ಗುರುವಾರ , ಆಗಸ್ಟ್ 11, 2022
23 °C
ಅಧಿಕಾರಾವಧಿ ಮುಗಿದ ಬಳಿಕವೂ ಸೇವೆಗೆ ಅವಕಾಶ ನೀಡಿ

ವಾರ್ಡ್‌ ಸಮನ್ವಯ ಸಮಿತಿ ರಚಿಸಿ: ಪಾಲಿಕೆ ಸದಸ್ಯರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಾಲಿಕೆಗೆ ಆಡಳಿತಾಧಿಕಾರಿ ನೇಮಿಸಿದ ಬಳಿಕವೂ ಪ್ರತಿವಾರ್ಡ್‌ನಲ್ಲೂ ಸಮನ್ವಯ ಸಮಿತಿ ರಚಿಸಿ, ಈಗಿರುವ ಪಾಲಿಕೆ ಸದಸ್ಯರು ಅಧಿಕಾರಿಗಳ ಜೊತೆ ಸೇರಿ ಕಾರ್ಯ ನಿರ್ವಹಿಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಬಿಜೆಪಿ ಸದಸ್ಯ ಪದ್ಮನಾಭ ರೆಡ್ಡಿ ಸಲಹೆ ನೀಡಿದರು.

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ಪಾಲಿಕೆ ಸದಸ್ಯರ ಅವಧಿ ಗುರುವಾರ ಕೊನೆಗೊಳ್ಳಬಹುದು. ಆದರೆ, ಆ ಬಳಿಕವೂ ಬೀದಿಯಲ್ಲಿ ನಾಯಿ ಸತ್ತರೆ, ರಸ್ತೆಯಲ್ಲಿ ಕಸ ಗುಡಿಸದಿದ್ದರೆ ಕರೆ ಬರುವುದು ಈಗಿನ ಪಾಲಿಕೆ ಸದಸ್ಯರಿಗೇ. ಅವರ ನೇತೃತ್ವದಲ್ಲಿ ವಾರ್ಡ್‌ ಸಮನ್ವಯ ಸಮಿತಿ ರಚಿಸಿದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಸುಲಭವಾಗುತ್ತದೆ’ ಎಂದರು.

 ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್‌, ‘ಶಾಸಕರು ಪಾಲಿಕೆ ಸದಸ್ಯರಂತೆ ಬೀದಿಯಲ್ಲಿ ನಿಂತು ಕೆಲಸ ಮಾಡಲು ಆಗದು. ಹೆಚ್ಚೆಂದರೆ ಅವರು ತಮ್ಮ ಆಪ್ತ ಸಹಾಯಕರ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಬಹುದು. ಕೋವಿಡ್‌ ಹಬ್ಬುತ್ತಿರುವ ಸಂದರ್ಭದಲ್ಲಿ ಸಮನ್ವಯ ಸಮಿತಿ ರಚನೆ ಸ್ವಾಗತಾರ್ಹ’ ಎಂದರು.

‘ಪಾಲಿಕೆ ನಿರ್ಣಯ ಕೈಗೊಂಡರೂ ಅನುಷ್ಠಾನ ಆಗುತ್ತಿಲ್ಲ. ಅನೇಕ ನಿರ್ಣಯಗಳು ಸರ್ಕಾರದ ಮಟ್ಟದಲ್ಲಿ ತಿರಸ್ಕೃತವಾಗುತ್ತಿವೆ. ವರ್ಷದಿಂದ ಈಚೆಗೆ ಹೊಲಿಗೆ ಯಂತ್ರ ನೀಡಿಲ್ಲ. ಲ್ಯಾಪ್‌ಟಾಪ್‌ ಹಂಚುವ ನಿರ್ಣಯ ಅನುಷ್ಠಾನವಾಗಿಲ್ಲ. ಕೊರೊನಾ ನಿಯಂತ್ರಣಕ್ಕೆ ಪ್ರತಿವಾರ್ಡ್‌ಗೆ ₹ 25 ಲಕ್ಷ ಹಂಚಿಕೆ ಮಾಡುವ ನಿರ್ಣಯ ಕೈಗೊಂಡರೂ ಅನುದಾನ  ಬಿಡುಗಡೆಯಾಗಿಲ್ಲ. ವೈದ್ಯಕೀಯ ವೆಚ್ಚ ಮರುಪಾವತಿ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಮೇಯರ್ ಎಂ.ಗೌತಮ್‌ ಕುಮಾರ್‌, ‘ಬೆಂಗಳೂರಿನ ಅಭಿವೃದ್ಧಿ ಸಲುವಾಗಿ, ಜನರ ಹಿತದೃಷ್ಟಿಯಿಂದ ಕೌನ್ಸಿಲ್‌ ನಿರ್ಣಯ ಕೈಗೊಳ್ಳುತ್ತದೆ. ಅದರ ಅನುಷ್ಠಾನ ಪ್ರತಿಯೊಬ್ಬ ಅಧಿಕಾರಿಯ ಸಂವಿಧಾನಬದ್ಧ  ಕರ್ತವ್ಯ’ ಎಂದರು.

‘ಪಾಲಿಕೆಯ ಕಾರ್ಯನಿರ್ವಹಣೆಯಲ್ಲಿ ತಳ ಮಟ್ಟದ ಸಿಬ್ಬಂದಿಯ ಪಾತ್ರ ಹೆಚ್ಚು. ಪೌರಕಾರ್ಮಿಕರು ಕೊರೊನಾಕ್ಕೆ ಅಂಜಿ ಕೆಲಸ ಮಾಡದಿದ್ದರೆ ನಗರದ ಪರಿಸ್ಥಿತಿ ಹೇಗಿರಬಹುದು ಊಹಿಸಿ. ತಳ ಮಟ್ಟದ ಸಿಬ್ಬಂದಿಗೆ ಬಡ್ತಿ ನೀಡುವಲ್ಲಿ ನಿಯೋಜನೆ ಮೇರೆಗೆ ಬಂದ ಉನ್ನತ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ’ ಎಂದು ಪದ್ಮನಾಭರೆಡ್ಡಿ ದೂರಿದರು. 

‘ನ್ಯಾಯಾಲಯ ಆದೇಶ ಮಾಡಿದರೂ ಬಡ್ತಿ ನೀಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಾರೆ ಎಂದು ಮಂಜುನಾಥ ರೆಡ್ಡಿ ಹಾಗೂ ಬಿ.ಎಸ್‌.ಸತ್ಯನಾರಾಯಣ ಬೇಸರ ವ್ಯಕ್ತಪಡಿಸಿದರು.

ಎಆರ್‌ಒ ಅಮಾನತು: ಮೇಯರ್ ಸೂಚನೆ

‘ಮಾರತಹಳ್ಳಿವಾರ್ಡ್‌ನ ಸಹ ಕಂದಾಯಾಧಿಕಾರಿ (ಎಆರ್‌ಒ) ಸಿದ್ದಲಿಂಗಪ್ಪ ಅವರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಅಕ್ರಮವಾಗಿ ಖಾತೆ ವಿಭಜನೆ ಮಾಡಿಕೊಟ್ಟಿದ್ದಾರೆ. ಬಂಗಲೆ ಇರುವ ಜಾಗವನ್ನು ಖಾಲಿ ನಿವೇಶನವೆಂದು ಬಿಂಬಿಸಿ ಸಾರ್ವಜನಿಕ ರಸ್ತೆಯನ್ನೂ ಸೇರಿಸಿ ಖಾಸಗಿ ವ್ಯಕ್ತಿ ಹೆಸರಿಗೆ ದಾಖಲೆ ಮಾಡಿಕೊಟ್ಟಿದ್ದಾರೆ’ ಎಂದು ಮಾರತ್ತಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ ಎನ್.ರಮೇಶ್‌ ಆರೋಪಿಸಿದರು. 

‘ಚುನಾಯಿತ ಕೌನ್ಸಿಲ್‌ ಇರುವಾಗಲೇ ಈ ರೀತಿ ಅಕ್ರಮ ನಡೆಯುತ್ತಿದೆ. ಆಡಳಿತಾಧಿಕಾರಿ ನೇಮಕವಾದ ಬಳಿಕ ಈ ಅಧಿಕಾರಿಗಳಿಗೆ ಲಂಗುಲಗಾಮು ಇರುವುದಿಲ್ಲ’ ಎಂದು ಅವರು ದೂರಿದರು.

ಎಆರ್‌ಒ ಸಿದ್ದಲಿಂಗಪ್ಪ ಅವರನ್ನು ಅಮಾನತು ಮಾಡುವಂತೆ ಮೇಯರ್‌ ಅವರು ಆಯುಕ್ತರಿಗೆ ಸೂಚನೆ ನೀಡಿದರು.

‘ಮತ್ತೆ ಹೋರ್ಡಿಂಗ್‌ಗೆ ಅವಕಾಶ ಇಲ್ಲ’

‘ನಗರದಲ್ಲಿ ಹೋರ್ಡಿಂಗ್‌ ಅಳವಡಿಸುವುದನ್ನು ನಿರ್ಬಂಧಿಸಿ ಕೌನ್ಸಿಲ್ ನಿರ್ಣಯ ಕೈಗೊಂಡಿದೆ. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೂ ಇದನ್ನು ಸ್ಪಷ್ಟಪಡಿಸಿದ್ದೆವು. ಮತ್ತೆ ಹೋರ್ಡಿಂಗ್‌ ಅಳವಡಿಕೆಗೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ’ ಎಂದು ಮೇಯರ್‌ ಸ್ಪಷ್ಟಪಡಿಸಿದರು.

‘ನಗರದಲ್ಲಿ ಮತ್ತೆ ಹೋರ್ಡಿಂಗ್‌ ಅಳವಡಿಕೆಗೆ ಅನುಕೂಲ ಕಲ್ಪಿಸಲು ಲಾಬಿ ನಡೆಯುತ್ತಿದೆ. ಕೆಲವು ಜಾಹೀರಾತು ಏಜೆನ್ಸಿಗಳು ಈ ಸಲುವಾಗಿ ₹ 1.5 ಲಕ್ಷದವರೆಗೂ ಹಣ ಸಂಗ್ರಹಿಸುತ್ತಿವೆ’ ಎಂದು ಅಬ್ದುಲ್‌ ವಾಜಿದ್‌ ಆರೋಪಿಸಿದರು.

ಸತತ 5 ಬಾರಿ ಸಾಮಾನ್ಯ ವರ್ಗದ ಮೀಸಲು ಸಾಧ್ಯವೇ?

ಒಂದೇ ವಾರ್ಡ್‌ನಲ್ಲಿ ಸತತ ಐದು ಬಾರಿ ಸಾಮಾನ್ಯ ವರ್ಗದ  ಮೀಸಲಾತಿ ಸಾಧ್ಯವೇ?

ಬಿಜೆಪಿ ಸದಸ್ಯ ಬಿ.ಎಸ್‌.ಸತ್ಯನಾರಾಯಣ ಅವರು, ಬಸನವನಗುಡಿ ಕ್ಷೇತ್ರದಲ್ಲಿ ಸತತ ಐದು ಬಾರಿ ಸಾಮಾನ್ಯ ವರ್ಗದ ಮೀಸಲಾತಿಯಿಂದ ಗೆದ್ದು ಬಂದಿರುವ ಸಂಗತಿ ಕೌನ್ಸಿಲ್‌ ಸಭೆಯಲ್ಲಿ ಈ ಜಿಜ್ಞಾಸೆಯನ್ನು ಹುಟ್ಟುಹಾಕಿತು. 

‘ಬೇರೆಲ್ಲ ವಾರ್ಡ್‌ನಲ್ಲಿ ಪ್ರತಿ ಚುನಾವಣೆಯಲ್ಲೂ ಮೀಸಲಾತಿ ಬದಲಾಗುತ್ತಿದೆ. ಆದರೆ, ಬಸವನಗುಡಿ ವಾರ್ಡ್‌ನಲ್ಲಿ ಮೀಸಲಾತಿ ಬದಲಾಗದೇ ಇರಲು ಹೇಗೆ ಸಾಧ್ಯ’ ಎಂದು ಅಬ್ದುಲ್‌ ವಾಜಿದ್‌ ಪ್ರಶ್ನಿಸಿದರು.

‘ವಾರ್ಡ್‌ನಲ್ಲಿ ಹತ್ತು ವರ್ಷ ಒಂದೇ ವರ್ಗಕ್ಕೆ ಮೀಸಲಾತಿ ಇರುವಂತೆ ಕಾನೂನು ತಿದ್ದುಪಡಿ ಮಾಡಬೇಕು’ ಎಂದು ಬಿಜೆಪಿಯ ನರಸಿಂಹ ನಾಯಕ್‌ ಸಲಹೆ ನೀಡಿದರು.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.