ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಮನದ ಮೂಸೆಯಲ್ಲಿ ಪರಿಹಾರ ಸೂತ್ರ

ಸಮಕಾಲೀನ ಸಮಸ್ಯೆ ಬಗೆಹರಿಸಲು ಎಳೆಯ ವಿಜ್ಞಾನಿಗಳಿಂದ ಸುಲಭೋಪಾಯ
Last Updated 4 ಜನವರಿ 2020, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಸಾಯನಿಕಗಳಿಂದ ಕಲುಷಿತಗೊಂಡ ಬೆಳ್ಳಂದೂರು ಕೆರೆಯನ್ನು ಮರಳಿ ಸಹಜ ರೂಪಕ್ಕೆ ತರಲು ಸರ್ಕಾರಗಳು ಹಲವಾರು ವರ್ಷಗಳಿಂದ ಹರಸಾಹಸ ಪಡುತ್ತಿವೆ. ಆದರೆ, ಚಿಣ್ಣರ ಪಾಲಿಗೆ ಇದು ಬಗೆಹರಿಸಲಾಗದ ಸಮಸ್ಯೆಯೇ ಅಲ್ಲ. ಸೂಕ್ಷ್ಮಾತಿಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ನೀರನ್ನು ಸೇರಿ ಜೀವಸಂಕುಲಗಳಿಗೆ ಅಪಾಯ ತಂದೊಡ್ಡುತ್ತಿವೆ. ಇದರಿಂದ ಮುಕ್ತಿ ಹೊಂದುವುದಕ್ಕೂ ಬಾಲವಿಜ್ಞಾನಿಗಳ ಬಳಿ ಸುಲಭ ಸೂತ್ರಗಳಿವೆ.

ಸಮಕಾಲಿನ ಜಗತ್ತನ್ನು ಕಾಡುತ್ತಿರುವ ಗಹನವಾದ ಸಮಸ್ಯೆಗಳಿಗೂ ತಮ್ಮದೇ ಚಿಂತನೆ ಮೂಲಕ ಪರಿಹಾರೊಪಾಯಗಳನ್ನು ಸೂಚಿಸಿದ್ದಾರೆ ಎಳೆಯ ವಿಜ್ಞಾನಿಗಳು. ಮಕ್ಕಳೇ ಅಭಿವೃದ್ಧಿಪಡಿಸಿರುವ 100ಕ್ಕೂ ಅಧಿಕ ವಿಜ್ಞಾನ ಯೋಜನೆಗಳ ಪ್ರದರ್ಶನಕ್ಕೆ ಭಾರತೀಯ ವಿಜ್ಞಾನ ಕಾಂಗ್ರೆಸ್‌ ವೇದಿಕೆ ಕಲ್ಪಿಸಿದೆ.

ಶಿವಕಾಸಿಯ ವೈಆರ್‌ಟಿವಿ ಮೆಟ್ರಿಕ್ಯುಲೇಷನ್‌ ಹೈಯರ್‌ ಸೆಕೆಂಡರಿ ಸ್ಕೂಲ್‌ನ ವಿದ್ಯಾರ್ಥಿ ಆರ್‌.ವರುಣ್‌ಚಂದ್‌ಗೆ ಪರಿಸರದ ಬಗ್ಗೆ ಅಪರಿಮಿತ ಕಾಳಜಿ. ಮಾಲಿನ್ಯ ಕಡಿಮೆ ಮಾಡುವ ಪುಟ್ಟ ಪುಟ್ಟ ಪರಿಕರಗಳನ್ನು ರೂಪಿಸಿದ್ದಾರೆ ಅವರು. ಬೆಳ್ಳಂದೂರು ಕೆರೆಯನ್ನು ಕಾಡುವ ಸಮಸ್ಯೆ ನೀಗಿಸುವುದಕ್ಕೂ ಅವರು ದಾರಿ ತೋರಿದ್ದಾರೆ.

ಕಾರ್ಖಾನೆಗಳಿಂದ ಬರುವ ತ್ಯಾಜ್ಯ ನೀರು ಜಾಲರಿ, ಹತ್ತಿಯಂತಹ ಪದಾರ್ಥ, ಬೆಣಚು ಕಲ್ಲು, ಚಾರ್‌ಕೋಲ್‌, ಮರಳು ಮೂಲಕ ಹಾದುಹೋಗುವಂತೆ ಮಾಡಿದರೆ ಸಾಕು. ತಾವೇ ರೂಪಿಸಿದ ಮಾದರಿಯ ಮೂಲಕ ಪ್ರಾತ್ಯಕ್ಷಿಕೆ ನೀಡಿದರು.

‘ಬೆಳ್ಳಂದೂರು ಕೆರೆಯನ್ನು ರಾಸಾಯನಿಕಗಳು ಸೇರದಂತೆ ತಡೆಯಲು ಭಾರಿ ವೆಚ್ಚ ಮಾಡಬೇಕಿಲ್ಲ. ಇದೇ ವ್ಯವಸ್ಥೆಯನ್ನು ಭಾರಿ ಪ್ರಮಾಣದಲ್ಲಿ ರೂಪಿಸಿದರೆ ಶೇ 80ರಷ್ಟು ಕಶ್ಮಲಗಳು ಕೆರೆ ಸೇರದಂತೆ ತಡೆಯಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ವರುಣ್‌ಚಂದ್‌.

ವಾಹನಗಳ ಹೊಗೆಯಿಂದ ಉಂಟಾಗುವ ವಾಯುಮಾಲಿನ್ಯ ಕಡಿಮೆ ಮಾಡಲು ಅವರು ಸೈಲೆನ್ಸರ್‌ ಪೈಪ್‌ಗೆ ಹೆಚ್ಚುವರಿಯಾಗಿ ಅಳವಡಿಸುವ ಸಾಧನ ರೂಪಿಸಿದ್ದಾರೆ. ತೆಂಗಿನ ನಾರು, ಆ್ಯಕ್ಟಿವೇಟೆಡ್‌ ಚಾರ್‌ಕೋಲ್‌, ತಂತಿಗಳ ಉಂಡೆಯನ್ನು ಬಳಸಿ ರೂಪಿಸಿರುವ ಈ ಸಾಧನ ಕಾರ್ಬನ್‌ ಮಾನಾಕ್ಸೈಡ್‌ ಹಾಗೂ ಕಾರ್ಬನ್‌ ಡಯಾಕ್ಸೈಡ್‌ಗಳನ್ನು ಹೀರಿಕೊಳ್ಳಬಲ್ಲುದು.

‘ಇದು ವಾಹನದ ಹೊಗೆಯಿಂದ ಉಂಟಾಗುವ ಮಾಲಿನ್ಯವನ್ನು ಶೇ 40ರಷ್ಟು ಕಡಿಮೆ ಮಾಡಬಲ್ಲುದು. ಕೇವಲ ₹150 ವೆಚ್ಚ. ಈ ಸಾಧನವನ್ನು ಆರು ತಿಂಗಳು ಬಳಸಬಹುದು’ ಎಂದು ಅವರು ವಿವರಿಸಿದರು.

ಬಹೂಪಯೋಗಿ ಬೈಸಿಕಲ್‌:

ತೆಲಂಗಾಣದ ವಾರಂಗಲ್‌ನ ಎಂ.ಸಾಗರ್‌ ಮ್ಯಾಜಿಕ್‌ ಬೈಸಿಕಲ್‌ ರೂಪಿಸಿದ್ದಾರೆ. ಸೋಲಾರ್‌ ಪ್ಯಾನೆಲ್‌ ಹಾಗೂ ಬ್ಯಾಟರಿ ಅಳವಡಿಸಿರುವ ಈ ಸೈಕಲ್‌ ಅನೇಕ ಕೆಲಸಗಳನ್ನು ಸುಲಭಗೊಳಿಸಬಲ್ಲುದು. ಗದ್ದೆ ಉಳುಮೆಗೆ, ಸಮ ಪ್ರಮಾಣದಲ್ಲಿ ಬೀಜ ಬಿತ್ತನೆಗೆ, ಗೊಬ್ಬರ ಹಾಕುವುದಕ್ಕೆ ನೆರವಾಗಬಲ್ಲುದು.

ಆರುಭುಜಗಳ ಆಕೃತಿ ವಿಮಾನದ ರಚನೆಯಿಂದ ಹಿಡಿದು, ಗದ್ದೆ ಉಳುವ ನೊಗದವರೆಗೆ ಹತ್ತು ಹಲವು ಕ್ಲಿಷ್ಟ ಸಮಸ್ಯೆಗಳನ್ನು ಸುಲಲಿತವಾಗಿ ಬಗೆಹರಿಸಲು ನೆರವಾಗಬಲ್ಲುವುದು. ತೆಲಂಗಾಣದ ಕರೀಂನಗರದ ಪರಮಿತ ಹೆರಿಟೇಜ್‌ ಸ್ಕೂಲ್‌ ಅನುದೀಪ್‌ ಹಾಗೂ ಮೆಹದೀಪ್‌ ಷಡ್ಭುಜಾಕೃತಿಗಳನ್ನು ಬಳಸಿ ವಿಮಾನದ ಮಾದರಿಗಳನ್ನು ಹಾಗೂ ಕೃಷಿ ಯಂತ್ರೋಪರಕರಣಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಸುರಂಗದೊಳಗೆ ಅಪಾಯಕಾರಿ ಅನಿಲ ತುಂಬಿಕೊಂಡರೆ ಸ್ವಯಂಪತ್ತೆ ಹಚ್ಚಿ, ಅದನ್ನು ಹೊರಕಳುಹಿಸುವ ವ್ಯವಸ್ಥೆಯನ್ನು ಹಿಮಾಚಲ ಪ್ರದೇಶದ ರಾಹುಲ್‌ ಹಾಗೂ ಹರೀಶ್‌ ಪ್ರದರ್ಶನಕ್ಕಿಟ್ಟಿದ್ದರು.

ಕಣ್ಣಿಗೆ ಕಾಣದ ಪ್ಲಾಸ್ಟಿಕ್‌ ಕಣಗಳಿಂದ ಮುಕ್ತಿ

ಬೇಕಾಬಿಟ್ಟಿ ಬಿಸಾಡುವ ಪ್ಲಾಸ್ಟಿಕ್‌ ವಸ್ತುಗಳಿಂದ ಸೂಕ್ಷ್ಮಾತಿ ಸೂಕ್ಷ್ಮ ಕಣಗಳು ನೀರಿನ ಮೂಲಗಳನ್ನು ಸೇರುತ್ತಿವೆ. ಮೀನಿನಂತಹ ಜಲಚರಗಳ ಒಡಲು ಸೇರುವ ಈ ಕಣಗಳು, ಅವುಗಳನ್ನು ಸೇವಿಸುವ ಮನುಷ್ಯನ ದೇಹದೊಳಗೂ ತಲುಪುತ್ತಿದೆ. ಕ್ಯಾನ್ಸರ್‌ನಂತಹ ಕಾಯಿಲೆಗೂ ಕಾರಣವಾಗುತ್ತದೆ. ಬರಿಗಣ್ಣಿಗೆ ಕಾಣದ ಇಂತಹ ಕಣಗಳನ್ನು ನೀರಿನಿಂದ ಬೇರ್ಪಡಿಸಲು ಸಾಧ್ಯವೇ?

‘ಕಪ್ಪು ಕಬ್ಬಿಣದ ಆಕ್ಸೈಡ್‌ ಹುಡಿಯನ್ನು ಬಳಸಿ ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳಿಂದ ಮುಕ್ತಿ ಪಡೆಯಬಹುದು’ ಎನ್ನುತ್ತಾರೆ ಹೈದರಾಬಾದ್‌ನ ಕಲ್ಯಾಣನಗರದ ಸೇಂಟ್‌ ಆಲ್ಫೋನ್ಸಾ ಹೈಸ್ಕೂಲ್‌ನ ವಿದ್ಯಾರ್ಥಿ ಎ.ವೆಂಕಟಲಕ್ಷ್ಮಿ.

‘ಕಪ್ಪು ಕಬ್ಬಿಣದ ಆಕ್ಸೈಡ್‌ ಹುಡಿ ಹಾಗೂ ಪ್ಲಾಸ್ಟಿಕ್‌ ಕಣಗಳೆರಡೂ ಧ್ರುವಗಳನ್ನು ಹೊಂದಿರುವುದಿಲ್ಲ (ನಾನ್‌ಪೋಲಾರ್‌). ಹಾಗಾಗಿ ಅವು ಪರಸ್ಪರ ಬೆರೆಯುತ್ತವೆ. ಬಳಿಕ ಅಯಸ್ಕಾಂತಿಯ ವಸ್ತುವಿನ ಮೂಲಕ ಈ ಮಿಶ್ರಣವನ್ನು ಸುಲಭವಾಗಿ ಹೀರಿಕೊಳ್ಳಬಹುದು’ ಎಂದು ವೆಂಕಟಲಕ್ಷ್ಮಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ಇಟ್ಟಿಗೆಯಾಯಿತು ಪ್ಲಾಸ್ಟಿಕ್‌

ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಹಾವಳಿಗೆ ಉತ್ತರ ಪ್ರದೇಶದ ಕೈಸರ್‌ಗಂಜ್‌ ಸರ್ದಾರ್‌ಪಟೇಲ್‌ ಇಂಟರ್‌ಮೀಡಿಯೇಟ್‌ ಶಾಲೆಯ ವಿದ್ಯಾರ್ಥಿ ಉತ್ಕರ್ಷ್‌ ಸಿಂಗ್‌ ಸುಲಭೋಪಾಯ ಕಂಡುಕೊಂಡಿದ್ದಾರೆ. ಪ್ಲಾಸ್ಟಿಕ್‌ಗೆ ಮರಳು ಬೆರೆಸಿ ಕಾಯಿಸುವ ಮೂಲಕ ಇಟ್ಟಿಗೆ ತಯಾರಿಸಿದ್ದಾರೆ. ಇಂಟರ್‌ಲಾಕ್‌ ರೂಪಿಸಲು ಇದನ್ನು ಬಳಸಿದ್ದಾರೆ.

‘ಪ್ಲಾಸ್ಟಿಕ್‌ ಸುಡುವಾಗ ಉತ್ಪತ್ತಿಯಾಗುವ ವಿಷಕಾರಿ ಅನಿಲವನ್ನು ಹೀರಿಕೊಂಡು ಅದರಿಂದ ಕಾರ್ಬನಿಕ್‌ ಆಮ್ಲ ತಯಾರಿಸಬಹುದು, ಅದರಿಂದ ಕಾರ್ಬನ್‌ ಬೇರ್ಪಡಿಸಿ ಅಡುಗೆ ಅನಿಲ ತಯಾರಿಸಬಹುದು’ ಎನ್ನುತ್ತಾರೆ ಉತ್ಕರ್ಷ್‌ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT