ಭಾನುವಾರ, ಜೂನ್ 7, 2020
22 °C
ಕೊರೊನಾ ಸೋಂಕಿತರ ಸಂಖ್ಯೆ 265ಕ್ಕೆ ಏರಿಕೆ

ನಾಲ್ಕು ತಿಂಗಳ ಮಗುವಿಗೂ ಕೋವಿಡ್: ಬೆಂಗಳೂರಿನಲ್ಲಿ 265 ಸೋಂಕಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಲ್ಕು ತಿಂಗಳ ಮಗು ಸೇರಿದಂತೆ ಶನಿವಾರ ಒಂದೇ ದಿನ ನಗರದಲ್ಲಿ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕು ಪೀಡಿತರ ಒಟ್ಟು ಸಂಖ್ಯೆ 265ಕ್ಕೆ ಏರಿಕೆಯಾಗಿದೆ. 

ದೆಹಲಿಯಿಂದ ನಗರಕ್ಕೆ ವಾಪಸ್ ಆಗಿದ್ದ ಮಗುವಿಗೆ ಸೋಂಕು ತಗುಲಿದ್ದು, ಈಗ ಮಗು ತಂದೆ–ತಾಯಿಯಿಂದ ದೂರವಾಗಿ ಆಸ್ಪತ್ರೆ ಸೇರಿದೆ. ದಂ‍ಪತಿ ಹಾಗೂ ಮಗು ದೆಹಲಿಯಿಂದ ನಗರಕ್ಕೆ ಬಂದ ಬಳಿಕ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ, ಅದರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ ಮಗುವಿಗೆ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಟಿಪ್ಪುನಗರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಕೂಡ ಸೋಂಕಿತರಾಗಿದ್ದಾರೆ. 

ಚೆನ್ನೈನಿಂದ ಮೇ 12ರಂದು ನಗರಕ್ಕೆ ವಾಪಸ್‌ ಆಗಿದ್ದ 57 ವರ್ಷದ ವ್ಯಕ್ತಿ ಸೋಂಕಿತರಾಗಿದ್ದಾರೆ. ಅವರು ಕೆಲಸದ ನಿಮಿತ್ತ ಚೆನ್ನೈಗೆ ಹೋಗಿದ್ದರು. ಆ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಅಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯದಲ್ಲಿ ಸಮಸ್ಯೆ ಇದ್ದಿದ್ದರಿಂದ ಮೇ 5 ರಂದು ಶಸ್ತ್ರಚಿಕಿತ್ಸೆ ಮಾಡಿ,  ಸ್ಟೆಂಟ್ ಅಳವಡಿಸಲಾಗಿತ್ತು. ಆಸ್ಪತ್ರೆಯಲ್ಲಿ ಕೆಲ ದಿನಗಳು ಸುಧಾರಿಸಿಕೊಂಡ ನಂತರ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ನಗರಕ್ಕೆ ಕರೆತರಲಾಗಿತ್ತು.

ಜೆ.ಪಿ.ನಗರದ 6 ನೇ ಹಂತದ ಬ್ರಿಗೇಡ್ ಮಿಲೆನಿಯಮ್ ಅಪಾರ್ಟ್‍ಮೆಂಟ್ ವಸತಿಸಮುಚ್ಛಯದಲ್ಲಿ ವಾಸವಿದ್ದ ಅವರಿಗೆ ಶುಕ್ರವಾರ ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಅಪೋಲೊ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಗಂಟಲ ದ್ರವದ ಮಾದರಿ ಪರೀಕ್ಷಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 

ಆರು ದಿನಗಳ ಹಿಂದೆ ಮಹಾರಾಷ್ಟ್ರದಿಂದ ನಗರಕ್ಕೆ ಬಂದಿದ್ದ 17 ವರ್ಷದ ಯುವಕನನ್ನು ವಸತಿಗೃಹದಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಮೊದಲು ಗಂಟಲ ದ್ರವ ಪರೀಕ್ಷಿಸಿದಾಗ ಸೋಂಕು ಪತ್ತೆಯಾಗಿರಲಿಲ್ಲ. ಎರಡನೇ ಬಾರಿ ಪರೀಕ್ಷಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.

ಮೃತರ ಸಂಖ್ಯೆ 9ಕ್ಕೆ ಏರಿಕೆ: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ನಾಗವಾರದ 32 ವರ್ಷದ ವ್ಯಕ್ತಿ ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ. ಇದರಿಂದಾಗಿ ಸೋಂಕಿಗೆ ಸಾವಿಗೀಡಾದರವ ಸಂಖ್ಯೆ ನಗರದಲ್ಲಿ 9ಕ್ಕೆ ಏರಿಕೆಯಾಗಿದೆ. ಮೃತ ವ್ಯಕ್ತಿ ಕ್ಷಯ ರೋಗದಿಂದಲೂ ಬಳಲುತ್ತಿದ್ದರು. ಕೊರೊನಾ ಸೋಂಕಿಗೆ ಈವರೆಗೆ ಮೃತಪಟ್ಟವರಲ್ಲಿ ಇವರು ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ.

ನಗರದಲ್ಲಿ ಈವರೆಗೆ 130 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 124 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು