ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸಿಗೆ: ಲೆಕ್ಕಕ್ಕುಂಟು, ಚಿಕಿತ್ಸೆಗಿಲ್ಲ!

ಬಿಬಿಎಂಪಿ ಪೋರ್ಟಲ್‌ ಹಾಗೂ ಖಾಸಗಿ ಆಸ್ಪತ್ರೆಗಳ ಸಂಖ್ಯೆಗೂ ಸಾಮ್ಯತೆ ಇಲ್ಲ
Last Updated 15 ಆಗಸ್ಟ್ 2020, 22:37 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ನಗರದಲ್ಲಿಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳದ ಬೆನ್ನಲ್ಲೇ ಕೇಳಿಬಂದ ಬಹುಮುಖ್ಯ ದೂರುಗಳು ಆಸ್ಪತ್ರೆಗಳ ಹಾಸಿಗೆ ಕೊರತೆ ಮತ್ತು ಚಿಕಿತ್ಸೆ ನಿರಾಕರಣೆ. ಹಾಸಿಗೆ ಇಲ್ಲದೆ, ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಹಲವರು ಸಾವಿಗೀಡಾದರು. ಆದರೆ, ಸರ್ಕಾರ ಮಾತ್ರಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಹಾಸಿಗೆಗಳು ಲಭ್ಯ ಇವೆ ಎಂದು ಹೇಳುತ್ತಲೇ ಬಂದಿದೆ. ವಾಸ್ತವ ಸ್ಥಿತಿ ಬೇರೆಯೇ ಇದೆ.

‘ಖಾಸಗಿ ಆಸ್ಪತ್ರೆಗಳು ತಮ್ಮ ಸಾಮರ್ಥ್ಯದ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿ ಗಳಿಗಾಗಿ ಮೀಸಲಿಡಬೇಕು’ ಎಂದು ಜೂನ್‌ನಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಜುಲೈ 7ರಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗಾಗಿ ಮೀಸಲಿಟ್ಟಿರುವ ಹಾಸಿಗೆಗಳಲ್ಲಿ ಶೇಕಡಾ 78ರಷ್ಟು ಖಾಲಿ ಇವೆ’ ಎಂದಿದ್ದರು.

ಆಗಸ್ಟ್ 4ರಂದು ಬಿಬಿಎಂಪಿಯ ಹಾಸಿಗೆ ಲಭ್ಯತೆಯ ಆಯಾ ಕ್ಷಣದ ಮಾಹಿತಿಯನ್ನು (https://apps.bbmpgov.in/covidbedstatus/) ಪರಿಶೀಲಿಸಿದಾಗಲೂ ಸಚಿವರು ಹೇಳಿದ ಸ್ಥಿತಿಯೇ ಸ್ಥಿತಿಯಿತ್ತು. ಕೋವಿಡ್ ರೋಗಿಗಳಿಗಾಗಿ ಮೀಸಲಿಟ್ಟ ಹಾಸಿಗೆಗಳಲ್ಲಿ ಶೇಕಡಾ 60ರಷ್ಟು ಖಾಲಿ ಇದ್ದವು.

ಪೋರ್ಟಲ್‌ನಲ್ಲಿರುವ ಮಾಹಿತಿ ಯಂತೆ ಒಟ್ಟು 13,225 ಹಾಸಿಗೆಗಳಲ್ಲಿ 7,889ರಲ್ಲಿ ರೋಗಿಗಳಿರಲಿಲ್ಲ. ಹೀಗೆ ಖಾಲಿ ಇದ್ದ ಹಾಸಿಗೆಗಳಲ್ಲಿ ಶೇಕಡಾ 96ಷ್ಟು ಅಂದರೆ 7,593ರಷ್ಟು ಹಾಸಿಗೆಗಳು ಖಾಸಗಿ ಆಸ್ಪತ್ರೆಗೆ ಸೇರಿದವುಗಳು. ಆದರೆ, ಈ ಸಂಖ್ಯೆಯಲ್ಲಿ ವ್ಯತ್ಯಾಸವಿದೆ.ಸರ್ಕಾರ ಪ್ರಕಟಿಸುವ ‘ಲಭ್ಯವಿರುವ ಹಾಸಿಗೆಗಳ ಪಟ್ಟಿ’ ಕೇವಲ ‘ನಿರೀಕ್ಷೆಯ ಪಟ್ಟಿ’ ಎಂದು ಐಎಎಸ್‌ ಅಧಿಕಾರಿ ತುಷಾರ್ ಗಿರಿನಾಥ್ ಕೂಡಾ ಒಪ್ಪುತ್ತಾರೆ. ಇವರ ನೇತೃತ್ವದಲ್ಲಿ ಕೋವಿಡ್ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಕೇಂದ್ರೀಕೃತ ಪಟ್ಟಿಯೊಂದನ್ನು ಬಿಬಿಎಂಪಿ ನಿರ್ವಹಿಸುತ್ತಿದೆ.

308 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗಾಗಿ ಪಟ್ಟಿ ಮಾಡಲಾಗಿದೆ. ಆದರೆ, ಅವುಗಳಲ್ಲಿ ಸಣ್ಣ ಪ್ರಮಾಣದಲ್ಲಿಯಾದರೂ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಸಂಖ್ಯೆ 120 ಮಾತ್ರ. ಉಳಿದ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸಿವೆ ಅಥವಾ ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬೇಕಿರುವ ಅಗತ್ಯ ಸೌಕರ್ಯಗಳೇ ಇಲ್ಲ ಎಂದು ಅವರು ಹೇಳುತ್ತಾರೆ.

‘ಕರ್ನಾಟಕದಲ್ಲಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಸರ್ಕಾರ ಕೆಪಿಎಂಇ ಸಂಖ್ಯೆಯೊಂದನ್ನು ನೀಡುತ್ತದೆ. ಈ ಸಂಖ್ಯೆಯನ್ನು ಹೊಂದಿರುವ ಪ್ರತೀ ಆಸ್ಪತ್ರೆಯ ಒಟ್ಟು ಹಾಸಿಗೆಗಳ ಶೇಕಡಾ 50ರಷ್ಟು ಸರ್ಕಾರ ರೂಪಿಸಿರುವ 'ಲಭ್ಯತಾ ಪಟ್ಟಿ'ಯಲ್ಲಿವೆ. ವಾಸ್ತವದಲ್ಲಿ ಈ ಹಾಸಿಗೆಗಳನ್ನು ರೋಗಿಗಳಿಗೆ ಒದಗಿಸುವುದಕ್ಕೆ ಹಲವು ಸವಾಲುಗಳಿವೆ’ ಎನ್ನುತ್ತಾರೆ ತುಷಾರ್‌ ಗಿರಿನಾಥ್.

ಬಿಬಿಎಂಪಿ: ಸಂಖ್ಯೆಯಲ್ಲಿ ವ್ಯತ್ಯಾಸ
ತಮ್ಮಲ್ಲಿರುವ ಹಾಸಿಗೆಗಳ ಸಂಖ್ಯೆಗೂ ಬಿಬಿಎಂಪಿ ಪೋರ್ಟಲ್‌ನಲ್ಲಿರುವ ಹಾಸಿಗೆಗಳ ಸಂಖ್ಯೆಗೂ ಸಂಬಂಧವೇ ಇಲ್ಲ ಎಂದು ಅನೇಕ ಆಸ್ಪತ್ರೆಗಳು ಹೇಳುತ್ತಿವೆ. ಉದಾಹರಣೆಗೆ, ಬಿಬಿಎಂಪಿ ಪೋರ್ಟಲ್‌ನ ಪ್ರಕಾರ– ಜಿಗಣಿಯಲ್ಲಿರುವ ಏಸ್-ಸುಹಾಸ್ ಆಸ್ಪತ್ರೆಯಲ್ಲಿ 25 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇವುಗಳಲ್ಲಿ ಎರಡು ಐಸಿಯು ಹಾಸಿಗೆಗಳು, ಇನ್ನೆರಡು ವೆಂಟಿಲೇಟರ್ ಸೌಲಭ್ಯವಿರುವ ಐಸಿಯು ಹಾಸಿಗೆಗಳು. ಪೋರ್ಟಲ್ ಮಾಹಿತಿಯಂತೆ ಎಲ್ಲ 25 ಹಾಸಿಗೆಗಳು ಖಾಲಿ ಇವೆ.

ಆದರೆ, ಸುಹಾಸ್ ಆಸ್ಪತ್ರೆಯ ಹಿರಿಯ ವೈದ್ಯರು ಹೇಳುವಂತೆ ಆಸ್ಪತ್ರೆಯಲ್ಲಿರುವುದು 10 ಹಾಸಿಗೆಗಳು ಮಾತ್ರ. ಅವೆಲ್ಲಕ್ಕೂ ವೆಂಟಿಲೇಟರ್ ಸೌಲಭ್ಯವಿದೆ. ಕೋವಿಡ್ ಪ್ರಕರಣಗಳು ಹೆಚ್ಚಲು ತೊಡಗಿದ ಆರಂಭದ ದಿನಗಳಿಂದಲೂ ಈ ಎಲ್ಲ ಹಾಸಿಗೆಗಳಲ್ಲೂ ರೋಗಿಗಳಿದ್ದಾರೆ.

ಇವು ಖಾಲಿಯಾದ ಕೆಲವೇ ಗಂಟೆಗಳಲ್ಲಿ ಹೊಸರೋಗಿಗಳು ದಾಖಲಾಗುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆಯ ಹಾಸಿಗೆಗಳಿವೆ. ಆದರೆ, ರೋಗಿಗಳನ್ನು ದಾಖಲಿಸಿಕೊಳ್ಳಲು ಬೇಕಿರುವಷ್ಟು ವೈದ್ಯರು ಮತ್ತು ದಾದಿಯರಿಲ್ಲ. ಅಷ್ಟೇ ಅಲ್ಲ, ಕೋವಿಡ್ ಹೊರತಾದ ಕಾಯಿಲೆಗಳಿಂದ ಬಳಲುತ್ತಿರುವವರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಲ್ಲೇಶ್ವರದಲ್ಲಿರುವ ಮಣಿಪಾಲ್ ನಾರ್ತ್‌ಸೈಡ್ ಆಸ್ಪತ್ರೆ ಮಾತ್ರ ತನ್ನಲ್ಲಿ ಲಭ್ಯವಿರುವ ಹಾಸಿಗೆಗಳ ಸಂಖ್ಯೆ ಮತ್ತು ಬಿಬಿಎಂಪಿ ಪೋರ್ಟಲ್‌ನಲ್ಲಿರುವ ಸಂಖ್ಯೆಗೆ ತಾಳೆಯಾಗುತ್ತದೆ ಎಂದು ಹೇಳುತ್ತದೆ. ‘ಇಡೀ ಆಸ್ಪತ್ರೆಯನ್ನೇ ಬಿಬಿಎಂಪಿ ನಿರ್ವಹಿಸುತ್ತಿದೆ. ನಾವಿಲ್ಲಿ ಕೋವಿಡ್‌ಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ಅಲ್ಲಿನ ವೈದ್ಯರು ಹೇಳಿದರು.

covidbeds.org ಸ್ಥಾಪಕ ಸಂತೋಷ್ ದೊಡ್ಡಯ್ಯ, ‘ನಾನು 150 ಆಸ್ಪತ್ರೆಗಳ ಜೊತೆ ಮಾತನಾಡಿದ್ದೇನೆ. ಅಷ್ಟೇ ಅಲ್ಲ, ಚಿಕಿತ್ಸೆ ಪಡೆಯಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ರೋಗಿಗಳ ಕತೆಗಳನ್ನೂ ಕೇಳಿದ್ದೇನೆ. ಸರ್ಕಾರ ಹೇಳುತ್ತಿರುವಷ್ಟು ಸಂಖ್ಯೆಯ ಹಾಸಿಗೆಗಳು ಲಭ್ಯ ಇಲ್ಲವೇ ಇಲ್ಲ’ ಎನ್ನುತ್ತಾರೆ.

(ಸಾರ್ವಜನಿಕ ಧನಸಹಾಯದಿಂದ ನಡೆಯುವ ಆನ್‌ಲೈನ್‌ ಸುದ್ದಿಮಾಧ್ಯಮ ಊರ್ವಾಣಿ ಪ್ರತಿಷ್ಠಾನದ ‘ಸಿಟಿಜನ್‌ ಮ್ಯಾಟರ್ಸ್’‌ ವೆಬ್‌ಸೈಟ್‌ನ ವರದಿಗಾರರು ಈ ವರದಿ ಸಿದ್ಧಪಡಿಸಿದ್ದಾರೆ. ಇಂಗ್ಲಿಷ್‌ನಲ್ಲಿರುವ ಮೂಲ ಲೇಖನವನ್ನು ಓದಲು ಈ ಲಿಂಕ್‌ ಬಳಸಬಹುದುhttps://bengaluru.citizenmatters.in/bengaluru-covid-government-private-hospital-beds-data-shortage-treatment-47488 )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT