ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವ ಉಳಿಸೀತು ಒದ್ದೆ ಬಟ್ಟೆ’

ಮಕ್ಕಳ ವಿಜ್ಞಾನ ಸಮ್ಮೇಳನ ಸಮಾರೋಪ l ಭೋಪಾಲ್ ದುರಂತ ಉಲ್ಲೇಖ
Last Updated 6 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಮನುಷ್ಯ ಆರೋಗ್ಯವಂತನಾಗಿ ಉತ್ತಮ ರೀತಿಯಲ್ಲಿ ಜೀವನ ನಡೆಸಲು ವಿಜ್ಞಾನದ ಅರಿವು ಅತ್ಯಗತ್ಯ. ಇಂದಿನ ಮಕ್ಕಳು ವಿಜ್ಞಾನದ ಬಗ್ಗೆ ತಿಳಿದುಕೊಂಡು ಬೇರೆಯವರಿಗೂ ತಿಳಿಸಿ ಸದೃಢ ದೇಶ ನಿರ್ಮಿಸಬೇಕು’ ಎಂದು ನವದೆಹಲಿಯ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯ ನಿರ್ದೇಶಕ ಡಾ.ಮನೋಜ್ ಕೆ.ಪಟಾರಿಯಾ ಹೇಳಿದರು.

ಜಿಕೆವಿಕೆಯಲ್ಲಿ ನಡೆಯುತ್ತಿರುವ ವಿಜ್ಞಾನ ಕಾಂಗ್ರೆಸ್‌ನಲ್ಲಿ ಸೋಮವಾರ ‘ಮಕ್ಕಳ ವಿಜ್ಞಾನ ಸಮ್ಮೇಳನ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ದೇಶದ ಭವಿಷ್ಯವೇ ಮಕ್ಕಳು. ಸಮ್ಮೇಳನದಲ್ಲಿ ಮಕ್ಕಳು ಪ್ರದರ್ಶಿಸಿರುವ ವಿಜ್ಞಾನದ ಮಾದರಿಗಳು ಅವರ ಕಲಿಕಾಸಕ್ತಿ ತೋರಿಸುತ್ತವೆ. ಇಂತಹ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು’ ಎಂದರು.

‘ಭೋಪಾಲ್‌ ದುರಂತದಲ್ಲಿ ವಿಷಕಾರಿ ಅನಿಲ ಸೇವಿಸಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಅಂತಹ ಆಪತ್ಕಾಲದಲ್ಲಿ ನೀರಿನಿಂದ ಒದ್ದೆ ಮಾಡಿದ್ದ ಬಟ್ಟೆಯನ್ನು ಮೂಗಿಗೆ ಅಡ್ಡವಾಗಿ ಕಟ್ಟಿಕೊಂಡಿದ್ದರೆ ಸಾಕಷ್ಟು ಜೀವಗಳು ಉಳಿಯುತ್ತಿದ್ದವು. ಈ ರೀತಿಯ ಸಣ್ಣ ವಿಷಯಗಳು ವಿಜ್ಞಾನದಿಂದ ತಿಳಿಯುತ್ತವೆ’ ಎಂದು ಹೇಳಿದರು.

‘ಇಂದಿನ ದಿನಗಳಲ್ಲಿ ರಾಸಾಯನಿಕ ಹಾಗೂ ಅನಿಲ ಸೋರಿಕೆಯಂಥ ಅವಘಡಗಳು ಮೇಲಿಂದ ಮೇಲೆ ನಡೆಯುತ್ತಿರುತ್ತವೆ. ಇಂಥ ಸಂದರ್ಭದಲ್ಲಿ ಅಪಾಯದಿಂದ ಪಾರಾಗಲು ವಿಜ್ಞಾನ ನೆರವಿಗೆ ಬರುತ್ತದೆ. ಅದು ಹೇಗೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು’ ಎಂದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ‘ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಬಹುತೇಕ ಮಕ್ಕಳು ವಿಜ್ಞಾನಿಯಾಗುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಇವರು ಅರ್ಧದಲ್ಲೇ ಗುರಿಯನ್ನು ಬದಲಿಸಬಾರದು. ಕೊನೆಯವರೆಗೆ ಕಠಿಣ ಪರಿಶ್ರಮ ಹಾಗೂ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಛಲದಿಂದ ಮುನ್ನಡೆಯಬೇಕು’ ಎಂದರು.

ಸ್ಪರ್ಧಾ ವಿಜೇತರಿಗೆ ಟ್ರೋಫಿ ವಿತರಣೆ

ಮಕ್ಕಳ ವಿಜ್ಞಾನ ಸಮ್ಮೇಳನದ ಅಂಗವಾಗಿ ರಸಪ್ರಶ್ನೆ ಹಾಗೂ ಒಂದು ನಿಮಿಷದ ವಿಡಿಯೊ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಕ್ರಮವಾಗಿ ಮೊದಲ, ಎರಡನೇ ಹಾಗೂ ಮೂರನೇ ಸ್ಥಾನ ಪಡೆದವರ ವಿವರ ಇಂತಿದೆ. ಇವರಿಗೆಲ್ಲ ಟ್ರೋಫಿ ಹಾಗೂ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.

ವಿಜ್ಞಾನ ರಸಪ್ರಶ್ನೆ: ಕೆ.ಅಭಿಲಯಾ ರೆಡ್ಡಿ ಹಾಗೂ ಅಕ್ಷಿಯಾ ರೆಡ್ಡಿ (ತೆಲಂಗಾಣ), ಪಿಯುಸುತ ಹಾಗೂ ಸ್ವಿಗ್ನಾ ನಾಯಕ್ (ಗೋವಾ), ಸತ್ವಿರ್ ಸಿಂಗ್ ಹಾಗೂ ಅಮರ್ ವರ್ಮ್ (ಉತ್ತರ ಪ್ರದೇಶ).

ಒಂದು ನಿಮಿಷದ ವಿಡಿಯೊ ಸ್ಪರ್ಧೆ: ಗುಂಜಿತಾ ಜೈಸ್ವಾಲ್, ಬೃಂದಾ, ಉನ್ನತಿ ಹಾಗೂ ಶ್ರದ್ಧಾ –ಡಿಮ್ಸ್ ಅಕಾಡೆಮಿ ಬೆಂಗಳೂರು,ಶಿಯಾ – ಎನ್‌ಪಿಎಸ್ ಯಲಹಂಕ ಹಾಗೂ ಸಿದ್ಧಾರ್ಥ ಭಾರಧ್ವಾಜ್ – ಕೇಂದ್ರೀಯ ವಿದ್ಯಾಲಯ

***

ದೇಶದ ಹಲವು ಜಿಲ್ಲೆಗಳನ್ನು ಪ್ರತಿನಿಧಿಸಿರುವ ಮಕ್ಕಳು ಸಿದ್ಧಪಡಿಸಿದ ವಿಜ್ಞಾನ ಮಾದರಿಗಳು ಇದ್ದವು. 10,000ಕ್ಕೂ ಹೆಚ್ಚು ಮಕ್ಕಳು ಪ್ರದರ್ಶನ ವೀಕ್ಷಿಸಿದ್ದಾರೆ

-ಡಾ. ಮನೋಜ್ ಕೆ. ಪಟಾರಿಯಾ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT