ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್ 28ಕ್ಕೆ ಸುಕೇಶ್‌ ಚಂದ್ರಶೇಖರ್‌ ಕಾರುಗಳ ಹರಾಜು

₹ 308 ಕೋಟಿ ಬಾಕಿ ವಸೂಲಿಗೆ ಮುಂದಾದ ಆದಾಯ ತೆರಿಗೆ ಇಲಾಖೆ
Published 23 ನವೆಂಬರ್ 2023, 0:10 IST
Last Updated 23 ನವೆಂಬರ್ 2023, 0:10 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿ ಎಂಬುದಾಗಿ ಬಿಂಬಿಸಿಕೊಂಡು ನೂರಾರು ಕೋಟಿ ರೂಪಾಯಿಗಳನ್ನು ವಂಚಿಸಿರುವ ಆರೋಪದಡಿ ದೆಹಲಿ ಕಾರಾಗೃಹದಲ್ಲಿ ಬಂಧನದಲ್ಲಿರುವ ಸುಕೇಶ್‌ ಚಂದ್ರಶೇಖರ್‌ ಬಾಕಿ ಇರಿಸಿಕೊಂಡಿರುವ ತೆರಿಗೆ ವಸೂಲಿಗೆ ಆತನ 12 ಐಷಾರಾಮಿ ವಾಹನಗಳನ್ನು ಆದಾಯ ತೆರಿಗೆ ಇಲಾಖೆ ಇದೇ 28 ರಂದು ಹರಾಜು ಮಾಡುತ್ತಿದೆ.

ರ‍್ಯಾನ್‌ಬ್ಯಾಕ್ಸಿ ಔಷಧ ಉತ್ಪಾದನಾ ಕಂಪನಿಯ ಪ್ರವರ್ತಕರಿಗೆ ಜಾಮೀನು ಕೊಡಿಸುವುದಾಗಿ ನಂಬಿಸಿ ಅವರ ಪತ್ನಿಯರಿಂದ ₹ 200 ಕೋಟಿ ಸುಲಿಗೆ ಮಾಡಿದ ಆರೋಪ ಸುಕೇಶ್‌ ಮೇಲಿದೆ. ಈ ಪ್ರಕರಣದಲ್ಲಿ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹಣದ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಕೂಡ ಸುಕೇಶ್‌ ವಿರುದ್ಧ ತನಿಖೆ ನಡೆಸುತ್ತಿದೆ.

ಆರೋಪಿಯು ಸರ್ಕಾರದ ವಿವಿಧ ಸಂಸ್ಥೆಗಳಿಗೆ ಬಾಕಿ ಇರಿಸಿಕೊಂಡಿರುವ ತೆರಿಗೆ ಮತ್ತು ಶುಲ್ಕಗಳನ್ನು ವಸೂಲಿ ಮಾಡುವುದಕ್ಕಾಗಿ ಆದಾಯ ತೆರಿಗೆ ಇಲಾಖೆಯು ಆತನ ಹಲವು ಸ್ವತ್ತುಗಳನ್ನು ಜಪ್ತಿ ಮಾಡಿತ್ತು. ಅವುಗಳಲ್ಲಿ ಸೇರಿರುವ 12 ಕಾರುಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಬಿಡ್‌ ಆಹ್ವಾನಿಸಿದೆ.

ಬಿಎಂಡಬ್ಲ್ಯು–5, ರೇಂಜ್‌ ರೋವರ್‌, ಜಾಗ್ವಾರ್‌ ಎಕ್ಸ್‌ಕೆಆರ್‌ ಕೂಪೆ, ಪೋರ್ಷೆ, ಬೆಂಟ್ಲಿ, ರೋಲ್ಸ್‌ ರಾಯ್ಸ್‌, ಲ್ಯಾಂಬೋರ್ಗಿನಿ, ಡುಕಾಟಿ ಡಿಯಾವೆಲ್‌, ಟೊಯೊಟಾ ಪ್ರಾಡೊ, ಫಾರ್ಚೂನರ್‌, ಇನ್ನೊವಾ, ನಿಸ್ಸಾನ್‌ ಟಿಯಾನ ಕಾರುಗಳು ಹರಾಜಿಗಿಟ್ಟ ವಾಹನಗಳಲ್ಲಿ ಸೇರಿವೆ. ನಿಸಾನ್‌ ಟಿಯಾನ ಕಾರಿಗೆ ಕನಿಷ್ಠ ₹ 2.03 ಲಕ್ಷ ದರ ನಿಗದಿಪಡಿಸಿದ್ದರೆ, ರೋಲ್ಸ್‌ ರಾಯ್ಸ್‌ಗೆ ₹ 1.74 ಕೋಟಿ ಕನಿಷ್ಠ ದರ ನಿಗದಿ ಮಾಡಲಾಗಿದೆ.

₹ 308 ಕೋಟಿ ಬಾಕಿ: ‘ಸುಕೇಶ್‌ ಚಂದ್ರಶೇಖರ್‌ 2012ರಿಂದ 2018ರವರೆಗಿನ ಅವಧಿಗೆ ಸಂಬಂಧಿಸಿದಂತೆ ₹ 308.48 ಕೋಟಿ ಬಾಕಿ ಇರಿಸಿಕೊಂಡಿದ್ದ. ಈ ಮೊತ್ತವನ್ನು ವಸೂಲಿ ಮಾಡುವುದಕ್ಕಾಗಿ ಆತನ ಕಾರುಗಳನ್ನು ಹರಾಜು ಮಾಡಲಾಗುತ್ತಿದೆ. ತಮಿಳುನಾಡು, ಕೇರಳ ಸೇರಿದಂತೆ ಹಲವೆಡೆ ವಶಪಡಿಸಿಕೊಂಡ ವಾಹನಗಳನ್ನು ಬೆಂಗಳೂರಿಗೆ ತಂದು, ಆದಾಯ ತೆರಿಗೆ ಕಚೇರಿಯಲ್ಲಿ ಇರಿಸಲಾಗಿದೆ. ಎಲ್ಲ ವಾಹನಗಳೂ ಸುಸ್ಥಿತಿಯಲ್ಲಿವೆ’ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಇಲಾಖೆ ವಶದಲ್ಲಿರುವ ಕಾರುಗಳು
ಆದಾಯ ತೆರಿಗೆ ಇಲಾಖೆ ವಶದಲ್ಲಿರುವ ಕಾರುಗಳು

ಪರಿಶೀಲನೆಗೆ ಅವಕಾಶ ವಾಹನಗಳ ಸ್ಥಿತಿ ಕುರಿತು ಆಸಕ್ತರು ಖುದ್ದು ಪರಿಶೀಲನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಬಿಡ್‌ ಸಲ್ಲಿಸಲು ಆಸಕ್ತರಾಗಿರುವ ಹಲವರು ಬುಧವಾರ ಕಚೇರಿಗೆ ಭೇಟಿ ನೀಡಿ ವಾಹನಗಳನ್ನು ವೀಕ್ಷಿಸಿದ್ದಾರೆ. ಇನ್ನೂ ಎರಡು ದಿನಗಳ ಕಾಲ ವಾಹನಗಳ ವೀಕ್ಷಣೆ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT