ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP ಪಶ್ಚಿಮ ವಲಯದ ಕಾಮಗಾರಿ ಪರಿಶೀಲಿಸಿದ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

Last Updated 17 ಮೇ 2022, 14:26 IST
ಅಕ್ಷರ ಗಾತ್ರ

ಬೆಂಗಳೂರು: ಹಳೆ ಮೈಸೂರು ರಸ್ತೆ (ಮಾಗಡಿ ರಸ್ತೆ) ಹಾಗೂ ವಾಟಾಳ್ ನಾಗರಾಜ್ ರಸ್ತೆ ಸೇರುವಲ್ಲಿನ ‘ವೈ ಜಂಕ್ಷನ್‌’ನಲ್ಲಿ ಗ್ರೇಡ್ ಸಪರೇಟರ್ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಗಡುವು ವಿಧಿಸಿದರು.

ಪಶ್ಚಿಮ ವಲಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾಮಗಾರಿಗಳನ್ನು ಮುಖ್ಯ ಆಯುಕ್ತರು ಮಂಗಳವಾರ ಪರಿಶೀಲನೆ ನಡೆಸಿದರು. ‘ವೈ ಜಂಕ್ಷನ್‌’ ಗ್ರೇಟ್‌ ಸಪರೇಟರ್‌ ಕಾಮಗಾರಿಯನ್ನು ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯ ₹ 30 ಕೋಟಿ ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಮೆಜೆಸ್ಟಿಕ್ ಮತ್ತು ರಾಜಾಜಿನಗರ ಕಡೆಯಿಂದ ಬರುವ ವಾಹನಗಳು ವೈ ಜಂಕ್ಷನ್‌ ಮೂಲಕ ಹಾದುಹೋಗುತ್ತವೆ. ಸದಾ ವಾಹನ ದಟ್ಟಣೆ ಉಂಟಾಗುತ್ತಿದ್ದ ಈ ಜಂಕ್ಷನ್‌ ಅನ್ನು ಸಿಗ್ನಲ್ ಮುಕ್ತ ಮಾಡಲು ಗ್ರೇಡ್ ಸಪರೇಟರ್ ನಿರ್ಮಿಸಲಾಗುತ್ತಿದೆ. ಇಲ್ಲಿ ಮೆಜೆಸ್ಟಿಕ್ ಕಡೆಯಿಂದ ರಾಜಾಜಿನಗರ ಕಡೆ ಹೋಗುವ ಕೆಳಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಈಗಾಗಲೇ ವಾಹನ ಸಂಚಾರಕ್ಕೆ ಅನುಮಾಡಿಕೊಡಲಾಗಿದೆ. ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಲುಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ.

ಒಕಳೀಪುರ ಅಷ್ಟಪಥ ಕಾರಿಡಾರ್ ಕಾಮಗಾರಿ ಪರಿಶೀಲಿಸಿದ ಮುಖ್ಯ ಆಯುಕ್ತರು, ‘ಇಲ್ಲಿನ ರಸ್ತೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತುಮಕೂರು ಕಡೆಗಿನ ರೈಲ್ವೆ ಹಳಿಯಡಿ ನಡೆಸಬೇಕಾದ ಬಾಕ್ಸ್ ಪುಷಿಂಗ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸುಭಾಷ್ ನಗರ ವಾರ್ಡಿನ ಪ್ಲಾಟ್‌ಫಾರ್ಮ್‌ ರಸ್ತೆ ಬದಿ ನೀರು ನಿಲ್ಲುವುದರಿಂದ ವಾಹನಗಳಿಗೆ ಸಮಸ್ಯೆ ಎದುರಾಗುತ್ತಿದೆ. ರಸ್ತೆ ಬದಿ ಕೊಳವೆ ಅಳವಡಿಸಿ ರಾಜಕಾಲುವೆಗೆ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದರು. ಕಸ ಸಾಗಿಸುವ ಕಾಂಪ್ಯಾಕ್ಟರ್ ವಾಹನ ರಸ್ತೆಯಲ್ಲೇ ನಿಂತಿದ್ದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ‘ರಸ್ತೆ ಬದಿ ಕಾಂಪ್ಯಾಕ್ಟರ್‌ಗಳನ್ನು ನಿಲ್ಲಿಸದಂತೆ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಪ್ರದೇಶದಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಜಾಗವು ಖಾಲಿ ಉಳಿದಿದ್ದು, ಅದನ್ನು ಕಸ ವಿಲೇವಾರಿ ಪ್ರಕ್ರಿಯೆಗೆ ಬಳಸುವಂತೆ ಸಲಹೆ ನೀಡಿದರು. ಇಲ್ಲಿ ರೈಲ್ವೆ ಇಲಾಖೆಯ ಖಾಲಿ ಸ್ಥಳವನ್ನು ಬಳಸಿಕೊಂಡು ರಸ್ತೆ ವಿಸ್ತರಿಸಿದರೆ ಸಂಚಾರ ದಟ್ಟಣೆ ನಿವಾರಣೆಯಾಗಲಿದೆ. ಈ ಬಗ್ಗೆ ರೈಲ್ವೆ ಇಲಾಖೆಯ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾಜಕಾಲುವೆಯ ಸೇತುವೆಯ ಕೆಳಗಿನ ಹೂಳನ್ನು ತೆರವು ಮಾಡಬೇಕು. ಕಾಲುವೆಗೆ ಕಸ ಬಿಸಾಡುವುದನ್ನು ತಡೆಯಲು ಚೈನ್ ಲಿಂಕ್ ಅಳವಡಿಸಬೇಕು ಎಂದು ರಾಜಕಾಲುವೆ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.

ಮಂತ್ರಿ ಸ್ಕ್ವೇರ್ ಮಾಲ್ ಮುಂಭಾಗದಲ್ಲಿ ಮಳೆ ನೀರು ಕಟ್ಟಿಕೊಳ್ಳುವುದನ್ನು ತಪ್ಪಿಸಲು ನಿರ್ಮಿಸುತ್ತಿರುವ ರಾಜಕಾಲುವೆಯ ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಆ ಬಳಿಕವೂ ಸ್ಥಳದಲ್ಲಿ ನೀರು ನಿಂತರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು‌. ಕಾಡು ಮಲ್ಲೇಶ್ವರ ವಾರ್ಡ್‌ನಲ್ಲಿ ಅಕ್ರಮವಾಗಿ ಅಳವಡಿಸಿರುವ ಎಲ್ಲ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಸೂಚಿಸಿದರು.

ದತ್ತಾತ್ರೆಯ ದೇವಸ್ಥಾನದ ಬಳಿ ರಾಜಕಾಲುವೆಯ ಕೆಳಭಾಗದಲ್ಲಿ ಜಲಮಂಡಳಿ ಒಳಚರಂಡಿ ಕೊಳವೆ ಅಳವಡಿಸುವ ಈ ಕಾಮಗಾರಿ ಪೂರ್ಣಗೊಂಡ ಬಳಿಕ ರಾಜಕಾಲುವೆಯ ನೀರು ಹರಿವಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆ ಬಳಿಕ ಸೇತುವೆ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ. ಜೂನ್ ಅಂತ್ಯದೊಳಗೆ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದರು.

ಮಲ್ಲೇಶ್ವರ ವಾರ್ಡ್‌ನ ಯಶವಂತಪುರ ಮಾರುಕಟ್ಟೆ ಕಟ್ಟಡ, ಮಾರಪ್ಪನ ಪಾಳ್ಯ ವಾರ್ಡ್‌ನಲ್ಲಿ ಅಂಬೇಡ್ಕರ್ ಸಮುದಾಯ ಭವನ ಹಾಗೂ ಕಮಲಾ ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ,ಅಗ್ರಹಾರ ದಾಸರಹಳ್ಳಿ ವಾರ್ಡ್‌ನ ಹೊಸಹಳ್ಳಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ,ರಾಜ್ ಕುಮಾರ್ ವಾರ್ಡ್‌ನ ಡಾ. ಬಿ‌.ಆರ್.ಅಂಬೇಡ್ಕರ್ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.

ಉಪ್ಪಾರಪೇಟೆಯ ಪೌರಕಾರ್ಮಿಕರ ಮಸ್ಟರಿಂಗ್ ತಾಣದಲ್ಲಿ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಇಲ್ಲಿನ ಶೌಚಾಲಯ ದುರಸ್ತಿಪಡಿಸಬೇಕು. ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಿರು ಉದ್ಯಾನವನ್ನು ದುರಸ್ತಿಪಡಿಸಬೇಕು. ಇಲ್ಲಿ ಸಂಚಾರ ಕಿಯಾಸ್ಕ್‌ಗೆ ದೀಪ ಅಳವಡಿಸಬೇಕು ಎಂದು ಸೂಚಿಸಿದರು.

ಸಚಿವ ಕೆ.ಗೋಪಾಲಯ್ಯ, ಪಶ್ಚಿಮ ವಲಯ ಆಯುಕ್ತ ಡಾ. ದೀಪಕ್, ಜಂಟಿ ಆಯುಕ್ತ ಶ್ರೀನಿವಾಸ್, ಮುಖ್ಯ ಎಂಜಿನಿಯರ್ ವಿಶ್ವನಾಥ್, ಬಿ.ಎಸ್‌.ಪ್ರಹ್ಲಾದ್, ಸುಗುಣಾ, ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT