ಶುಕ್ರವಾರ, ಮೇ 20, 2022
19 °C

ಚಾಮರಾಜಪೇಟೆ: ₹1.50 ಕೋಟಿ ವ್ಯತ್ಯಾಸ, ಬೆಂಕಿ ಹಚ್ಚಿ ಮಗನ ಕೊಲೆ ಮಾಡಿದ ವ್ಯಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಫ್ಯಾಬ್ರಿಕೇಷನ್ ಉದ್ಯಮದ ಲೆಕ್ಕದಲ್ಲಿ ₹ 1.50 ಕೋಟಿ ವ್ಯತ್ಯಾಸ ಆಯಿತು’ ಎಂಬ ಕಾರಣಕ್ಕೆ ಅರ್ಪಿತ್ (25) ಎಂಬುವರನ್ನು ಬೆಂಕಿ ಹಚ್ಚಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಮೃತ ಯುವಕನ ತಂದೆ ಸುರೇಂದ್ರಕುಮಾರ್ ಅಲಿಯಾಸ್ ಬಾಬು (51) ಅವರನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಅರ್ಪಿತ್‌ಗೆ ಸುಟ್ಟ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ (ಏ.7) ಮೃತಪಟ್ಟಿದ್ದಾರೆ. ಕೊಲೆ ಆರೋಪದಡಿ ತಂದೆಯನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿಯು ತಪ್ಪೊಪ್ಪಿಗೆ ನೀಡಿದ್ದು, ಮಹಜರು ನಡೆಸಬೇಕಿದೆ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಕೋರ್ಟ್‌ಗೆ ಹಾಜರುಪಡಿಸ
ಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದು ತಿಳಿಸಿದರು.

ಒಬ್ಬನೇ ಮಗ: ‘ಫ್ಯಾಬ್ರಿಕೇಷನ್ ಉದ್ಯಮಿ ಸುರೇಂದ್ರಕುಮಾರ್ ಅವರಿಗೆ ಅರ್ಪಿತ್ ಒಬ್ಬನೇ ಮಗ. ಇನ್ನೊಬ್ಬ ಮಗಳಿ
ದ್ದಾಳೆ. ಬಿ.ಕಾಂ ಪದವಿ ಮುಗಿಸಿದ್ದ ಅರ್ಪಿತ್, ಲೆಕ್ಕ ಪರಿಶೋಧಕ (ಸಿಎ) ಆಗಲು ಹಲವು ಬಾರಿ ಅರ್ಹತಾ ಪರೀಕ್ಷೆ ಬರೆದಿದ್ದರು. ಯಶಸ್ಸು ಸಾಧಿಸಿರಲಿಲ್ಲ. ಹೀಗಾಗಿ, ಅವರನ್ನು ಉದ್ಯಮದ ಲೆಕ್ಕಪತ್ರ ನೋಡಿಕೊಳ್ಳಲು ತಂದೆಯೇ ನಿಯೋಜಿಸಿದ್ದರು’ ಎಂದು ವಿವರಿಸಿದರು.
‘ಉದ್ಯಮದ ಲೆಕ್ಕದಲ್ಲಿ ₹ 1.50 ಕೋಟಿ ವ್ಯತ್ಯಾಸ ಬಂದಿತ್ತು. ಸಿಟ್ಟಾದ ತಂದೆ, ಮಗನನ್ನು ಪ್ರಶ್ನಿಸಿದ್ದರು. ಈ ಬಗ್ಗೆ ಹಲವು ಬಾರಿ ವಾಗ್ವಾದವಾಗಿತ್ತು. ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು’ ಎಂದರು.‘ಕೆಲ ದಿನಗಳ ಹಿಂದೆ ₹ 12 ಸಾವಿರ ಅನ್ನು ಅರ್ಪಿತ್ ಕಳೆದುಕೊಂಡಿದ್ದರು. ಇದೂ ತಂದೆಗೆ ಸಿಟ್ಟು ತರಿಸಿತ್ತು. ಏಪ್ರಿಲ್ 1ರ ಮಧ್ಯಾಹ್ನ ಲೆಕ್ಕದ ವ್ಯತ್ಯಾಸ ಹಾಗೂ ಹಣ ಕಳೆದುಕೊಂಡ ವಿಚಾರ ಪ್ರಸ್ತಾಪವಾಗಿ, ಜಗಳ ಆರಂಭವಾಗಿತ್ತು. ಮಗನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ ತಂದೆ, ಮನೆಯಿಂದ ಹೊರಗೆ ಎಳೆದು ತಂದಿದ್ದರು. ಮೈ ಮೇಲೆ ಥಿನ್ನರ್ ಎರಚಿ ಬೆಂಕಿ ಹಚ್ಚಿದ್ದರು.’

‘ಮೈ ಮೇಲೆ ಬೆಂಕಿ ಉರಿಯುತ್ತಿದ್ದಾಗಲೇ ಅರ್ಪಿತ್ ಕಿರುಚಾಡುತ್ತ ರಸ್ತೆಯಲ್ಲೆಲ್ಲ ಓಡಾಡಿದ್ದರು. ರಕ್ಷಣೆಗೆ ಬಂದ ಸ್ಥಳೀ
ಯರು, ಬೆಂಕಿ ನಂದಿಸಿದ್ದರು. ಸ್ಥಳೀಯರ ಸಹಾಯದಿಂದ ತಂದೆಯೇ ಅರ್ಪಿತ್‌ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊ
ಯ್ದು ಸೇರಿಸಿದ್ದರು. ಜೊತೆಗೆ, ಆಸ್ಪತ್ರೆಯಲ್ಲೇ ಇದ್ದುಕೊಂಡು ಮಗನ ಆರೈಕೆ ಸಹ ಮಾಡುತ್ತಿದ್ದರು’ ಎಂದೂ ತಿಳಿಸಿದರು.

‘ತಂದೆಯ ರಕ್ಷಿಸಲು ಸುಳ್ಳು ಹೇಳಿಕೆ’

‘ತಂದೆಯೇ ಬೆಂಕಿ ಹಚ್ಚಿದ್ದರೆಂಬ ಸಂಗತಿ ಗೊತ್ತಾದರೆ, ಅವರನ್ನು ಪೊಲೀಸರು ಬಂಧಿಸುತ್ತಾರೆ ಎಂದು ಅರ್ಪಿತ್ ಅಂದುಕೊಂಡಿದ್ದರು. ಅದೇ ಕಾರಣಕ್ಕೆ, ಸುಳ್ಳು ಹೇಳಿಕೆ ನೀಡಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಆಸ್ಪತ್ರೆಯಲ್ಲಿ ಪೊಲೀಸರಿಗೆ ಅರ್ಪಿತ್, ‘ಮನೆಯಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು’ ಎಂದಿದ್ದರು. ಅರ್ಪಿತ್ ಸಾವಿನ ನಂತರ ಪ್ರತ್ಯಕ್ಷದರ್ಶಿಗಳು ಠಾಣೆಗೆ ಬಂದು ವಿಷಯ ತಿಳಿಸಿದರು’ ಎಂದರು.

‘ಪ್ರಾಥಮಿಕ ತನಿಖೆಯಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದ್ದು, ಅದರಲ್ಲಿ ತಂದೆಯೇ ಬೆಂಕಿ ಹಚ್ಚುತ್ತಿರುವುದು ಸೆರೆಯಾಗಿತ್ತು. ಅದನ್ನೇ ಪುರಾವೆಯಾಗಿಸಿ ಪ್ರಕರಣ ದಾಖಲಿಸಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು