ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಕಿ ಕೆರೆ ‘ಕಾಂಕ್ರಿಟೀಕರಣ’: ಮಲ್ಲೇಶ್ವರ ನಿವಾಸಿಗಳ ವಿರೋಧ

Last Updated 13 ಮಾರ್ಚ್ 2022, 21:43 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಯಾಂಕಿ ಕೆರೆ ಹಾಗೂ 18ನೇ ತಿರುವಿನಲ್ಲಿರುವ ಮೈದಾನವನ್ನು ‘ಕಾಂಕ್ರಿಟೀಕರಣ’ ಮಾಡಲು ಹೊರಟಿರುವ ಬಿಬಿಎಂಪಿ ಕ್ರಮದ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಗೋಕಾಕ್‌ ಉದ್ಯಾನದಿಂದ ಸ್ಯಾಂಕಿ ಟ್ಯಾಂಕ್‌ವರೆಗೂ ಪಾದಯಾತ್ರೆ ನಡೆಸಿದ ಸ್ಥಳೀಯರು ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನಮಗೆ ಕಾಂಕ್ರೀಟ್‌ ಪಾದಚಾರಿ ಮಾರ್ಗಗಳು ಬೇಕಿಲ್ಲ. ‘ವಾಟರ್‌ ಫಾಲ್ಸ್‌’ನ ಅಗತ್ಯವೂ ಇಲ್ಲ. ನೈಸರ್ಗಿಕದತ್ತ ಕೆರೆ ನಮ್ಮ ಬೇಡಿಕೆ. ನಾವು ಕೆರೆಯ ದಂಡೆಯಲ್ಲಿ ಬೆಳೆದಿರುವ ಹಸಿರು ಹುಲ್ಲು ಹಾಸಿನ ಮೇಲೆಯೇ ಕುಳಿತು ಪ್ರಕೃತಿಯ ಸೌಂದರ್ಯ ಆಸ್ವಾದಿಸುತ್ತೇವೆ. ಅಭಿವೃದ್ಧಿ ಹೆಸರಿನಲ್ಲಿ ಸ್ಯಾಂಕಿ ಕೆರೆಯ ಸೌಂದರ್ಯ ನಾಶಗೊಳಿಸಬೇಡಿ’ ಎಂದು ಮಲ್ಲೇಶ್ವರ ಸೋಷಿಯಲ್‌ ತಂಡದ ಸುಚಿತ್ರ ದೀಪ್‌ ಒತ್ತಾಯಿಸಿದರು.

‘18ನೇ ತಿರುವಿನಲ್ಲಿರುವ ಮೈದಾನಕ್ಕೆ ವಿಶೇಷ ಇತಿಹಾಸವಿದೆ. ಅದರ ಸುತ್ತಲೂ 41 ‘ಪ್ಲಡ್‌ ಲೈಟ್‌’ ಅಳವಡಿಸಲು ಬಿಬಿಎಂಪಿಯವರು ಮುಂದಾಗಿದ್ದಾರೆ. ಸಿಮೆಂಟ್‌ ಗೋಡೆಗಳನ್ನು ಕಟ್ಟಲು ನಿರ್ಧರಿಸಿದ್ದಾರೆ. ಇದರ ಬದಲು ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಿದರೆ ಎಲ್ಲರಿಗೂ ಪ್ರಯೋಜನವಾಗುತ್ತದೆ’ ಎಂದು ಪ್ರತಿಭಟನಾಕಾರರು ತಿಳಿಸಿದರು.

‘ದೂರದೃಷ್ಟಿಯಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದರ ವಿರುದ್ಧ ಪ್ರತಿಭಟಿಸುತ್ತಿರುವ ಶಕ್ತಿಗಳ ಹಿಂದೆ ರಾಜಕೀಯ ದುರುದ್ದೇಶವಿದೆ’ ಎಂದು ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.

‘ಮಲ್ಲೇಶ್ವರ ಕ್ಷೇತ್ರ 15 ವರ್ಷಗಳ ಹಿಂದೆ ಹೇಗಿತ್ತು? ಈಗ ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸ್ಥಳೀಯರ ಹೆಸರಿನಲ್ಲಿ ಪ್ರತಿಭಟನೆ ಮಾಡುವುದನ್ನು ನಿಲ್ಲಿಸಬೇಕು’ ಎಂದರು.

‘ಸ್ಯಾಂಕಿ ಕೆರೆಯನ್ನು ವಾಯುವಿಹಾರಿಗಳ ನೆಚ್ಚಿನ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸ್ಯಾಂಕಿ ಟ್ಯಾಂಕ್‌ ವಾಯುವಿಹಾರಿಗಳ ಸಂಘದವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಅಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT