ಶನಿವಾರ, ಮೇ 21, 2022
23 °C

ಮೂವರು ಅಧಿಕಾರಿಗಳ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಗುತ್ತಿಗೆ ನೀಡಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯ ಎಸ್‌ಸಿ, ಎಸ್‌ಟಿ ಗುತ್ತಿಗೆದಾರರ ಸಂಘ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸೋಮವಾರ ದೂರು ನೀಡಿದೆ.

ರಾಜ್ಯ ಸರ್ಕಾರ ತುಂಡು ಗುತ್ತಿಗೆ ನೀಡುವುದನ್ನು ನಿರ್ಬಂಧಿಸಿ 2016ರ ಜೂನ್‌ 25ರಂದು ಸುತ್ತೋಲೆ ಹೊರಡಿಸಿದೆ. ಇದನ್ನು ಉಲ್ಲಂಘಿಸಿ ತುಂಡು ಗುತ್ತಿಗೆ ನೀಡುವ ಅಧಿಕಾರಿ, ಎಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ. ಆದರೆ, ಪಿಡಬ್ಲ್ಯುಡಿಯಲ್ಲಿ ಸುತ್ತೋಲೆ ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಪಿಡಬ್ಲ್ಯುಡಿ ನಂ 2 ಕಟ್ಟಡಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಕೆ. ವೆಂಕಟೇಶ್‌, ಸಹಾಯಕ ಕಾರ್ಯ‍ಪಾಲಕ ಎಂಜಿನಿಯರ್‌ ಭುವನ ಪ್ರಸಾದ್‌ ಹಾಗೂ ಸಿಬ್ಬಂದಿ ಗಂಗಲಕ್ಷ್ಮಿ ಅವರ ವಿರುದ್ಧ ಸಂಘ ದೂರು ನೀಡಿದ್ದು, ಐಜಿಪಿ ಚಂದ್ರಶೇಖರ್‌ ಪರಿಶೀಲಿಸುತ್ತಿದ್ದಾರೆ.

ಕಾಮಗಾರಿಗಳನ್ನು ₹ 5 ಲಕ್ಷದೊಳಗೆ ವಿಂಗಡಿಸಿ, ತಮಗೆ ಬೇಕಾದವರಿಗೆ ಗುತ್ತಿಗೆ ನೀಡುವ ಮೂಲಕ ಈ ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ. ಕಾರ್ಯಾದೇಶ ನೀಡಲು ಶೇ 16ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಸುಮಾರು ₹ 100 ಕೋಟಿ ಮೊತ್ತದ ಕಾಮಗಾರಿಗಳನ್ನು ವಿಂಗಡಿಸಿ ಗುತ್ತಿಗೆ ನೀಡಲಾಗಿದೆ. ನಿಯಮದ ಪ್ರಕಾರ ಇ– ಟೆಂಡರ್‌ ಕರೆಯಬೇಕಿತ್ತು. ಪ್ರಮುಖ ದಿನ ಪತ್ರಿಕೆಗಳಲ್ಲಿ ಟೆಂಡರ್‌ ಪ್ರಕಟಣೆ ನೀಡಬೇಕಿತ್ತು. ಟೆಂಡರ್‌ ಬುಲೆಟಿನ್‌ ಅನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕಿತ್ತು. ಈ ನಿಯಮಗಳನ್ನು ಪಾಲಿಸದೆ ಇರುವುದರಿಂದ ಬೊಕ್ಕಸಕ್ಕೆ ಶೇ 30ರಷ್ಟು ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಕರ್ನಾಟಕ ಪಾರದರ್ಶಕ ಕಾಯ್ದೆ ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ. ರಾಜ್ಯ ಎಸ್‌ಸಿ, ಟಸ್‌ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಎನ್‌. ಮಹದೇವಸ್ವಾಮಿ ನೇತೃತ್ವದ ನಿಯೋಗವು ಬೆಳಿಗ್ಗೆ ಖನಿಜ ಭವನದಲ್ಲಿರುವ ಎಸಿಬಿ ಕಚೇರಿಗೆ ತೆರಳಿ ದೂರು ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು