ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ಸ್ಟೆಬಲ್ ಪರೀಕ್ಷೆ ಅಕ್ರಮದ ಅನುಮಾನ: ನಾಲ್ವರು ವಶಕ್ಕೆ

Published 10 ಸೆಪ್ಟೆಂಬರ್ 2023, 16:04 IST
Last Updated 10 ಸೆಪ್ಟೆಂಬರ್ 2023, 16:04 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ನಡೆದ ಸಶಸ್ತ್ರ ಮೀಸಲು ಪೊಲೀಸ್ ಪಡೆಯ (ಸಿಎಆರ್/ಡಿಎಆರ್) ಪರೀಕ್ಷೆಯಲ್ಲಿ ಅಕ್ರಮ ಎಸಗಬಹುದೆಂಬ ಅನುಮಾನದ ಹಿನ್ನೆಲೆಯಲ್ಲಿ ನಾಲ್ವರನ್ನು ಸಿಸಿಬಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.

‘ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಬಸವರಾಜ್, ದಿಲೀಪ್, ತಿಮ್ಮೇಗೌಡ ಹಾಗೂ ಚಿಕ್ಕನಾಯಕನಹಳ್ಳಿಯ ಹರಿಪ್ರಸಾದ್‌ನನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘2018 ರಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮದಲ್ಲಿ ಇದೇ ನಾಲ್ವರು ಆರೋಪಿಗಳು ಭಾಗಿಯಾಗಿದ್ದರು. ಅದೇ ಪ್ರಕರಣದಲ್ಲಿ ನಾಲ್ವರನ್ನೂ ಬಂಧಿಸಲಾಗಿತ್ತು. ಇದೀಗ, ಸಿಎಆರ್ ಹಾಗೂ ಡಿಎಆರ್ ಪರೀಕ್ಷೆಯಲ್ಲೂ ಪುನಃ ಅಕ್ರಮ ಎಸಗಬಹುದೆಂಬ ಅನುಮಾನ ಹೆಚ್ಚಿತ್ತು. ಇದೇ ಕಾರಣಕ್ಕೆ ವಿಶೇಷ ಕಾರ್ಯಾಚರಣೆ ನಡೆಸಿ ನಾಲ್ವರನ್ನು ವಶಕ್ಕೆ ಪಡೆಯಲಾಯಿತು’ ಎಂದು ತಿಳಿಸಿವೆ.

‘ರಾಜ್ಯದಾದ್ಯಂತ ಪರೀಕ್ಷೆ ಸುಗಮವಾಗಿ ನಡೆದಿದೆ. ಅಕ್ರಮ ನಡೆದಿರುವ ಬಗ್ಗೆ ಸದ್ಯಕ್ಕೆ ಯಾವುದೇ ದೂರುಗಳು ಕೇಳಿಬಂದಿಲ್ಲ’ ಎಂದು ಹೇಳಿವೆ.

ಪರೀಕ್ಷೆ ಆರಂಭಕ್ಕೂ ಮುನ್ನ ವಶಕ್ಕೆ: ‘ಹೈದರಾಬಾದ್ ಕರ್ನಾಟಕದ ಸಶಸ್ತ್ರ ಮೀಸಲು ಪೊಲೀಸ್ ಪಡೆಯ (ಸಿಎಆರ್/ಡಿಎಆರ್) ಕಾನ್‌ಸ್ಟೆಬಲ್‌ ಹುದ್ದೆಗಾಗಿ ರಾಜ್ಯದಾದ್ಯಂತ ಲಿಖಿತ ಪರೀಕ್ಷೆ ಇತ್ತು. ಆರೋಪಿಗಳು, ಕೆಲ ಅಭ್ಯರ್ಥಿಗಳಿಂದ ಹಣ ಪಡೆದು ಒಂದೆಡೆ ಸೇರಿಸಿ ಪರೀಕ್ಷೆ ಬರೆಸಬಹುದೆಂಬ ಅನುಮಾನವಿತ್ತು’ ಎಂದು ಕಮಿಷನರ್ ಬಿ. ದಯಾನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪರೀಕ್ಷೆ ಆರಂಭಕ್ಕೂ ಮುನ್ನವೇ ಸಿಸಿಬಿ ಪೊಲೀಸರ ವಿಶೇಷ ತಂಡ, ನಾಲ್ವರನ್ನೂ ವಶಕ್ಕೆ ಪಡೆದಿದೆ. ಎಲ್ಲರನ್ನೂ ಬೆಂಗಳೂರಿಗೆ ಕರೆತಂದು ಪರೀಕ್ಷೆ ಮುಗಿಯುವವರೆಗೂ ಸುಪರ್ದಿಯಲ್ಲಿಟ್ಟುಕೊಂಡಿತ್ತು. ನಂತರ, ಮುಂಜಾಗ್ರತಾ ಕ್ರಮದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT