ಹವಾಮಾನ ವೈಪರೀತ್ಯ: ಕಾಡಲಾರಂಭಿಸಿದ ವೈರಾಣು ಜ್ವರ

ಬೆಂಗಳೂರು: ಹವಾಮಾನ ವೈಪರೀತ್ಯ ಹಾಗೂ ವಾತಾವರಣದಲ್ಲಿ ಹೆಚ್ಚಿದ ದೂಳಿನ ಕಣಗಳಿಂದಾಗಿ ನಗರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜ್ವರ ಪೀಡಿತರಾಗುತ್ತಿದ್ದಾರೆ. ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ ಹೊರರೋಗಿಗಳಲ್ಲಿ ಶೇ 30ರಷ್ಟು ಮಂದಿ ಜ್ವರ ಸಂಬಂಧಿ ಸಮಸ್ಯೆಗಳಿಗೆ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ.
ನಗರದಲ್ಲಿ ಮಳೆ ತಗ್ಗಿದ ಬೆನ್ನಲ್ಲಿಯೇ ತಾಪಮಾನ ದಿನೇ ದಿನೇ ಕುಸಿತ ಕಾಣುತ್ತಿದೆ. ಇದರಿಂದಾಗಿ ಚಳಿಯ ತೀವ್ರತೆಯೂ ಹೆಚ್ಚಾಗುತ್ತಿದೆ. ವಾರದಿಂದ ತಂಪಾದ ವಾತಾವರಣ ಕಂಡುಬರುತ್ತಿದ್ದು, ರಾತ್ರಿ ಹಾಗೂ ಮುಂಜಾನೆಯ ಅವಧಿಯಲ್ಲಿ ಚಳಿ ಹೆಚ್ಚಳವಾಗುತ್ತಿದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದ್ದರೇ, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ವರೆಗೂ ಇಳಿಕೆಯಾಗುತ್ತಿದೆ. ಈ ರೀತಿ ತಾಪಮಾನದಲ್ಲಿ ಆಗುತ್ತಿರುವ ವ್ಯತ್ಯಾಸಕ್ಕೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅಸ್ವಸ್ಥರಾಗುತ್ತಿದ್ದಾರೆ. ಆಸ್ಪತ್ರೆಗಳ ದಾಖಲಾತಿಯಲ್ಲಿ ಅರ್ಧದಷ್ಟು ಮಂದಿ ವೈರಾಣು ಸೇರಿ ವಿವಿಧ ಮಾದರಿಯ ಜ್ವರ ಹಾಗೂ ಉಸಿರಾಟ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರಾಗಿದ್ದಾರೆ.
ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ವಿಕ್ಟೋರಿಯಾ, ವಾಣಿವಿಲಾಸ ಸೇರಿ ಪ್ರಮುಖ ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿನಿತ್ಯ ಸರಾಸರಿ 50 ಜ್ವರ ಪೀಡಿತರು ಭೇಟಿ ನೀಡುತ್ತಿದ್ದಾರೆ. ಅದೇ ರೀತಿ, ಮಣಿಪಾಲ್, ನಾರಾಯಣ ಹೆಲ್ತ್, ಅಪೋಲೊ, ಫೋರ್ಟಿಸ್, ಆಸ್ಟರ್ ಸೇರಿ ವಿವಿಧ ಖಾಸಗಿ ಆಸ್ಪತ್ರೆಗಳಿಗೂ ಜ್ವರದ ಚಿಕಿತ್ಸೆಗಾಗಿ ಬರುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ವಿವಿಧ ಕ್ಲಿನಿಕ್‌ಗಳಲ್ಲಿ ಸಹ ರೋಗಿಗಳ ದಟ್ಟಣೆ ಹೆಚ್ಚಾಗುತ್ತಿದೆ.
ಚಿಕ್ಕ ಮಕ್ಕಳಿಗೆ ಸಮಸ್ಯೆ: ‘ಚಳಿ ಯಿಂದಾಗಿ 6 ತಿಂಗಳೊಳಗಿನ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ವಾರ್ಡ್‌ನಲ್ಲಿನ ರೋಗಿಗಳಲ್ಲಿ ಶೇ 50 ರಷ್ಟು ಮಂದಿ ಜ್ವರ ಹಾಗೂ ಉಸಿರಾಟ ಸಂಬಂಧಿ ಸಮಸ್ಯೆಗಳಿಗೆ ಬಂದವರಾಗಿದ್ದಾರೆ. ಚಳಿ ಮತ್ತು ಬೆಚ್ಚನೆಯ ವಾತಾವರಣಕ್ಕೆ ಒಮ್ಮೆಲೆಯೇ ಹೊಂದಿಕೊಳ್ಳಲು ಎಲ್ಲರಿಗೂ ಸಾಧ್ಯವಾಗದು. ಇದರಿಂದಾಗಿ ಕೆಲವರು ಜ್ವರ ಪೀಡಿತರಾಗುತ್ತಿದ್ದಾರೆ’ ಎಂದು ಕೆ.ಸಿ. ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಲಕ್ಷ್ಮೀಪತಿ ತಿಳಿಸಿದರು.
‘ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ, ಸಾಮಾನ್ಯವಾಗಿ ಜ್ವರ ಮೊದಲು
ಮಕ್ಕಳಿಗೆ ಬರುತ್ತದೆ. ಬಳಿಕ ಮನೆಮಂದಿಗೆಲ್ಲ ಹರಡುತ್ತದೆ. ನೆಗಡಿ, ಕೆಮ್ಮು, ಮೈ–ಕೈ ನೋವಿನಿಂದ ಪ್ರಾರಂಭವಾಗಿ, ಐದಾರು ದಿನ ಬಾಧಿಸುತ್ತದೆ. ಜ್ವರ ಗಂಭೀರ ಸ್ವರೂಪ ಪಡೆದಾಗ ನ್ಯುಮೋನಿಯಾ ಆಗುವ ಸಾಧ್ಯತೆಗಳಿವೆ’ ಎಂದರು.
ವೈರಾಣು ಹರಡುವಿಕೆಗೆ ಸಹಕಾರಿ’
‘ಚಳಿಗಾಲದ ಅವಧಿಯಲ್ಲಿ ದೂಳು ವಾತಾವರಣದಲ್ಲಿಯೇ ಇರಲಿದೆ. ಇದರಿಂದಾಗಿಯೂ ಜ್ವರ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು. ತಾಪಮಾನದ ಏರಿಳಿತ ಮಾತ್ರ ವೈರಾಣು ಜ್ವರಕ್ಕೆ ಕಾರಣವಲ್ಲ. ಈ
ಅವಧಿಯು ವೈರಾಣು ಹರಡುವಿಕೆಗೆ ಸಹಕಾರಿಯಾಗಿರುತ್ತದೆ. ಆದ್ದರಿಂದ, ವೈರಾಣು ಹರಡುವಿಕೆ ತಡೆಗೆ ಕ್ರಮ ವಹಿಸಬೇಕು. ವೈರಾಣು ಬದಲಾಗುತ್ತಾ ಇರುತ್ತದೆ’ ಎಂದು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ತಜ್ಞ ವೈದ್ಯ ಡಾ. ನಿಜಗುಣ ತಿಳಿಸಿದರು.
‘ಈ ಜ್ವರವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮುಖಗವಸು ಧರಿಸುವಿಕೆಯಿಂದ ಸೋಂಕಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಹೊರಹೊಮ್ಮುವ ಹನಿ ಗಾಳಿ ಸೇರದಂತೆ ತಡೆಯಬಹುದು. ಅಂತರ ಕಾಯ್ದುಕೊಳ್ಳುವಿಕೆ, ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವಿಕೆ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ವೈರಾಣುವಿನಿಂದ ಹೆಚ್ಚಿನ ಪ್ರಮಾಣ ದಲ್ಲಿ ಅಸ್ವಸ್ಥರಾದವರಿಗೆ ಫ್ಲೂ ಲಸಿಕೆ ನೀಡಲಾಗುತ್ತದೆ’ ಎಂದು ಹೇಳಿದರು.
ವೈರಾಣು ಜ್ವರದ ಪ್ರಮುಖ ಲಕ್ಷಣಗಳು
l ತೀವ್ರ ಆಯಾಸ, ದಣಿವು
l ಮೈ ಕೈ ನೋವು
l ತಲೆನೋವು
l ನೆಗಡಿ, ಜ್ವರ
l ಕೆಮ್ಮು
l ಮೂಗು ಕಟ್ಟುವುದು
l ಕಣ್ಣುಗಳಲ್ಲಿ ಅಸ್ವಸ್ಥತೆ
l ಗಂಟಲು ಉರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.