ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ‌ಅಕ್ರಮವಾಗಿ ಚೀಟಿ ವ್ಯವಹಾರ; ದಂಪತಿ ಮನೆಗೆ ಮುತ್ತಿಗೆ

Published 1 ಜುಲೈ 2023, 14:27 IST
Last Updated 1 ಜುಲೈ 2023, 14:27 IST
ಅಕ್ಷರ ಗಾತ್ರ

ಪೀಣ್ಯದಾಸರಹಳ್ಳಿ: ಅಕ್ರಮವಾಗಿ ಚೀಟಿ ವ್ಯವಹಾರ ನಡೆಸಿ ₹ 30 ಲಕ್ಷ ಪಡೆದು ವಂಚಿಸಿರುವ ಆರೋಪದಡಿ ಪುಣ್ಯ ಹಾಗೂ ಚಂದ್ರಶೇಖರ್ ದಂಪತಿ ಮನೆಗೆ ಸಂತ್ರಸ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಿಎಚ್‌ಇಎಲ್‌ ಮಿನಿ ಕಾಲೊನಿ ನಿವಾಸಿ ಪುಣ್ಯ, ಗಾರ್ಮೆಂಟ್ಸ್ ಕಾರ್ಖಾನೆಯೊಂದರ ಉದ್ಯೋಗಿ. ಪತಿ ಚಂದ್ರಶೇಖರ್ ಜೊತೆ ಸೇರಿಕೊಂಡು ಅಕ್ರಮವಾಗಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಕೆಲಸ ಮಾಡುವ ಮಹಿಳೆಯರು, ಚೀಟಿಗೆ ಹಣ ಕಟ್ಟುತ್ತಿದ್ದರು.

‘ಚೀಟಿ ತುಂಬಿದ್ದ ನಮಗೆ ಹಣ ವಾಪಸ್‌ ನೀಡಿಲ್ಲ. ಅನ್ಯಾಯವಾಗಿದೆ’ ಎಂದು ಆರೋಪಿಸಿ ಕೆಲ ಮಹಿಳೆಯರು, ಪುಣ್ಯ ಮನೆಗೆ ಶುಕ್ರವಾರ ರಾತ್ರಿ ಮುತ್ತಿಗೆ ಹಾಕಿದರು. ಪುಣ್ಯ ಹಾಗೂ ಚಂದ್ರಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡು, ಹಣ ವಾಪಸ್‌ ನೀಡುವಂತೆ ಒತ್ತಾಯಿಸಿದರು. ಶನಿವಾರ ಬೆಳಿಗ್ಗೆಯೂ ಮನೆ ಬಳಿ ಸಂತ್ರಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

‘ಹಲವು ವರ್ಷಗಳಿಂದ ಪುಣ್ಯ ಚೀಟಿ ನಡೆಸುತ್ತಿದ್ದಾರೆ. ಅವರನ್ನು ನಂಬಿ ಹಣ ಕಟ್ಟಿದ್ದೆವು. ಇದೀಗ, ನಮ್ಮ ಹಣದಲ್ಲಿಯೇ ಪುಣ್ಯ, ಹೊಸ ಮನೆ ಖರೀದಿಸಿದ್ದಾರೆ. ಚೀಟಿ ಹಣ ವಾಪಸ್‌ ಕೇಳಿದರೆ, ಕೊಡುತ್ತಿಲ್ಲ’ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.

ದೂರು ನೀಡದ ಸಂತ್ರಸ್ತರು: ‘ಮನೆ ಬಳಿ ಗಲಾಟೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಸಂತ್ರಸ್ತರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಅಕ್ರಮವಾಗಿ ಚೀಟಿ ವ್ಯವಹಾರ ನಡೆಸಿ ವಂಚಿಸಿರುವ ಬಗ್ಗೆ ದೂರು ನೀಡುವಂತೆ ಸಂತ್ರಸ್ತರನ್ನು ಕೋರಲಾಗಿದೆ. ಆದರೆ, ಯಾರೊಬ್ಬರೂ ದೂರು ನೀಡುತ್ತಿಲ್ಲ. ದೂರು ಹಾಗೂ ಪುರಾವೆಗಳು ಇಲ್ಲದೇ, ಆರೋಪಿಗಳ ಮೇಲೆ ಕ್ರಮ ಜರುಗಿಸಲು ಸಾಧ್ಯವಿಲ್ಲ. ಯಾರಾದರೂ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT