ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವಕ್ಕೆ ವೇದಿಕೆ ಆಗ್ರಹ: ಇಂದು ಮುಸ್ಲಿಂ ಮುಖಂಡರ ಸಭೆ

Last Updated 9 ಆಗಸ್ಟ್ 2022, 22:12 IST
ಅಕ್ಷರ ಗಾತ್ರ

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವ ಆಚರಿಸುವುದಾಗಿ ಹೇಳುತ್ತಿರುವ ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆಯ ಪದಾಧಿಕಾರಿಗಳು, ಗಣೇಶೋತ್ಸವ ಆಚರಣೆಗೂ ಅನುಮತಿ ನೀಡುವಂತೆ ಆಗ್ರಹಿಸಿದ್ದಾರೆ.

ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದ ಒಕ್ಕೂಟದ ಮುಖಂಡರು, 'ಆಚರಣೆಗಳನ್ನು ರಾಜಕೀಯ ಮಾಡಬೇಡಿ. ಯಾವುದೇ ಗಲಾಟೆ ಇಲ್ಲದೇ ಗಣೇಶೋತ್ಸವ ಆಚರಿಸಲು ನಾಗರಿಕರು ಸಿದ್ಧರಿದ್ದೇವೆ. ಅನುಮತಿ ಕೊಡಿ’ ಎಂದರು.

ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ, ‘ಮೈದಾನದ ವಿಷಯದಲ್ಲಿ ಭಿನ್ನ ಅಭಿಪ್ರಾಯವಿದೆ. ಹೀಗಾಗಿ, ಹಿಂದೂ ಮುಖಂಡರ ಸಭೆ ಕರೆಯಲಾಗಿದ್ದು, ಒಕ್ಕೂಟದ ಅಭಿಪ್ರಾಯ ದಾಖಲಿಸಿಕೊಳ್ಳಲಾಗಿದೆ. ಬುಧವಾರ ಸಂಜೆ ಪ್ರತ್ಯೇಕವಾಗಿ ಮುಸ್ಲಿಂ ಮುಖಂಡರ ಸಭೆ ಕರೆಯಲಾಗಿದ್ದು, ಅವರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಮೈದಾನದ ವಿಷಯದಲ್ಲಿ ಯಾವುದೇ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಯಾರಾದರೂ ಕಿಡಿಗೇಡಿಗಳು, ಕಾನೂನುಬಾಹಿರ ಚಟುವಟಿಕೆ ಎಸಗಿ ಸ್ಥಳೀಯರು ಹಾಗೂ ಸಾರ್ವಜನಿಕರ ಆಸ್ತಿಗೆ ಧಕ್ಕೆ ತಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಧಾರ್ಮಿಕ ಆಚರಣೆಗೆ 2006ರಲ್ಲಿ ಅನುಮತಿ: ‘2006ರಲ್ಲಿ ಪೊಲೀಸ್ ಶಾಂತಿ ಸಭೆ ನಡೆದಿತ್ತು. ಈದ್ಗಾ ಮೈದಾನದಲ್ಲಿ ಧಾರ್ಮಿಕ ಆಚರಣೆ ನಡೆಸಲು ಅನುಮತಿ ಸಹ ಸಿಕ್ಕಿತ್ತು. ಅದೇ ಆದೇಶವನ್ನು ಪುನಃ ಹೊರಡಿಸಿ, ಈ ವರ್ಷ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು’ ಎಂದು ಮುಖಂಡರು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT