ ಸಂಗ್ರಹದಂತಹ ಅಕ್ರಮ ಚಟುವಟಿಕೆಗಳನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕಾರ್ಮಿಕರ ನೆಚ್ಚಿನ ಚಹಾ ಅಂಗಡಿ’
‘ಗೋದಾಮು ಪಕ್ಕದಲ್ಲೇ ಚಹಾ ಅಂಗಡಿ ಇತ್ತು. ನಿತ್ಯವೂ ಕಾರ್ಮಿಕರು ಬಂದು ಚಹಾ ಕುಡಿದು ಹೋಗುತ್ತಿದ್ದರು. ಸ್ಫೋಟದಿಂದಾಗಿ ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ’ ಎಂದು ಸ್ಥಳೀಯರು ಹೇಳಿದರು.

‘ಗುರುವಾರ ಬೆಳಿಗ್ಗೆ ಚಹಾ ಅಂಗಡಿಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ರಸ್ತೆಯಲ್ಲೂ ಸಾರ್ವಜನಿಕರ ಓಡಾಟ ವಿರಳವಾಗಿತ್ತು. ಹೆಚ್ಚಿದ್ದರೆ, ಸಾವು–ನೋವಿನ ಪ್ರಮಾಣವೂ ಜಾಸ್ತಿ ಇರುತ್ತಿತ್ತು’ ಎಂದರು.

ಅಜ್ಜಿ–ಮೊಮ್ಮಕ್ಕಳ ರಕ್ಷಣೆ
ಕಟ್ಟಡದ ಕೆಳಮಹಡಿಯಲ್ಲಿ ಗೋದಾಮು ಇದೆ. ಅದೇ ಕಟ್ಟಡದಮೊದಲ ಮಹಡಿಯಲ್ಲಿ ಕುಟುಂಬವೊಂದು ವಾಸವಿದೆ. ಸ್ಫೋಟ ಸಂಭವಿಸಿದ್ದ ಸಂದರ್ಭದಲ್ಲಿ ಅಜ್ಜಿ ಸಾರಮ್ಮ ಹಾಗೂ ಇಬ್ಬರು ಮೊಮ್ಮಕ್ಕಳು ಮಾತ್ರ ಮನೆಯಲ್ಲಿದ್ದರು. ಸ್ಫೋಟದಿಂದಾಗಿ ಮೂವರು ಅಪಾಯಕ್ಕೆ ಸಿಲುಕಿದ್ದರು. ಅವರನ್ನು ಸ್ಥಳೀಯರಿಬ್ಬರು ಹೊರಗೆ ಕರೆತಂದುರಕ್ಷಿಸಿದ್ದಾರೆ.

‘ದೊಡ್ಡದಾಗಿ ಶಬ್ದ ಕೇಳಿಸಿತು. ತುಂಬಾ ಭಯವಾಯಿತು. ಆಟವಾಡುತ್ತಿದ್ದ ಮೊಮ್ಮಕ್ಕಳನ್ನು ನನ್ನತ್ತ ಕರೆದುಕೊಂಡೆ. ಎಲ್ಲರೂ ಸೇರಿ ‘ಕಾಪಾಡಿ..ಕಾಪಾಡಿ..’ ಎಂದು ಕೂಗಾಡಿದೆವು. ಇಬ್ಬರು ವ್ಯಕ್ತಿಗಳು, ಮನೆಯೊಳಗೆ ಬಂದು ನಮ್ಮನ್ನು ಹೊರಗೆ ಕರೆದೊಯ್ದರು’ ಎಂದು ಸಾರಮ್ಮ ಹೇಳಿದರು.

‘ನಾಲ್ಕು ವರ್ಷಗಳಿಂದ ಈ ಕಟ್ಟಡದಲ್ಲಿ ವಾಸವಿದ್ದೇವೆ. ನೆಲಮಹಡಿಯಲ್ಲಿ ಪಟಾಕಿ ಸಂಗ್ರಹಿಸುತ್ತಿದ್ದ ಮಾಹಿತಿ ಇರಲಿಲ್ಲ. ಸ್ಫೋಟದಿಂದ ಮನೆಯ ಕಿಟಕಿ ಗಾಜುಗಳು ಒಡೆದಿವೆ. ಪಾತ್ರೆಗಳು ಹಾಗೂ ಪೀಠೋಪಕರಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT