ಮಂಗಳವಾರ, ಅಕ್ಟೋಬರ್ 27, 2020
18 °C
ಹೊಸದಾಗಿ 3,441 ಪ್ರಕರಣಗಳು ವರದಿ l ಮೃತರ ಸಂಖ್ಯೆ 3,486ಕ್ಕೆ ಏರಿಕೆ

3 ಲಕ್ಷದ ಗಡಿ ದಾಟಿದ ಕೋವಿಡ್, ಕೊರೊನಾ ಪೀಡಿತರಿಗೆ ಪಾರ್ಶ್ವವಾಯು ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ 3,441 ಕೋವಿಡ್‌ ಪ್ರಕರಣಗಳು ಶುಕ್ರವಾರ ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ.

ವಿದೇಶದಿಂದ ನಗರಕ್ಕೆ ಮರಳಿದ್ದ 40 ವರ್ಷದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಮಾ.8ರಂದು ಕೋವಿಡ್‌ ಪೀಡಿತರಾಗಿದ್ದರು. ಇದು ನಗರದಲ್ಲಿ ವರದಿಯಾದ ಪ್ರಥಮ ಕೋವಿಡ್‌ ಪ್ರಕರಣವಾಗಿತ್ತು. ಸರ್ಕಾರವು ಲಾಕ್‌ ಡೌನ್‌ ಘೋಷಿಸುವ ವೇಳೆಗೆ (ಮಾ.24) ನಗರದಲ್ಲಿ 32 ಪ್ರಕರಣಗಳು ವರದಿಯಾಗಿದ್ದವು. ಸೋಂಕು ಶಂಕಿತರ ಪತ್ತೆ, ಕ್ವಾರಂಟೈನ್‌ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ್ದರಿಂದ ಮೊದಲ ಹಂತದ ಲಾಕ್‌ ಡೌನ್ ಅಂತ್ಯವಾಗುವ ವೇಳೆಗೆ 71 ಪ್ರಕರಣಗಳಷ್ಟೇ ಪತ್ತೆಯಾಗಿದ್ದವು. ನಾಲ್ಕನೇ ಹಂತದ ಲಾಕ್‌ ಡೌನ್ ಮುಕ್ತಾಯವಾಗುವ ವೇಳೆ (ಜೂನ್ 30) ನಗರದಲ್ಲಿ 4,555 ಮಂದಿ ಸೋಂಕಿತರಾಗಿದ್ದರು.

ನಗರದಲ್ಲಿ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ ದಾಟಲು ಐದೂವರೆ ತಿಂಗಳು ಬೇಕಾಗಿದ್ದವು. ಆದರೆ, ಕಡೆಯ ಒಂದು ಲಕ್ಷ ಪ್ರಕರಣಗಳು ಕೇವಲ 24 ದಿನಗಳಲ್ಲಿ ವರದಿಯಾಗಿವೆ. ಇದರಿಂದಾಗಿ ಮೊದಲ ಪ್ರಕರಣ ವರದಿಯಾಗಿ ಎಂಟು ತಿಂಗಳು ಕಳೆಯುವ ಮುನ್ನವೇ ಸೋಂಕಿತರ ಸಂಖ್ಯೆ 3 ಲಕ್ಷ ತಲುಪಿದೆ. ಸದ್ಯ ಸೋಂಕು ದೃಢ ಪ್ರಮಾಣ ಶೇ 13 ರಷ್ಟಿದೆ.

24 ಮಂದಿ ಸಾವು: ಸೋಂಕಿತರಲ್ಲಿ ಮತ್ತೆ 24 ಮಂದಿ ಮೃತಪಟ್ಟಿದ್ದು, ಸಾವಿಗೀಡಾದವರ ಸಂಖ್ಯೆ 3,486ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ದರ ಶೇ 1.17ಕ್ಕೆ ಇಳಿಕೆಯಾಗಿದೆ. ಈ ಪ್ರಮಾಣ ಸೆಪ್ಟೆಂಬರ್ ತಿಂಗಳಲ್ಲಿ ಶೇ 1.36ರಷ್ಟಿತ್ತು. ಸೋಂಕಿತರಲ್ಲಿ ಮತ್ತೆ 3,021 ಮಂದಿ ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 2.31 ಲಕ್ಷ ದಾಟಿದೆ. 65 ಸಾವಿರಕ್ಕೂ ಅಧಿಕ ಸೋಂಕಿತರು ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳು ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ 359 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಈವರೆಗೆ ನಗರದಲ್ಲಿ 23 ಲಕ್ಷಕ್ಕೂ ಅಧಿಕ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.

ಕೊರೊನಾ ಪೀಡಿತರಿಗೆ ಪಾರ್ಶ್ವವಾಯು ಸಮಸ್ಯೆ

ಕೊರೊನಾ ಸೋಂಕಿತರು ಹಾಗೂ ಕಾಯಿಲೆಯಿಂದ ಚೇತರಿಸಿಕೊಂಡ ಕೆಲವರಿಗೆ ಪಾರ್ಶ್ವವಾಯು ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ನಗರದ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಕೆಲವರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿರುವುದು ವೈದ್ಯರು ನಡೆಸಿದ ತಪಾಸಣೆಯಿಂದ ಪತ್ತೆಯಾಗಿದೆ.

ಸಕ್ರಾ ವರ್ಲ್ಡ್ ಆಸ್ಪತ್ರೆಯ ನರರೋಗ ತಜ್ಞ ಡಾ ಸತೀಶ್ ರುದ್ರಪ್ಪ, ‘ಕಳೆದ ಮೂರು ತಿಂಗಳಲ್ಲಿ 8 ಕೋವಿಡ್ ರೋಗಿಗಳನ್ನು ತಪಾಸಣೆ ಮಾಡಿದ್ದೇನೆ. ಅವರು ಚೇತರಿಸಿಕೊಳ್ಳುವ ವೇಳೆ ಹಾಗೂ ಚೇತರಿಸಿಕೊಂಡ ನಂತರ ಎರಡರಿಂದ ಮೂರು ವಾರಗಳ ಅವಧಿಯಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಕೋವಿಡ್ ರೋಗಿಗಳ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಗಳು ಹೆಚ್ಚಿವೆ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರು ಹಾಗೂ ಬೇರೆ ಯಾವುದೇ ಕಾಯಿಲೆ ಇಲ್ಲದ ಯುವಕರು ಕೂಡ ಈ ಸಮಸ್ಯೆಗೆ ಒಳಗಾಗಿರುವುದು ಗಮನಕ್ಕೆ ಬಂದಿದೆ’ ಎಂದು ತಿಳಿಸಿದರು. 

ಬನ್ನೇರುಘಟ್ಟದ ಅಪೋಲೊ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸೂರ್ಯನಾರಾಯಣ ಶರ್ಮ, ‘ನಮ್ಮಲ್ಲಿನ ಮೂವರು ನರವಿಜ್ಞಾನಿಗಳು ಕಳೆದ ಜೂನ್‌ನಿಂದ ಈವರೆಗೆ ಪಾರ್ಶ್ವವಾಯುವಿನಿಂದ ಬಳಲಿದ 14 ಕೋವಿಡ್ ರೋಗಿಗಳನ್ನು ನೋಡಿದ್ದಾರೆ.

ಕೋವಿಡ್‌ ಕಾಣಿಸಿಕೊಂಡ ಬಳಿಕ ನರಗಳು ದುರ್ಬಲವಾಗುವ ಸಾಧ್ಯತೆಗಳಿವೆ. ಮರಗಟ್ಟುವಿಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ರೋಗಿಗಳು ಹೇಳಿಕೊಂಡಿದ್ದಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು