ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲ ಕಡೆ ಸ್ವಯಂಚಾಲಿತ ಚಾಲನಾ ಪರೀಕ್ಷಾಪಥ: ರಾಮಲಿಂಗಾರೆಡ್ಡಿ

ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ
Published : 28 ಆಗಸ್ಟ್ 2024, 22:30 IST
Last Updated : 28 ಆಗಸ್ಟ್ 2024, 22:30 IST
ಫಾಲೋ ಮಾಡಿ
Comments

ಬೆಂಗಳೂರು: ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಗಳಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಸೋಮವಾರ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ, ವಿಜಯಪುರ, ಬೀದರ್‌, ಯಾದಗಿರಿ, ದಾವಣಗೆರೆಗಳಲ್ಲಿ ₹ 80 ಕೋಟಿ ವೆಚ್ಚದಲ್ಲಿ ಪರೀಕ್ಷಾ ಪಥ ನಿರ್ಮಿಸಲಾಗುತ್ತಿದೆ. ತುಮಕೂರು, ಯಲಹಂಕ, ಶಿರಸಿ, ಸಕಲೇಶಪುರ, ಕೆ.ಜಿ.ಎಫ್‌., ಚಿಂತಾಮಣಿ, ಸಾಗರ, ಗೋಕಾಕ, ರಾಣೆಬೆನ್ನೂರು, ದಾಂಡೇಲಿ, ಭಾಲ್ಕಿ, ಬೈಲಹೊಂಗಲಗಳಲ್ಲಿ ₹ 72.95 ಕೋಟಿ ವೆಚ್ಚದಲ್ಲಿ ಪರೀಕ್ಷಾ ಪಥ ನಿರ್ಮಾಣದ ಕಾಮಗಾರಿ ಕೈಗೊಳ್ಳಲಾಗಿದೆ. ಆರು ಕಡೆಗಳಲ್ಲಿ ಪಥ ನಿರ್ಮಿಸಲು ಈ ಬಾರಿಯ ಬಜೆಟ್‌ನಲ್ಲಿ ₹ 36 ಕೋಟಿ ಅನುದಾನ ಒದಗಿಸಲಾಗಿದೆ ಎಂದು ವಿವರಿಸಿದರು.

ಅರ್ಹತಾ ಪತ್ರ ನವೀಕರಣಕ್ಕಾಗಿ ಬರುವ ವಾಹನಗಳನ್ನು ಕಡ್ಡಾಯವಾಗಿ ಎಟಿಎಸ್‌ ಮೂಲಕ ತಪಾಸಣೆಗೆ ಒಳಪಡಿಸಬೇಕಾಗಿರುತ್ತದೆ. ಅದಕ್ಕಾಗಿ ಜಮೀನು ಲಭ್ಯ ಇರುವ 13 ಕಡೆಗಳಲ್ಲಿ ಡಿಬಿಎಫ್‌ಒಟಿ ಮಾದರಿಯಲ್ಲಿ, 19 ಕಡೆಗಳಲ್ಲಿ ಬಿಒಒ ಮಾದರಿಯಲ್ಲಿ ಸ್ವಯಂಚಾಲಿತ ವಾಹನ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಜಸ್ವ ಸಂಗ್ರಹಿಸಿ: ಆರ್ಥಿಕ ವರ್ಷದ ನಾಲ್ಕು ತಿಂಗಳಲ್ಲಿ ₹ 4325 ಕೋಟಿ ರಾಜಸ್ವ ಸಂಗ್ರಹಿಸಬೇಕಿದ್ದು, ₹ 3,534 ಕೋಟಿ (ಶೇ 81.71) ಸಂಗ್ರಹವಾಗಿದೆ. 2024–25ನೇ ಸಾಲಿನಲ್ಲಿ ಒಟ್ಟು ₹ 12,975.58 ಕೋಟಿ ಸಂಗ್ರಹಿಸುವ ಗುರಿ ನೀಡಲಾಗಿದೆ. ಶೇ 100ರಷ್ಟು ಸಂಗ್ರಹ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜುಲೈ 31ರ ವರೆಗೆ 1,39,460 ಪ್ರಕರಣಗಳನ್ನು ದಾಖಲಿಸಬೇಕಿತ್ತು. 1,21,943 ಪ್ರಕರಣಗಳು ದಾಖಲಾಗಿವೆ. ಹೊಸದಾಗಿ 85 ಮೋಟಾರು ವಾಹನ ನಿರೀಕ್ಷಕರನ್ನು ನೇಮಕ ಮಾಡಲಾಗಿದೆ.  ರಸ್ತೆ ಸುರಕ್ಷತಾ ನಿಧಿಯಿಂದ ಹೊಸ ವಾಹನಗಳನ್ನು ಖರೀದಿಸಲಾಗುತ್ತಿದೆ. ಇದೆಲ್ಲವನ್ನು ಬಳಸಿಕೊಂಡು ರಾಜಸ್ವ ಸಂಗ್ರಹದ ಗುರಿ ತಲುಪಬೇಕು ಎಂದು ಸೂಚನೆ ನೀಡಿದರು.

ಬಾಕಿ ಇರುವ ತೆರಿಗೆ ವಸೂಲಿ ಮಾಡಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತೆರಿಗೆ ಸುಸ್ತಿದಾರರ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲು ಕ್ರಮವಹಿಸಬೇಕು, ಬಾಕಿ ಇರುವ 6,77,348 ಪ್ರಕರಣಗಳನ್ನು ವಿಲೇವಾರಿಮಾಡಲು ಕ್ರಮವಹಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸೆಪ್ಟೆಂಬರ್‌ 10ರ ನಂತರ ಕಡ್ಡಾಯವಾಗಿ ಎಲ್ಲ ಖಾಸಗಿ ಸೇವಾ (ಪಿಎಸ್‌ವಿ) ವಾಹನಗಳಿಗೆ ವೆಹಿಕಲ್ ಲೊಕೇಶನ್‌ ಟ್ರ್ಯಾಕಿಂಗ್‌ ಡಿವೈಸ್‌ (ವಿಎಲ್‌ಟಿಡಿ) ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT