ಬೆಂಗಳೂರು: ಶೌಚಾಲಯ ಶುಚಿಗೊಳಿಸುವ ರಾಸಾಯನಿಕವನ್ನು ಯುವಕನ ಮೇಲೆ ಎರಚಿ ಗಾಯಗೊಳಿಸಿದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಆರೋಪಿ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಗಾಯಗೊಂಡಿರುವ, ವೃಷಭಾವತಿ ನಗರದ ನಿವಾಸಿ ನಾಗೇಶ್ ಕೊಂಡಾ(21) ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ನಾಗೇಶ್ ಅವರ ಎಡಕಣ್ಣು, ಮುಖ ಹಾಗೂ ತುಟಿಗೆ ಸುಟ್ಟ ಗಾಯವಾಗಿದೆ. ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರ್ಖಾನೆಯೊಂದರಲ್ಲಿ ಫಿಟ್ಟರ್ ಆಗಿ ನಾಗೇಶ್ ಕೆಲಸ ಮಾಡುತ್ತಿದ್ದರು. ಭಾನುವಾರ ಕೆಲಸಕ್ಕೆ ರಜೆ ಇದ್ದ ಕಾರಣ ವೈನ್ ಸ್ಟೋರ್‌ಗೆ ಬಂದು ಮದ್ಯ ಸೇವಿಸಿ, ಊಟ ಮುಗಿಸಿ ಮನೆಗೆ ಹೊರಟಿದ್ದರು. ಈ ವೇಳೆ ಮದ್ಯದಂಗಡಿ ಬಳಿ ಬಂದ ದುಷ್ಕರ್ಮಿ, ನಾಗೇಶ್ ಮುಖಕ್ಕೆ ರಾಸಾಯನಿಕ ಎರಚಿ ಪರಾರಿಯಾಗಿದ್ದ.
ನಾಗೇಶ್ ಅವರು ಈ ಹಿಂದೆ ವೈಟ್‌ಫೀಲ್ಡ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ವಾಸವಿದ್ದ ಮನೆಯ ಎದುರೇ ಯುವತಿಯೊಬ್ಬರು ವಾಸಿಸುತ್ತಿದ್ದರು. ಆಕೆಯ ಜತೆಗೆ ನಾಗೇಶ್ ಅವರು ಫೋನ್‌ನಲ್ಲಿ ಮಾತುಕತೆ ನಡೆಸುತ್ತಿದ್ದರು. ಈ ವಿಷಯ ತಿಳಿದು ಯುವತಿ ಕಡೆಯ ವ್ಯಕ್ತಿಯೇ ರಾಸಾಯನಿಕ ಎರಚಿರುವ ಸಾಧ್ಯತೆಯಿದೆ. ಆರೋಪಿಯ ಬಗ್ಗೆ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.