ಭಾನುವಾರ, ಜನವರಿ 16, 2022
28 °C

ಸಂವಿಧಾನ ಉಳಿಯಲಿ, ಬ್ರಾಹ್ಮಣ್ಯ ತೊಲಗಲಿ: ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ಅವರ ಮೇಲೆ ನಡೆಯುತ್ತಿರುವ ಮಾನಸಿಕ ದಾಳಿ ಹಾಗೂ ವಾಕ್‌ ಸ್ವಾತಂತ್ರ್ಯ ಹರಣ ವಿರೋಧಿಸಿ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿಯು (ಕರ್ನಾಟಕ) ಶುಕ್ರವಾರ ಜಾಥಾ ಹಮ್ಮಿಕೊಂಡಿತ್ತು.   

ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆದ ಜಾಥಾದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ‘ಜೈ ಭೀಮ್‌, ಜೈ ಸಂವಿಧಾನ’,  ‘ಬ್ರಾಹ್ಮಣ್ಯವೇ ಭಾರತ ಬಿಟ್ಟು ತೊಲಗಲಿ’, ‘ಬಾಡೆ ನಮ್‌ ಗಾಡು‘ ಹೀಗೆ ವಿವಿಧ ಬರಹಗಳಿರುವ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

‘ಸಂವಿಧಾನ ಪರ ಹೋರಾಟಕ್ಕೆ ಜಯವಾಗಲಿ’, ‘ಹಂಸಲೇಖ ಪರ ಹೋರಾಟಕ್ಕೆ ಜಯವಾಗಲಿ’ ಎಂಬ ಘೋಷ ವಾಕ್ಯಗಳೂ ಪ್ರತಿಧ್ವನಿಸಿದವು. ‌

‘ಸಾಮಾಜಿಕ ಜಾಲತಾಣಗಳಲ್ಲಿ ಅಸಂವಿಧಾನಿಕ ವರ್ತನೆ ತೋರುವ, ವೈಯಕ್ತಿಕ ತೇಜೋವಧೆಗೆ ಮುಂದಾಗುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಟ ಚೇತನ್‌, ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಅನೇಕ ಪ್ರಗತಿಪರ ಚಿಂತಕರ ಮೇಲೆ ದಾಖಲಾಗಿರುವ ದುರುದ್ದೇಶಪೂರಿತ ಹಾಗೂ ಆಧಾರ ರಹಿತ ಪ್ರಕರಣಗಳನ್ನು ರದ್ದುಗೊಳಿಸಬೇಕು. ಹಂಸಲೇಖ ವಿರುದ್ಧ ದೂರು ದಾಖಲಿಸಿ ಸಮಾಜದಲ್ಲಿ ಧ್ವೇಷ ಭಾವನೆ ಉಲ್ಬಣಿಸುವಂತೆ ಮಾಡಿರುವವರ ಮೇಲೆ ದೂರು ನೀಡಲಾಗಿದ್ದು, ಅದನ್ನು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.  

‘ಹನುಮಂತನಗರ ಹಾಗೂ ಬಸವನಗುಡಿ ಠಾಣೆಯಲ್ಲಿರುವ ಸಿಬ್ಬಂದಿ ಒಂದು ಜಾತಿಯ ಪರ ಅದರಲ್ಲೂ ಬ್ರಾಹ್ಮಣ್ಯವನ್ನು ಪೋಷಿಸುವವರ ಪರ ಕೆಲಸ ಮಾಡುತ್ತಿದ್ದಾರೆ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಬ್ರಾಹ್ಮಣೇತರರ ವಿರುದ್ಧ ದುರುದ್ದೇಶಪೂರಿತ ದೂರುಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಅಲ್ಲಿನ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದ ಎಲ್ಲಾ ಪೊಲೀಸ್‌ ಠಾಣೆಗಳು ಮತ್ತು ನ್ಯಾಯಾಲಯಗಳಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆ/ಪೀಠಿಕೆಯನ್ನು ಕಡ್ಡಾಯವಾಗಿ (ಇಂಗ್ಲಿಷ್‌ ಮತ್ತು ಕನ್ನಡ) ಅಳವಡಿಸಿ ಪ್ರತಿನಿತ್ಯ ಅದನ್ನು ಓದಿ ಅನುಸರಿಸುವಂತಾಗಬೇಕು’ ಎಂದೂ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು