ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಟೆಕ್ಟಿವ್‌– ಸೆಕ್ಯೂರಿಟಿ ಏಜೆನ್ಸಿಗಳಿಂದಲೇ ಶಿಕ್ಷಕರು!

ಬಿಬಿಎಂಪಿ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸದ ಶಿಕ್ಷಣ ಇಲಾಖೆ
Published 27 ಮೇ 2024, 1:13 IST
Last Updated 27 ಮೇ 2024, 1:13 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಶಾಲಾ–ಕಾಲೇಜುಗಳಿಗೆ ಶಿಕ್ಷಣ ಇಲಾಖೆ ಮೂಲಕವೇ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿದೆ. ಡಿಟೆಕ್ಟಿವ್‌– ಸೆಕ್ಯೂರಿಟಿ ಏಜೆನ್ಸಿಗಳಿಂದಲೇ ಮತ್ತೆ ಹೊರಗುತ್ತಿಗೆ ಮೇಲೆ ಶಿಕ್ಷಕರನ್ನು ನೇಮಿಸಿಕೊಳ್ಳಲು ಆದೇಶ ನೀಡಲಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು 2024-25ನೇ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಇಲಾಖೆಯಿಂದ ಬಿಬಿಎಂಪಿ ಶಾಲೆ ಕಾಲೇಜುಗಳಿಗೆ ಶಿಕ್ಷಕರನ್ನು ಒದಗಿಸಲಾಗುವುದು. ಮೂಲ ಸೌಕರ್ಯಗಳನ್ನು ಬಿಬಿಎಂಪಿ ಒದಗಿಸಲಿದೆ ಎಂದು ಹೇಳಿದ್ದರು.

ಈ ಪ್ರಕ್ರಿಯೆಗೆ ಸುಮಾರು 700ಕ್ಕೂ ಹೆಚ್ಚು ಹೊರಗುತ್ತಿಗೆ ಶಿಕ್ಷಕರು ವಿರೋಧ ವ್ಯಕ್ತಪಡಿಸಿದ್ದರು. ಶಾಲೆ ಬಹಿಷ್ಕರಿಸಿ ಪ್ರತಿಭಟಿಸಿದ್ದರು. ಆದರೂ, ಇದಕ್ಕೆ ಮಣಿಯದ ಸರ್ಕಾರ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರು, ‘ಅನರ್ಹ ಶಿಕ್ಷಕರಿದ್ದಾರೆ. ಅವರೆಲ್ಲ ಬೇಡ. ಶಿಕ್ಷಣ ಇಲಾಖೆಯಿಂದಲೇ ಶಿಕ್ಷಕರು ಬರುತ್ತಾರೆ. ಈಗಿರುವವರು ಅರ್ಹತೆ ಇದ್ದರೆ ಎಸ್‌ಡಿಎಂಸಿ ಮೂಲಕ ನೇಮಕವಾಗಬಹುದು. ಅವರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ’ ಎಂದು ಹೇಳಿದ್ದರು.

ಆದರೆ, ಇದ್ಯಾವ ಪ್ರಕ್ರಿಯೆಯೂ ಆಗದೆ, ಹಿಂದಿನ ಏಜೆನ್ಸಿಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ಒದಗಿಸಲು ಬಿಬಿಎಂಪಿ ಆದೇಶ ಹೊರಡಿಸಿದೆ.

2023-24ನೇ ಶೈಕ್ಷಣಿಕ ವರ್ಷದಲ್ಲಿ ಗುತ್ತಿಗೆ ಪಡೆದಿದ್ದ ಏಜೆನ್ಸಿಗಳಿಗೇ 2024-25ನೇ ಶೈಕ್ಷಣಿಕ ವರ್ಷಕ್ಕೂ ಹೊರಗುತ್ತಿಗೆ ಶಿಕ್ಷಕರನ್ನು ಒದಗಿಸಲು ಆದೇಶ ನೀಡಲಾಗಿದೆ. ಹೊಸ ಟೆಂಡರ್ ಪ್ರಕ್ರಿಯೆ ನಡೆಸದೆ ಅಕ್ರಮವಾಗಿ ಹಿಂದಿನ ವರ್ಷದ ಗುತ್ತಿಗೆದಾರರಿಗೆ ಆದೇಶ ನೀಡಲಾಗಿದೆ.

ದಕ್ಷಿಣ ವಲಯ ಮತ್ತು ಆರ್‌.ಆರ್‌. ನಗರ ವಲಯಕ್ಕೆ ‘ಅಪ್ಪು ಡಿಟೆಕ್ಟಿವ್ ಆ್ಯಂಡ್‌ ಸೆಕ್ಯೂರಿಟಿ ಸರ್ವೀಸ್‌’, ಪೂರ್ವ ವಲಯಕ್ಕೆ ‘ಡಿಟೆಕ್ಟ್‌ವೆಲ್ ಆ್ಯಂಡ್‌ ಸೆಕ್ಯೂರಿಟಿ ಸರ್ವಿಸ್ ಪ್ರೈ ಲಿಮಿಟೆಡ್‌’ ಹಾಗೂ ಪಶ್ಚಿಮ ವಲಯಕ್ಕೆ ‘ಶಾರ್ಪ್ ವಾಚ್ ಇನ್‌ವೆಸ್ಟಿಂಗ್ ಸೆಕ್ಯೂರಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟಿಡ್’ಗಳು ಹೊರಗುತ್ತಿಗೆ ಶಿಕ್ಷಕರನ್ನು ಒದಗಿಸಲು ಬಿಬಿಎಂಪಿ ಆಯಾ ವಲಯದ ಕಾರ್ಯಪಾಲಕ ಎಂಜಿನಿಯರ್‌ ಕಾರ್ಯಾದೇಶ ನೀಡಿದ್ದಾರೆ.

ಈ ಏಜೆನ್ಸಿಗಳು ಶಿಕ್ಷಕರಿಗೆ ಸಂದೇಶ ಕಳುಹಿಸಿ, ದಾಖಲೆಗಳನ್ನು ಸಲ್ಲಿಸಿ, ಗುತ್ತಿಗೆ ಪ್ರಕ್ರಿಯೆಗೆ ಸಹಿ ಹಾಕಲು ಹೇಳುತ್ತಿದ್ದಾರೆ. ವೇತನ ಕಳೆದ ವರ್ಷಕ್ಕಿಂತ ಕಡಿಮೆ ಮಾಡಿದ್ದಾರೆ ಎಂದು ಶಿಕ್ಷಕರು ದೂರಿದ್ದಾರೆ.

ಭದ್ರತಾ ಸಿಬ್ಬಂದಿಗಳನ್ನು ಪೂರೈಸುವ ಈ ಸಂಸ್ಥೆಗಳು ಶಿಕ್ಷಕರನ್ನು ಪೂರೈಸುವ ಗುತ್ತಿಗೆಯನ್ನು ಕಳೆದ ವರ್ಷವೇ ಪಡೆದಿದ್ದವು. ಆಗಲೇ ಅದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ಮತ್ತೆ ಅದೇ ಏಜೆನ್ಸಿಗಳಿಗೆ ಅವಕಾಶ ನೀಡಿರುವುದು ಮತ್ತಷ್ಟು ವಿರೋಧ ವ್ಯಕ್ತವಾಗಿದೆ.

‘ಬಿಬಿಎಂಪಿ ಶಾಲೆಗಳಲ್ಲಿ ಬಡವರ ಮಕ್ಕಳು ಓದುತ್ತಿದ್ದಾರೆ. ಅಲ್ಲಿನ ಶಿಕ್ಷಣ ಮಟ್ಟ ಸುಧಾರಿಸುವ ಉದ್ದೇಶದಿಂದ ಗುಣಮಟ್ಟದ, ತರಬೇತಿ ಹೊಂದಿದ ಶಿಕ್ಷಕರನ್ನು ನೇಮಿಸಲು ನಿರ್ಧರಿಸಿದ್ದೇವೆ. ಈಗಿರುವ ಶಿಕ್ಷಕರಲ್ಲಿಯೇ ಅರ್ಹರಿಗೆ ಆದ್ಯತೆ ನೀಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಗ ತಿಳಿಸಿದ್ದರು.

‘ಸೆಕ್ಯೂರಿಟಿ ಏಜೆನ್ಸಿಗಳಿಂದ ಶಿಕ್ಷಕರನ್ನು ನೇಮಿಸಲಾಗುತ್ತಿದೆ ಎಂಬ ದೂರು ಬಂದಿದೆ. ಯಾರು? ಯಾವ ಕೆಲಸ ಮಾಡುತ್ತಾರೋ? ಅದನ್ನೇ ಮಾಡಬೇಕು. ಬಿಬಿಎಂಪಿ ಶಾಲೆಗಳಲ್ಲಿ ಗುಣಮಟ್ಟ ಕುಸಿದಿದೆ. ಈ ಕಾರಣದಿಂದ ಪಾಲಿಕೆ ಶಾಲೆಗಳನ್ನು ಶಿಕ್ಷಣ ಇಲಾಖೆ ಅಧೀನಕ್ಕೆ ವಹಿಸಲಾಗಿದೆ. ಈ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಕೆಲಸವನ್ನು ಮಾತ್ರ ಬಿಬಿಎಂಪಿ ಮಾಡಲಿದೆ’ ಎಂಬುದನ್ನೂ ಹೇಳಿದ್ದರು.

ಆದರೆ, ಅದೇ ಸೆಕ್ಯೂರಿಟಿ ಏಜೆನ್ಸಿಗಳು ಶಿಕ್ಷಕರನ್ನು 2024-25ನೇ ಶೈಕ್ಷಣಿಕ ವರ್ಷಕ್ಕೂ ಹೊರಗುತ್ತಿಗೆಯಲ್ಲಿ ಪೂರೈಸಲು ಆದೇಶ ಪಡೆದಿವೆ. ಮೇ 29ರಿಂದ ಶಾಲೆಗಳು ಆರಂಭ ಆಗಲಿವೆ.

ಡಿಟೆಕ್ಟಿವ್‌– ಸೆಕ್ಯೂರಿಟಿ ಏಜೆನ್ಸಿಗಳಿಗೆ ಮತ್ತೆ ಹೊರಗುತ್ತಿಗೆ ಶಿಕ್ಷಕರನ್ನು ಒದಗಿಸುವ ಗುತ್ತಿಗೆ ನೀಡಿರುವ ಬಗ್ಗೆ ಪ್ರತಿಕ್ರಿಯೆಗೆ ಬಿಬಿಎಂಪಿ ಮುಖ್ಯ ಆಯುಕ್ತರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಲಭ್ಯರಾಗಲಿಲ್ಲ.

ಹುಚ್ಚು ಹಾಸ್ಯಾಸ್ಪದ ಪ್ರಯತ್ನ: ಸುರೇಶ್ ಕುಮಾರ್

‘ಡಿಟೆಕ್ಟಿವ್‌– ಸೆಕ್ಯೂರಿಟಿ ಏಜೆನ್ಸಿಗಳು ಹೊರಗುತ್ತಿಗೆ ಶಿಕ್ಷಕರನ್ನು ಒದಗಿಸುತ್ತಿರುವ ಬಗ್ಗೆ ಈ ಹಿಂದೆಯೂ ಉಪಮುಖ್ಯಮಂತ್ರಿಯವರ ಗಮನಕ್ಕೆ ಹಾಗೂ ಬಿಬಿಎಂಪಿಯ ಮುಖ್ಯ ಆಯುಕ್ತರ ಗಮನಕ್ಕೆ ತಂದಿದ್ದೆ. ಆಗ ಅದನ್ನು ಪರಿಶೀಲಿಸುವುದಾಗಿ ಹೇಳಿ ಪ್ರಕ್ರಿಯೆಯನ್ನು ಸ್ಥಗಿತ ಸ್ಥಗಿತಗೊಳಿಸಲಾಯಿತು. ಇದೀಗ ಮತ್ತೆ ಅದೇ ಹುಚ್ಚು ಅಥವಾ ಹಾಸ್ಯಾಸ್ಪದ ಪ್ರಯತ್ನ ಮಾಡುತ್ತಿದ್ದಾರೆ. ತರಾತುರಿಯಲ್ಲಿ ಅನುಮತಿ ನೀಡಿರುವುದು ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಶಿಕ್ಷಕರ ನೇಮಕಾತಿ ಮತ್ತು ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ಗುತ್ತಿಗೆ ನೀಡಿದರೆ ಶಿಕ್ಷಣ ಕ್ಷೇತ್ರ ಎಂತಹ ಸ್ಥಿತಿಗೆ ತಲುಪುತ್ತದೆ? ರಸ್ತೆ ಕಾಮಗಾರಿ ಮಾಡಲು ಮತ್ತು ಕ್ರೀಡಾ ಸಲಕರಣೆ ಸರಬರಾಜು ಮಾಡಲು ನಿರ್ದಿಷ್ಟ ಗುತ್ತಿಗೆದಾರರಿಗೆ ನೀಡುತ್ತಾರೆ. ಆದರೆ ಶಿಕ್ಷಕರ ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ನೀಡಲು ಯಾವ ಮಾನದಂಡ ಉಪಯೋಗಿಸಿದ್ದಾರೆ’ ಎಂದು ಶಾಸಕ ಎಸ್‌. ಸುರೇಶ್‌ ಕುಮಾರ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT