ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆ

ಕೇಂದ್ರ ಸರ್ಕಾರ, ಹಿಂದೂ ವಿರೋಧಿ ಘೋಷಣೆ l ಮುಖಂಡರೊಂದಿಗೆ ಮಸೀದಿಗಳಲ್ಲಿ ಪೊಲೀಸ್ ಅಧಿಕಾರಿಗಳ ಸಭೆ
Last Updated 20 ಡಿಸೆಂಬರ್ 2019, 19:51 IST
ಅಕ್ಷರ ಗಾತ್ರ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ಇದರ ನಡುವೆಯೇ ಕೆಲ ವಿದ್ಯಾರ್ಥಿಗಳು ನಗರದ ಸರ್ಕಾರಿ ಕಲಾ ಹಾಗೂ ವಿಜ್ಞಾನ ಕಾಲೇಜು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದರು.

ಶುಕ್ರವಾರ ಸಂಜೆ ಕ್ಯಾಂಪಸ್‌ನಲ್ಲಿ ಸೇರಿದ್ದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾತ್ರಿಯವರೆಗೂ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಹಾಗೂ ಹಿಂದೂ ವಿರೋಧಿ ಘೋಷಣೆಗಳನ್ನು ಕೂಗಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ ವಿದ್ಯಾರ್ಥಿಗಳು, ‘**** ಹಿಂದುತ್ವ’, ‘ನಮಗೆ ಬೇಕು ಸ್ವಾತಂತ್ರ’ ಹಾಗೂ ‘ಪೊಲೀಸರಿಂದ ದೌರ್ಜನ್ಯಗೀಡಾದ ವಿದ್ಯಾರ್ಥಿಗಳ ಪರ ನಮ್ಮ ಹೋರಾಟ’ ಎಂಬ ಘೋಷಣಾ ಫಲಕಗಳನ್ನುಪ್ರದರ್ಶಿಸಿದರು.

ಬಿಗಿ ಭದ್ರತೆಯಲ್ಲಿ ತಣ್ಣಗಾದ ಹೋರಾಟ:ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದ ನೂರಾರು ಪ್ರತಿಭಟನಕಾರರು ಪುರಭವನ, ಮೈಸೂರು ಬ್ಯಾಂಕ್ ವೃತ್ತ, ಸ್ವಾತಂತ್ರ್ಯ ಉದ್ಯಾನ ಹಾಗೂ ಇತರೆಡೆಗಳಲ್ಲಿ ಗುರುವಾರ ಬೀದಿಗಿಳಿದಿದ್ದರು. ಪೊಲೀಸರು ಹಾಗೂ ಪ‍್ರತಿಭಟನಕಾರರ ನಡುವೆ ಜಟಾಪಟಿಯೇ ನಡೆದಿತ್ತು.

ಶುಕ್ರವಾರ ಮಾತ್ರ ಪುರಭವನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರ ಸರ್ಪಗಾವಲು ಇತ್ತು. ಠಾಣೆ ಸಿಬ್ಬಂದಿಯೊಂದಿಗೆ ಹೆಚ್ಚುವರಿ ಸಿಬ್ಬಂದಿಯನ್ನೂ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಪ್ರತಿಭಟನೆ ನಡೆಸಲು ಯತ್ನಿಸಿದವರನ್ನು ವಶಕ್ಕೆ ಪಡೆದು ಕರೆದೊಯ್ಯಲು ಮೂರು ಬಿಎಂಟಿಸಿ ಬಸ್‌ಗಳನ್ನು ಸ್ಥಳದಲ್ಲೇ ನಿಲ್ಲಿಸಿಕೊಳ್ಳಲಾಗಿತ್ತು.

ಪುರಭವನ ಎದುರು ಪ್ರತಿಭಟನೆ ನಡೆಸಲು ಬಂದವರನ್ನೆಲ್ಲ ಪೊಲೀಸರು ವಾಪಸು ಕಳುಹಿಸಿದರು. ಕೆಲವೇ ವ್ಯಕ್ತಿಗಳು ಒಂಟಿಯಾಗಿ ನಿಂತುಕೊಂಡು ಘೋಷಣೆ ಕೂಗಿ ಸ್ಥಳದಿಂದ ಹೊರಟು ಹೋದರು. ಸಂಜೆ ಕೆಲವರು ಮೇಣದ ಬತ್ತಿ ಹಚ್ಚಿ ಶಾಂತಿಯುತವಾಗಿಪ್ರತಿಭಟಿಸಿದರು. ‘ಮೇಣದ ಬತ್ತಿ ರೀತಿಯಲ್ಲೇ ದೇಶವನ್ನು ಸುಟ್ಟು ಹಾಕಲು ಕೇಂದ್ರ ಸರ್ಕಾರ ಕಾಯ್ದೆ ಜಾರಿಗೆ ತರುತ್ತಿದೆ’ ಎಂದು ಆರೋಪಿಸಿದರು.

ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ನಿಂದಾಗಿ ನಗರದಲ್ಲಿ ಪ್ರತಿಭಟನೆಯ ಕಿಚ್ಚು ಹೆಚ್ಚಾಗುವ ಸಾಧ್ಯತೆ
ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಸೂಕ್ಷ್ಮ ಪ್ರದೇಶಗಳಾದ ಪುರಭವನ, ಶಿವಾಜಿನಗರ, ಗೋರಿಪಾಳ್ಯ, ಫ್ರೇಜರ್ ಟೌನ್ ಹಾಗೂ ಸುತ್ತಮುತ್ತ ಪ್ರದೇಶಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು.

ಮಸೀದಿಗಳಲ್ಲೇ ಸಭೆ: ಶುಕ್ರವಾರವಾಗಿದ್ದರಿಂದ ನಮಾಜ್‌ಗಾಗಿ ನಗರದ ಪ್ರಮುಖ ಮಸೀದಿಗಳಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಮಸೀದಿಗಳ ಸುತ್ತಲೂ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮಸೀದಿಗಳಿಗೆ ಹೋಗಿದ್ದ ಡಿಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳು, ಮುಖಂಡರೊಂದಿಗೆ ಸಭೆ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ಆರ್.ಟಿ.ನಗರದ ಜಾಮಿಯಾ ಮಸೀದಿಗೆ ಭೇಟಿ ನೀಡಿದ್ದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್, ಮುಖಂಡರ ಜೊತೆ ಚಹಾ ಕುಡಿದು ಮಾತುಕತೆ ನಡೆಸಿದರು.

‘ಪ್ರತಿಭಟನೆ ನಮ್ಮ ಹಕ್ಕು. ದಯವಿಟ್ಟು ಪ್ರತಿಭಟನೆ ಮಾಡಲು ಅವಕಾಶ ನೀಡಿ’ ಎಂದು ಮುಖಂಡರು ಕೋರಿದರು. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಿಳಿಸಿಕೊಟ್ಟ ಶಶಿಕುಮಾರ್, ‘ಶಾಂತಿ ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗುಂಪು ಸೇರಿ ಪ್ರತಿಭಟನೆ ಮಾಡಲು ಅವಕಾಶವಿಲ್ಲ’ ಎಂದರು.

ಎಚ್‌ಎಸ್‌ಆರ್‌ ಲೇಔಟ್ ಮಸೀದಿ ಬಳಿ ಮುಸ್ಲಿಮ್‌ ಸಮುದಾಯದವರ ಜೊತೆ ಸಭೆ ನಡೆಸಿದ ಇನ್‌ಸ್ಪೆಕ್ಟರ್‌ ರಾಘವೇಂದ್ರ, ‘ಕಾಯ್ದೆ ಬಗ್ಗೆ ಸಾಮಾಜಿಕಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಅದಕ್ಕೆ ಕಿವಿಗೊಡಬಾರದು’ ಎಂದು ಕೋರಿದರು.

ಖಾಲಿ ಹಾಳೆ ರಿಲೆ: ಪೌರತ್ವ ಕಾಯ್ದೆ ವಿರುದ್ಧ ಪಾದರಕ್ಷೆಯ ಮುಂದೆ ಖಾಲಿ ಹಾಳೆಯನ್ನಿಟ್ಟು ಬನ್ನೇರುಘಟ್ಟ ರಸ್ತೆ ಐಐಎಂಬಿ ಸಂಜೆ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರವೂ ಪ್ರತಿಭಟನೆ ಮುಂದುವರಿಸಿದರು. ವಿದ್ಯಾರ್ಥಿಗಳು ಹೊರ ಹೋಗದಂತೆ ಕಾಲೇಜಿನ ಪ್ರವೇಶದ್ವಾರವನ್ನು ಮುಚ್ಚಲಾಗಿತ್ತು. ವಿದ್ಯಾರ್ಥಿ
ಗಳು ಸರದಿಯಂತೆ ಬಂದು ಖಾಲಿ ಹಾಳೆಯನ್ನು ತೆಗೆದುಕೊಂಡು ಮತ್ತೊಂದು ಖಾಲಿ ಹಾಳೆ ಇಟ್ಟು ರಿಲೆ ಮಾದರಿ ಪ್ರತಿಭಟನೆ ಮಾಡಿ ಗಮನ ಸೆಳೆದರು.

ರೇಣುಕಾಚಾರ್ಯ ವಿರುದ್ಧ ದೂರು

ಸಮಾಜದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹೇಳಿಕೆ ನೀಡಿರುವ ಆರೋಪದಡಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಮನೋಹರ್ ಎಂಬುವರು ವಿಧಾನಸೌಧ ಠಾಣೆಗೆ ಶುಕ್ರವಾರ ದೂರು ನೀಡಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸುತ್ತಿರುವವರು ಭಯೋತ್ಪಾದಕರು. ಕಾಂಗ್ರೆಸ್ ಪಕ್ಷ ಭಯೋತ್ಪಾದಕರಿಗೆ ಪೌರತ್ವ ನೀಡುವಂತೆ ಕಾಣುತ್ತಿದೆ’ ಎಂದು ರೇಣುಕಾಚಾರ್ಯ ಅವರು ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಮನೋಹರ್ ಒತ್ತಾಯಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್‌ಸ್ಪೆಕ್ಟರ್ ತರಾಟೆ; ವಿಡಿಯೊ ವೈರಲ್

ಎಸ್‌.ಜೆ.ಪಾರ್ಕ್ ಠಾಣೆ ಇನ್‌ಸ್ಪೆಕ್ಟರ್ ತನ್ವೀರ್ ಅಹ್ಮದ್ ಅವರು ಪ್ರತಿಭಟನನಿರತ ಮಹಿಳೆಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರವೀಂದ್ರ ಕಲಾಕ್ಷೇತ್ರದ ಎದುರು ಮಹಿಳೆಯೊಬ್ಬರು ಪ್ರತಿಭಟನೆ ಮಾಡುತ್ತಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳನ್ನು ಕರೆಯುತ್ತಿದ್ದರು. ಸ್ಥಳದಲ್ಲಿದ್ದ ಇನ್‌ಸ್ಪೆಕ್ಟರ್, ‘ಮೈ ನೇಮ್ ಇಸ್ ತನ್ವೀರ್ ಅಹ್ಮದ್. ಪ್ರತಿಭಟನೆ ಹೆಸರಿನಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರನ್ನು ಏಕೆ ಹಾಳು ಮಾಡುತ್ತೀರಾ’ ಎಂದು ತರಾಟೆಗೆ ತೆಗೆದುಕೊಂಡರು.

‘ನಗರದಲ್ಲಿ ನಿಷೇಧಾಜ್ಞೆ ಇದೆ. ಎಲ್ಲರೂ ಪಾಲಿಸಬೇಕು. ನೀವು ಉಲ್ಲಂಘಿಸಬೇಡಿ. ದಯವಿಟ್ಟು ಅರ್ಥ ಮಾಡಿಕೊಂಡು ಸಹಕರಿಸಿ’ ಎಂದು ಮನವಿ ಮಾಡಿ ಮಹಿಳೆಯನ್ನು ಸ್ಥಳದಿಂದ ಕಳುಹಿಸಿಕೊಟ್ಟರು.

ರಾಷ್ಟ್ರಗೀತೆ ಹಾಡಿದ ಡಿಸಿಪಿಚೇತನ್‌ಸಿಂಗ್ ರಾಥೋಡ್

ಪುರಭವನ ಎದುರು ಗುರುವಾರ ಪ್ರತಿಭಟನೆ ನಡೆಸುತ್ತಿದ್ದವರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ಅವರು ರಾಷ್ಟ್ರಗೀತೆ ಹಾಡಿದರು. ಈ ವಿಡಿಯೊ ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಡಿಸಿಪಿ ಕಾರ್ಯವೈಖರಿಗೆ ಮೆಚ್ಚುಗೆವ್ಯಕ್ತವಾಗುತ್ತಿದೆ.

ಪ್ರತಿಭಟನೆ ತೀವ್ರ ಸ್ವರೂ‍ಪ‍ಪಡೆದುಕೊಳ್ಳುವ ಮುನ್ಸೂಚನೆ ಅರಿತ ಡಿಸಿಪಿ ಅವರು ಪ್ರತಿಭಟನಕಾರರ ನಡುವೆಯೇ ನಿಂತು ಮನವೊಲಿಸಲು ಯತ್ನಿಸಿದರು. ಅದೇ ವೇಳೆ ರಾಷ್ಟ್ರಗೀತೆ ಹಾಡಿ ಎಲ್ಲರೂ ಎದ್ದು ನಿಂತು ಗೌರವ ನೀಡುವಂತೆ ಮಾಡಿದರು.

ಈ ಬಗ್ಗೆ ಮಾತನಾಡಿದ ಚೇತನ್‌ಸಿಂಗ್ ರಾಥೋಡ್, ‘ಪ್ರತಿಭಟನೆ ಸ್ಥಳದಲ್ಲಿ ಯಾವುದೇ ನಾಯಕರು ಇರಲಿಲ್ಲ. ಎಲ್ಲರನ್ನೂ ವೈಯಕ್ತಿಕವಾಗಿ ಮನವೊಲಿಸಬೇಕಾಗಿತ್ತು. ಆ ರೀತಿ ಮಾಡದಿದ್ದರೆ ಗಲಾಟೆ ಆಗುವ ಸಾಧ್ಯತೆ ಇತ್ತು’ ಎಂದರು.

‘ನಾನೂ ಭಾರತೀಯ. ನಾವೆಲ್ಲರೂ ಭಾರತೀಯರು. ನಮಗೆಲ್ಲ ಸಂವಿಧಾನ ಒಂದೇ. ಅದಕ್ಕೆ ತಲೆ ಬಾಗಿ ಕಾನೂನು ಸುವ್ಯವಸ್ಥೆ ಕಾಪಾಡೋಣವೆಂದು ಹೇಳಿದೆ. ಪ್ರತಿಭಟನೆಯಲ್ಲಿ ರಾಷ್ಟ್ರಧ್ವಜ ಇತ್ತು. ಅದನ್ನು ನೋಡಿ ರಾಷ್ಟ್ರಗೀತೆ ಹಾಡಿದೆ. ಅದಕ್ಕೆ ಎಲ್ಲರೂ ಧ್ವನಿಗೂಡಿಸಿದರು. ಇದು ನನ್ನ ಕರ್ತವ್ಯ. ನನ್ನೊಂದಿಗೆ ಎಸ್‌.ಜೆ. ಪಾರ್ಕ್‌ ಇನ್‌ಸ್ಪೆಕ್ಟರ್‌ ತನ್ವೀರ್ ಸಹ ಇದ್ದರು’ ಎಂದುಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT