ಬುಧವಾರ, ಜನವರಿ 29, 2020
30 °C
ನಿರಂತರ ನಾಲ್ಕು ಗಂಟೆ ಪಾರಾಯಣ

ಸಹಸ್ರ ಕಂಠಗಳಲ್ಲಿ ಮೊಳಗಿದ ‘ಭಗವದ್ಗೀತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಕ್ಕಳು, ವೃದ್ಧರು ಎಂಬ ಭೇದ ಭಾವವಿಲ್ಲದೆ ವಿವಿಧ ವಯೋಮಾನದವರು ಸತತ ನಾಲ್ಕು ಗಂಟೆ ‘ಸಂಪೂರ್ಣ ಭಗವದ್ಗೀತಾ ಪಾರಾಯಣ’ ನಡೆಸಿದರು. ಸಹಸ್ರ ಕಂಠಗಳಲ್ಲಿ ಮೊಳಗಿದ ಗೀತೆಯ ಶ್ಲೋಕಗಳು ಬಸವನಗುಡಿ ಪರಿಸರದಲ್ಲಿ ಅನುರಣನಗೊಂಡವು. 

ಗೀತಾ ಜಯಂತಿ ಅಂಗವಾಗಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮವು ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ`ಭಗವದ್ಗೀತಾ ಪಾರಾಯಣ ಮಹಾಯಜ್ಞ'ದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡರು. ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ವೇದಿಕೆಯ ಮೇಲೆ 300 ಮಂದಿ ಸಾಮೂಹಿಕವಾಗಿ ಗೀತೆ ಪಠಿಸಿದರು.

ಕುರುಕ್ಷೇತ್ರದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡುವ ಚಿತ್ರ, ಶ್ರೀಕೃಷ್ಣದ ವಿಶ್ವರೂಪದರ್ಶನದ ಚಿತ್ರದಿಂದ ಅಲಂಕೃತಗೊಂಡಿದ್ದ ವಿಶಾಲವಾದ ವೇದಿಕೆಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀಕೃಷ್ಣನ 8 ಅಡಿ ಎತ್ತರದ ವಿಗ್ರಹ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಪುರುಷರು ಹಳದಿ ಕುರ್ತಾ ಹಾಗೂ ಬಿಳಿ ಪಂಚೆ ಧರಿಸಿ, ಮಹಿಳೆಯರು ಹಸಿರು ಸೀರೆ ಮತ್ತು ಹಳದಿ ದುಪ್ಪಟ್ಟ ತೊಟ್ಟು ಪಾರಾಯಣದಲ್ಲಿ ಪಾಲ್ಗೊಂಡರು. ವೇದಿಕೆಯ ಮುಂಭಾಗದಲ್ಲಿ ಸಂಪೂರ್ಣ ಪಾರಾಯಣಾಸಕ್ತರಿಗಾಗಿಯೇ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು ಕೂಡ ಭಕ್ತಿಯಿಂದ ಪಾರಾಯಣ ಪಠಿಸಿದ್ದು ವಿಶೇಷವಾಗಿತ್ತು. ದತ್ತ ವಿಜಯಾನಂದ ಸ್ವಾಮೀಜಿ , ಸಂಸದ ತೇಜಸ್ವಿ ಸೂರ್ಯ, ವಿದ್ವಾನ್ ಅರಳು ಮಲ್ಲಿಗೆ ಪಾರ್ಥಸಾರಥಿ, ಆಶ್ರಮದ ಕಾರ್ಯನಿರ್ವಾಹಕ ಟ್ರಸ್ಟಿ ಸಿ.ಎಸ್. ನರಸಿಂಹ ಮತ್ತಿತರರು ಭಾಗವಹಿಸಿದರು. 

ಬೆಳಿಗ್ಗೆ 9 ಗಂಟೆಗೆ ಆರಂಭವಾದ ಪಾರಾಯಣ ಸಂಜೆ 4ಗಂಟೆಗೆ ಸಂಪನ್ನವಾಯಿತು. ಸಂಜೆ 6ರಿಂದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನೇತೃತ್ವದಲ್ಲಿ ಕೃಷ್ಣ ಭಜನೆ ಹಾಗೂ ಸಂಕೀರ್ತನೆಗಳು ನಡೆದವು.

ಗೀತೆಯಿಂದ ಜೀವನ ಶೈಲಿ ಬದಲು 

‘ಗೀತಾ ಪಾರಾಯಣ ನಡೆಸುವುದು, ಅದನ್ನು ಆಲಿಸುವುದು ಹಾಗೂ ಇನ್ನೊಬ್ಬರಿಗೆ ಕಂಠಪಾಠ ಮಾಡಿಸುವುದರಿಂದ ಅಶ್ವಮೇಧ ಮಹಾಯಜ್ಞ ಮಾಡಿದಷ್ಟು ಪುಣ್ಯ ಲಭಿಸಲಿದೆ. ಮನುಷ್ಯನ ಜೀವನ ಶೈಲಿಯನ್ನೂ ಬದಲಾಸುವ ಶಕ್ತಿ ಭಗವದ್ಗೀತೆಯಲ್ಲಿದೆ’ ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು. 

‘ಎಲ್ಲ ಉಪನಿಷತ್ತು, ವೇದಾಂತಗಳ ಸಾರವೇ ಭಗವದ್ಗೀತೆ. ಹಿಂಸೆ ತ್ಯಜಿಸಿ, ಅಹಿಂಸಾ ಮಾರ್ಗದೆಡೆಗೆ ಮನುಷ್ಯನನ್ನು ಕರೆದೊಯ್ಯುವ ಶಕ್ತಿ ಅದಕ್ಕಿದೆ. 2015ರಲ್ಲಿ ಇಬ್ಬರಿಂದ ಪ್ರಾರಂಭವಾಗಿದ್ದ ಗೀತಾ ಪಾರಾಯಣದ ವಿರಾಟ್ ಸಂಕಲ್ಪ, ಇಂದು ಜಗತ್ತಿನೆಲ್ಲೆಡೆ ಹರಡಿದೆ’ ಎಂದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು