ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಕೆರೆ ಗ್ರಾಮ ಪಂಚಾಯಿತಿ: ಬಹೂಪಯೋಗಿ ಸ್ವಚ್ಛ ಸಂಕೀರ್ಣ ಘಟಕಕ್ಕೆ ಚಾಲನೆ

Last Updated 25 ಜನವರಿ 2022, 2:26 IST
ಅಕ್ಷರ ಗಾತ್ರ

ಯಲಹಂಕ: ಹೆಸರಘಟ್ಟ ಹೋಬಳಿಯ ಅರಕೆರೆ ಗ್ರಾಮ ಪಂಚಾಯಿತಿ ವತಿಯಿಂದ ಅರಕೆರೆ ಗ್ರಾಮದಲ್ಲಿ ನಿರ್ಮಿಸಿರುವ ವಿನೂತನ ಬಹೂಪಯೋಗಿ ಸ್ವಚ್ಛ ಸಂಕೀರ್ಣ ಘಟಕವನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.

2 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಈ ಘಟಕದಲ್ಲಿ 40 ಬಗೆಯ ಕಸಗಳನ್ನು ಬೇರ್ಪಡಿಸಲು ವ್ಯವಸ್ಥೆ ಮಾಡಲಾಗಿದೆ. ಹಸಿ ಮತ್ತು ಒಣ ಕಸ ವಿಂಗಡಣೆ ಘಟಕ, 1.50 ಲಕ್ಷ ಲೀಟರ್ ಸಾಮರ್ಥ್ಯದ ಮಳೆ ನೀರು ಸಂಗ್ರಹ ಘಟಕ, ಅಡುಗೆ ಮನೆಯಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು 24 ಗಂಟೆಗಳಲ್ಲಿ ಗೊಬ್ಬರವನ್ನಾಗಿ ಪರಿವರ್ತಿಸುವ ‘ಸಾವಯವ ತ್ಯಾಜ್ಯ ಪರಿವರ್ತಕ ಯಂತ್ರ’, ಮೀನು ಸಾಕಾಣಿಕೆ ಹೊಂಡ, ಆಡಳಿತ ಕಚೇರಿ, ಸಭಾ ಭವನ ಹಾಗೂ ಎರೆಹುಳು ಗೊಬ್ಬರದ ತೊಟ್ಟಿ ಮುಂತಾದ ಸೌಕರ್ಯಗಳನ್ನು ಇಲ್ಲಿ ನಿರ್ಮಿಸಲಾಗಿದೆ.

ಸರ್ಕಾರದ ₹60 ಲಕ್ಷ ಅನುದಾನ ಸೇರಿದಂತೆ ದಾನಿಗಳಿಂದ ಸಂಗ್ರಹಿಸಿದ ದೇಣಿಗೆ ಹಣದಿಂದ ಆಧುನಿಕ ರೀತಿಯಲ್ಲಿ ಈ ಘಟಕ ನಿರ್ಮಿಸಲಾಗಿದೆ.

ಸೌಕರ್ಯಗಳನ್ನು ಉದ್ಘಾಟಿಸಿದ ಶಾಸಕ ಎಸ್.ಆರ್. ವಿಶ್ವನಾಥ್, ‘ಅರಕೆರೆ ಗ್ರಾಮ ಪಂಚಾಯಿತಿಯು ಒಂದೇ ವರ್ಷದಲ್ಲಿ ತೆರಿಗೆ ಸಂಗ್ರಹದಲ್ಲಿ ದಾಖಲೆ ಸ್ಥಾಪಿಸಿದೆ. ರಸ್ತೆ, ಚರಂಡಿ, ಸ್ವಚ್ಛತೆ ಮತ್ತು ಕೆರೆ ಅಭಿವೃದ್ಧಿಯಂತಹ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಗ್ರಾಮಗಳ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದರು.

‘ಕಸದ ವೈಜ್ಞಾನಿಕ ವಿಂಗಡಣೆ ಘಟಕ ನಿರ್ಮಿಸುವ ಮೂಲಕ ಅರಕೆರೆ ಗ್ರಾಮ ಪಂಚಾಯಿತಿಯು ಇಡೀ ಬೆಂಗಳೂರಿಗೆ ಮಾದರಿಯಾಗಿದೆ. ಬಿಬಿಎಂಪಿಯ ಎಲ್ಲ ವಾರ್ಡ್‌ಗಳಲ್ಲಿ ಇಂತಹ ಘಟಕಗಳನ್ನು ನಿರ್ಮಿಸಿದರೆ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ’ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಎಚ್.ಎಸ್. ಗೋಪಿನಾಥ್, ‘ಬೆಂಗಳೂರಿನ ಸುತ್ತಮುತ್ತಲಿರುವ ಗ್ರಾಮಪಂಚಾಯಿತಿಗಳಲ್ಲಿ ಕಸದ ಸಮಸ್ಯೆಯಿದೆ. ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಲು ಇಂತಹ ಘಟಕ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಎಲ್ಲೆಡೆ ಇಂತಹ ಘಟಕಗಳನ್ನು ನಿರ್ಮಿಸಲು ಸರ್ಕಾಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ಉಪಾಧ್ಯಕ್ಷರಾದ ಮಂಜುಳಾ ಅರಸೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಚಂದ್ರಪ್ಪ, ಕಾರ್ಯದರ್ಶಿ ಉಸ್ಮಾನ್ ಇದ್ದರು.

ಧನ್ವಂತರಿ ವನದಲ್ಲಿ 60 ಬಗೆಯ ಔಷಧೀಯ ಸಸ್ಯ

ಬಹೂಪಯೋಗಿ ಸ್ವಚ್ಛ ಸಂಕೀರ್ಣ ಘಟಕದ ಪಕ್ಕದಲ್ಲೇ ಧನ್ವಂತರಿ ವನ ನಿರ್ಮಿಸಲಾಗಿದೆ. ಇಲ್ಲಿ 60 ಬಗೆಯ ಔಷಧಿ ಸಸ್ಯಗಳನ್ನು ಬೆಳೆಸಲಾಗಿದೆ. ಘಟಕದ ಸುತ್ತಮುತ್ತ 5 ಸಾವಿರ ಸಸಿಗಳನ್ನು ನೆಡಲಾಗಿದೆ.

ಚಿತ್ತಾಕರ್ಷಕ ಕಲಾಕೃತಿಗಳು

ಬಹೂಪಯೋಗಿ ಸ್ವಚ್ಛ ಸಂಕೀರ್ಣ ಘಟಕದ ಪ್ರವೇಶ ದ್ವಾರದ ಬಳಿ ಕಲ್ಲಿನಿಂದ ನಿರ್ಮಿಸಿರುವ ಎತ್ತಿನ ಗಾಡಿ, ಸುಂದರ ಉದ್ಯಾನ, ನೀರಿನ ಕಾರಂಜಿ, ಸೈನಿಕರು, ರೈತ, ಜೋಡೆತ್ತು, ಮೇಕೆಗಳು ಹಾಗೂ ಪೌರಕಾರ್ಮಿಕರ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಈ ಮಾದರಿ ಕಲಾಕೃತಿಗಳು ಆಕರ್ಷಣೀಯವಾಗಿದ್ದು, ಜನರ ಗಮನ ಸೆಳೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT