ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಂತಿಕೆ ಹಾಸ್ಯ ಸಾಹಿತ್ಯ ಸೃಷ್ಟಿಗೆ ಅಡ್ಡಿ: ವೈದೇಹಿ

ಲೇಖಕಿ ವೈದೇಹಿ ಅಭಿಮತ lಟಿ. ಸುನಂದಮ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ
Last Updated 26 ಜುಲೈ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಪುರುಷರೂ ನಾಚುವಂತೆ ಹಾಸ್ಯ ಸಾಹಿತ್ಯವನ್ನು ಸೃಷ್ಟಿಸಬಲ್ಲ ಕೌಶಲ ಮಹಿಳೆಯರಿಗಿದೆ. ಆದರೆ, ಸಮಾಜದಲ್ಲಿನ ಮಡಿವಂತಿಕೆ ನಮಗೆ ಅಡ್ಡಿಯಾಗಿದೆ’ ಎಂದು ಕಥೆಗಾರ್ತಿ ವೈದೇಹಿ ತಿಳಿಸಿದರು.

ಟಿ. ಸುನಂದಮ್ಮ ಸ್ಮಾರಕ ಪ್ರತಿಷ್ಠಾನ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಿ. ಸುನಂದಮ್ಮ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಈ ‍ಪ್ರಶಸ್ತಿ ₹30 ಸಾವಿರ ನಗದನ್ನು ಒಳಗೊಂಡಿದೆ.

‘ತಾವೇ ಬುದ್ಧಿವಂತರು ಎನ್ನುವ ಅಹಂ ಪುರುಷ ಸಾಹಿತಿಗಳ ತಲೆಗೆ ಹೋಗಿದೆ. ಹಾಸ್ಯ ಸಾಹಿತ್ಯ ಬರವಣಿಗೆಗೆ ಮಹಿಳೆಯರಿಗೆ ಮುಕ್ತ ಸ್ವಾತಂತ್ರ್ಯವಿಲ್ಲ. ಇದರಿಂದಾಗಿ ನಮ್ಮ ಸಾಹಿತ್ಯ ನಾಲ್ಕು ಗೋಡೆಯ ಮಧ್ಯದಲ್ಲಿಯೇ ಮರೆಯಾಗುತ್ತಿದೆ. ಇಷ್ಟಾಗಿಯೂ ಸುನಂದಮ್ಮ ಅವರು ತಮ್ಮ ಅನುಭವಕ್ಕೆ ಬಂದ ಘಟನೆಗಳನ್ನು ಹಾಸ್ಯದ ಮೂಲಕ ಹೊರ ಪ್ರಪಂಚಕ್ಕೆ ಅನಾವರಣ ಮಾಡಿದರು’ ಎಂದರು.

‘ಭಾರತೀಯ ಸಂಸ್ಕೃತಿಯಲ್ಲಿ ನಗು ಹಾಸುಹೊಕ್ಕಾಗಿದೆ. ನಾವು ಸ್ಮಶಾ ನದಲ್ಲಿ ಕೂಡಾ ನಗುತ್ತೇವೆ. ಅಷ್ಟೇ ಅಲ್ಲ, ನಗುನಗುತ್ತಲೇ ಮೃತರನ್ನು ನೆನಪಿಸಿಕೊಂಡು ದುಃಖಪಡುತ್ತೇವೆ. ಅಷ್ಟೇ ಅಲ್ಲ, ಹದಿನಾಲ್ಕನೇ ದಿನದಂದು ರುಚಿಯಾದ ಊಟ ಮಾಡಿ, ನಮ್ಮಿಂದ ದೂರವಾದವರನ್ನು ಸ್ಮರಿಸುತ್ತೇವೆ’ ಎಂದರು.

‘ಸಮಾಜದಲ್ಲಿಹೆಣ್ಣು ಎಂದರೆ ಕೇವಲ ದೇಹ ಎಂಬ ಮನಸ್ಥಿತಿ ಹಲ ವರಲ್ಲಿದೆ. ಇದರಿಂದಾಗಿ ತುಟಿಯಂಚಲ್ಲಿ ನಗೆ, ಕಣ್ಣಲ್ಲಿ ನೀರು ಹಾಕುತ್ತಾ ಇಡೀ ಸ್ತ್ರೀ ಸಮಾಜ ಸಾಗುತ್ತಿದೆ. ಶ್ರುತಿ ತಪ್ಪಿದ ಸಮಾಜದಲ್ಲಿ ಪ್ರತಿಯೊಬ್ಬರೂ ಹಣಕ್ಕೆ ಮಾರು ಹೋಗುತ್ತಿದ್ದಾರೆ. ಇದರಿಂದಾಗಿ ಮಹಿಳೆಯರು ಅಸಹಾಯಕರಾಗಿದ್ದು, ತೋರಿಕೆಯ ನಗು ಕಾಣುತ್ತಿದ್ದೇವೆ. ಇನ್ನೊಂದೆಡೆ ಪದವಿಗಳನ್ನು ನೀಡುವ ವಿಶ್ವವಿದ್ಯಾಲಯಗಳು ಹೆಣ್ಣನ್ನು ಗೌರವಿಸುವ ಬಗೆ ತಿಳಿಸಿಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಹೋಲಿಕೆ ಸರಿಯಲ್ಲ: ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಮಾತನಾಡಿ,‘ಸಾಹಿತ್ಯ ಪ್ರಪಂಚದಲ್ಲಿ ಸ್ತ್ರೀ ಬರಹ ವಿಭಿನ್ನವಾಗಿ ನಿಲ್ಲುತ್ತದೆ. ಹಾಗಾಗಿಯೇ ಅಕ್ಕಮಹಾದೇವಿಶರಣರಲ್ಲಿ ಮುಂಚೂಣಿಯಲ್ಲಿದ್ದಾರೆ. ಯಾವುದೇ ಕಾರಣಕ್ಕೂ ಸ್ತ್ರೀ ಸಾಹಿತ್ಯವನ್ನು ಪುರುಷರ ಸಾಹಿತ್ಯದೊಂದಿಗೆ ಬೆರೆಸಿ ನೋಡಬಾರದು. ಸ್ತ್ರೀ ಬರಹಗಳು ಸಹಾನುಭೂತಿಯಿಂದ ಕೂಡಿರುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT