ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ನಾವು–ನೀವು, ನೆರೆ–ಹೊರೆ ಕಾವಲು ಪಡೆ’ಗೆ ಕಮಿಷನರ್ ಬಿ.ದಯಾನಂದ ಚಾಲನೆ

Published : 24 ಆಗಸ್ಟ್ 2024, 16:00 IST
Last Updated : 24 ಆಗಸ್ಟ್ 2024, 16:00 IST
ಫಾಲೋ ಮಾಡಿ
Comments

ಬೆಂಗಳೂರು: ನಗರ ಪೊಲೀಸ್ ಇಲಾಖೆಯಿಂದ ಜಾರಿಗೆ ತಂದಿರುವ ‘ನಾವು –ನೀವು, ನೆರೆ–ಹೊರೆ ಕಾವಲು ಪಡೆ’ಗೆ ನಗರ ಪೊಲೀಸ್‌ ಕಮಿಷನರ್ ಬಿ.ದಯಾನಂದ ಅವರು ಚಾಲನೆ ನೀಡಿದರು.

ವಿಜಯನಗರದಲ್ಲಿ ಶನಿವಾರ ನಡೆದ ತಿಂಗಳ ಜನಸಂಪರ್ಕ ಸಭೆಯಲ್ಲಿ ಅವರು ನೂತನ ಯೋಜನೆಗೆ ಚಾಲನೆ ನೀಡಿದರು.

‘ನಾವು–ನೀವು, ನೆರೆ–ಹೊರೆ ಕಾವಲು ಪಡೆ’ಗೆ ಪ್ರತಿ ಠಾಣಾ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಮಂದಿ ಸ್ಥಳೀಯರನ್ನು ಆಯ್ಕೆ ಮಾಡಿಕೊಂಡಿದ್ದು, ಆ ವ್ಯಕ್ತಿಯ ಪೂರ್ವಾಪರ ಪರಿಶೀಲಿಸಲಾಗಿದೆ. ಅಲ್ಲದೆ, ಅವರಿಗೆ ಗುರುತಿನ ಚೀಟಿ ಹಾಗೂ ಟೀ–ಶರ್ಟ್ ವಿತರಣೆ ಮಾಡಲಾಗಿದೆ. ಬಿಡುವಿನ ವೇಳೆಯಲ್ಲಿ ನೇಮಕವಾದ ವ್ಯಕ್ತಿ ರಾತ್ರಿ ಪೊಲೀಸರೊಂದಿಗೆ ಗಸ್ತು ನಡೆಸುತ್ತಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಡ್ರಗ್ಸ್‌, ಸಂಚಾರ ಸೇರಿ ಇಲಾಖೆಯ ಜಾಗೃತಿ ಕಾರ್ಯಕ್ರಮಗಳಲ್ಲಿ ಅರಿವು ಮೂಡಿಸುತ್ತಾರೆ. ಸಂಚಾರ ದಟ್ಟಣೆ ಸಂದರ್ಭದಲ್ಲೂ ಅವರನ್ನು ಬಳಸಿಕೊಳ್ಳಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಗೆ ಎರಡರಿಂದ ಮೂರು ಪ್ರದೇಶದ ಹೊಣೆ ನೀಡಲಾಗಿದೆ. ಅವರು ಆ ಪ್ರದೇಶದಲ್ಲಿನ ಅಪರಾಧ, ಬೇರೆ ಬೇರೆ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಸದ್ಯ ಆ ವ್ಯಕ್ತಿಗೆ ಯಾವುದೇ ಸಂಭಾವನೆ ನೀಡುವುದಿಲ್ಲ. ಸ್ವಯಂ ಪ್ರೇರಿತವಾಗಿ ನೇಮಕಗೊಂಡಿದ್ದಾರೆ’ ಎಂದು ಹೇಳಿದರು.

ಜನಸಂ‍ಪರ್ಕ ಸಭೆಯಲ್ಲಿ ಕಂದಾಯ ನಿವೇಶನ ಮಾರಾಟ, ವ್ಹೀಲಿ, ವಾಹನ ನಿಲುಗಡೆ, ಸಂಚಾರ ದಟ್ಟಣೆ, ಕಾಮಗಾರಿ ವಿಳಂಬ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರು.

ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್‌ ಎಂ.ಎನ್.ಅನುಚೇತ್, ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್, ಸಂಚಾರ ವಿಭಾಗದ ಡಿಸಿಪಿ ಅನಿತಾ ಹದಣ್ಣನವರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT