ಮಂಗಳವಾರ, ನವೆಂಬರ್ 12, 2019
20 °C
ಹಸಿದವರಿಗೆ ಉಚಿತ ಆಹಾರ ತಲುಪಿಸುವ ವ್ಯವಸ್ಥೆ

ಹಸಿವು ನೀಗಿಸಲಿದೆ ‘ಸಮುದಾಯ ಫ್ರಿಜ್’

Published:
Updated:
Prajavani

ಬೆಂಗಳೂರು: ಒಂದೆಡೆ, ಮನೆಗಳಲ್ಲಿ ಹಾಗೂ ಸಭೆ ಸಮಾರಂಭಗಳಲ್ಲಿ ಉಳಿದ ಆಹಾರ ಕಸದ ಬುಟ್ಟಿ ಸೇರುತ್ತಿದ್ದರೆ, ಇನ್ನೊಂದೆಡೆ, ಹಸಿದವರು ಒಪ್ಪೊತ್ತಿನ ಊಟಕ್ಕಾಗಿ ಕಂಡಕಂಡವರ ಬಳಿ ಅಂಗಲಾಚುವ ಸ್ಥಿತಿ ಇದೆ.

ಹಸಿವಿನ ಬೇಗೆಯಿಂದ ನರಳುವವರ ನೋವನ್ನು ಅರ್ಥೈಸಿಕೊಂಡ ಇಸ್ಲಾಮಿಕ್ ಇನ್ಫರ್ಮೇಷನ್‌ ಸೆಂಟರ್‌ ಹಾಗೂ 365 ಸ್ಮೈಲ್ಸ್‌ ಸಂಸ್ಥೆ ಸೇರಿ ಪೋಲಾಗುವ ಆಹಾರವನ್ನು ಹಸಿದವರಿಗೆ ತಲುಪಿಸಲು ‘ಸಮುದಾಯ ಫ್ರಿಜ್‌’ ವ್ಯವಸ್ಥೆ ಮಾಡಿವೆ.

ನಗರದ ಕಲಾಸಿಪಾಳ್ಯ ಮುಖ್ಯರಸ್ತೆಯ ಎನ್‌ಎಚ್‌ಕೆ ರಸ್ತೆಯಲ್ಲಿರುವ ಕಬಾಬ್‌ ಮ್ಯಾಜಿಕ್‌ ಮುಂಭಾಗದಲ್ಲಿ ಅಳವಡಿಸಿರುವ ‘ಸಮುದಾಯ ಫ್ರಿಜ್‌’ ಹಸಿದ ಹೊಟ್ಟೆಗಳನ್ನು ತಣಿಸಲಿದೆ.

‘ಸಮುದಾಯ ಫ್ರಿಜ್‌’ ಅನ್ನು ಭಾನುವಾರ ಉದ್ಘಾಟಿಸಿದ ಶಾಸಕ ಉದಯ್‌ ಬಿ.ಗರುಡಾಚಾರ್‌, ‘ಬಡವರಿಗೆ ಆಹಾರ ತಲುಪಿಸಲು ಇಂತಹ ವ್ಯವಸ್ಥೆ ಸಹಾಯಕ. ಈ ರೀತಿಯ ಫ್ರಿಜ್‌ಗಳನ್ನು ನಗರದ ಎಲ್ಲ ಭಾಗಗಳಲ್ಲೂ ಸ್ಥಾಪಿಸಬೇಕು. ಇದಕ್ಕಾಗಿ ಸಂಸ್ಥೆಗಳು ಮುಂದೆ ಬರಬೇಕು’ ಎಂದರು.

‘ಈ ಫ್ರಿಜ್‌ ದಿನದ 24 ಗಂಟೆಗಳೂ ಕಾರ್ಯನಿರ್ವಹಿಸಲಿದೆ. ಇಲ್ಲಿ ಯಾರು ಬೇಕಾದರೂ ಆಹಾರವನ್ನು ತಂದು ಇಡಬಹುದು. ಹಸಿದ ಯಾರಾದರೂ ಇಲ್ಲಿರುವ ಆಹಾರ ತೆಗೆದುಕೊಳ್ಳಬಹುದು’ ಎಂದು ಇಸ್ಲಾಮಿಕ್ ಇನ್‌ಫರ್ಮೇಶನ್‌ ಸೆಂಟರ್‌ ಸಂಸ್ಥೆಯ ಅಧ್ಯಕ್ಷ ಜುಬೇದ್‌ ಖಾನ್ ತಿಳಿಸಿದರು.

ಶಾಸಕ ಎನ್.ಎ.ಹ್ಯಾರಿಸ್‌, ಪಾಲಿಕೆ ಸದಸ್ಯೆ ಪ್ರತಿಭಾ ಧನರಾಜ್‌ ಭಾಗವಹಿಸಿದ್ದರು.

*
ಫ್ರಿಜ್‌ ಉದ್ಘಾಟನೆಯಾದ ಕೆಲವೇ ಗಂಟೆಯಲ್ಲಿ ಅನೇಕರು ಬಿರಿಯಾನಿ, ಬೇಕರಿ ತಿನಿಸುಗಳು ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ಇಟ್ಟಿದ್ದಾರೆ. ಆಹಾರ ಪಡೆಯಲು ಜನರು ಸಂಜೆ ವೇಳೆ ಸಾಲುಗಟ್ಟಿ ನಿಂತಿದ್ದರು
–ಜುಬೇದ್‌ ಖಾನ್, ಇಸ್ಲಾಮಿಕ್ ಇನ್ಫರ್ಮೇಷನ್‌ ಸೆಂಟರ್‌ ಅಧ್ಯಕ್ಷ

***

ಫ್ರಿಜ್‌ನಲ್ಲಿ ಏನೇನು ಇಡಬಹುದು?
ಮನೆಯಲ್ಲಿ ಉಳಿದ ಊಟ
ಬೇಕರಿ ಪದಾರ್ಥಗಳು
ತಿಂಡಿ ತಿನಿಸು
ಹಣ್ಣು
ಹಣ್ಣಿನ ಜ್ಯೂಸ್‌

ಪ್ರತಿಕ್ರಿಯಿಸಿ (+)