ಸೋಮವಾರ, ಆಗಸ್ಟ್ 15, 2022
26 °C

ಸರ್ಕಾರ ವಜಾಕ್ಕೆ ಕಾಂಗ್ರೆಸ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿಯಲ್ಲಿನ ಆಂತರಿಕ ಕಲಹದಿಂದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ತಕ್ಷಣವೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ, ‘ರಾಜ್ಯದಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಡಿಯೂರಪ್ಪ ಅವರಿಗೆ ಸ್ವಾಭಿಮಾನ ಇದ್ದಿದ್ದರೆ ಈಗಾಗಲೇ ರಾಜೀನಾಮೆ ನೀಡಬೇಕಿತ್ತು. ಅವರು ಅಧಿಕಾರಕ್ಕೆ ಅಂಟಿ ಕುಳಿತಿರುವುದನ್ನು ನೋಡಿದರೆ ಲೂಟಿಯಲ್ಲಿ ನಿರತರಾಗಿರುವುದು ಸ್ಪಷ್ಟವಾಗುತ್ತದೆ’ ಎಂದರು.

‘ಜಲ ಸಂಪನ್ಮೂಲ ಇಲಾಖೆಯ ₹ 20,000 ಕೋಟಿ ಮೊತ್ತದ ಕಾಮಗಾರಿಗಳ ಟೆಂಡರ್‌ ಕುರಿತು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎಚ್‌. ವಿಶ್ವನಾಥ್‌ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಶೇಕಡ 25ರಿಂದ 30ರಷ್ಟು ಲಂಚ ಪಡೆಯಲಾಗುತ್ತಿದೆ ಎಂದು ದೂರಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಕೂಡ ಹಣ ಲೂಟಿಗೆ ಬಂದಿದ್ದಾರಾ ಎಂಬ ಅನುಮಾನ ಮೂಡುತ್ತದೆ’ ಎಂದು ಉಗ್ರಪ್ಪ ಹೇಳಿದರು.

ಕಾಂಗ್ರೆಸ್‌ ಮುಖಂಡ ಎಚ್‌.ಎಂ. ರೇವಣ್ಣ ಮಾತನಾಡಿ, ‘ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಜಮೀನು ಖರೀದಿಯಲ್ಲೂ ಹಗರಣ ನಡೆದಿದೆ. ಟ್ರಸ್ಟ್‌ನಲ್ಲಿರುವ ಬಿಜೆಪಿ ಮುಖಂಡ ಅನಿಲ್‌ ಮಿಶ್ರಾ ಮತ್ತು ಋಷಿಕೇಶ್ ಉಪಾಧ್ಯಾಯ ಕೂಡ ಇದಕ್ಕೆ ಸಾಕ್ಷಿಯಾಗಿದ್ದಾರೆ. ಧರ್ಮ, ಸಂಸ್ಕೃತಿ ಹೆಸರಿನಲ್ಲೂ ಲೂಟಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಂಯೋಜಕರಾದ ಎಂ. ರಾಮಚಂದ್ರಪ್ಪ ಮತ್ತು ಎಂ.ಎ. ಸಲೀಂ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು