ಭಾನುವಾರ, ಆಗಸ್ಟ್ 1, 2021
27 °C

ಲಾಕ್‌ಡೌನ್‌ ಹಿನ್ನೆಲೆ: ಬೆಂಗಳೂರಿನಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಬುಧವಾರ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಹಾಜರಾದ ಶಿಕ್ಷಕರು ಮಾಹಿತಿ ಕೊರತೆ ಮತ್ತು ವಾಹನ ಸೌಲಭ್ಯ ಇಲ್ಲದೆ ಪರದಾಡಿದರು. 

'ಲಾಕ್‌ಡೌನ್ ಇರುವುದರಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಎಸ್ಸೆಸ್ಸೆಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಂದೂಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೇಳಿತ್ತು. ಆದರೆ, ಮೌಲ್ಯಮಾಪನಕ್ಕೆ ಹಾಜರಾಗಬೇಕು ಎಂದು ಮಂಗಳವಾರ ರಾತ್ರಿ 11 ಕ್ಕೆ ವಾಟ್ಸ್ ಆ್ಯಪ್‌ನಲ್ಲಿ ಮೆಸೇಜ್ ಹಾಕಿದ್ದಾರೆ. ಬಸ್ ವ್ಯವಸ್ಥೆ ಇಲ್ಲ. ನಮ್ಮ ಬಳಿ ಸ್ವಂತ ವಾಹನವೂ ಇಲ್ಲದ್ದರಿಂದ ಮೌಲ್ಯಮಾಪನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ' ಎಂದು ಶಿಕ್ಷಕಿಯೊಬ್ಬರು 'ಪ್ರಜಾವಾಣಿ' ಗೆ ಹೇಳಿದರು.

'ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ನಮಗೆ ಮೂರು ತಿಂಗಳುಗಳಿಂದ ವೇತನ ಇಲ್ಲ. ಈಗ ಮೌಲ್ಯಮಾಪನ ಕೇಂದ್ರಕ್ಕೆ ಹೋಗಬೇಕೆಂದರೆ ದುಪ್ಪಟ್ಟು ಹಣ ಕೇಳುತ್ತಿದ್ದಾರೆ. ಈ ಸರ್ಕಾರ ಶಿಕ್ಷಕರನ್ನು ಆಟಿಕೆ ವಸ್ತುಗಳಂತೆ ಪರಿಗಣಿಸಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

'ಮೌಲ್ಯಮಾಪನ ಮುಂದೂಡಲಾಗಿದೆ ಎಂದು ಹೇಳಿದ್ದರಿಂದ ಸೋಮವಾರವೇ ನಾನು ಊರಿಗೆ (ಗದಗ) ಬಂದಿದ್ದೇನೆ. ಆದರೆ, ಮೌಲ್ಯಮಾಪನಕ್ಕೆ ಹಾಜರಾಗುವಂತೆ ಬುಧವಾರ ನಸುಕಿನ ಜಾವ 4 ಗಂಟೆಗೆ ಮೆಸೇಜ್ ಬಂದಿದೆ. ಹೇಗೆ ಹೋಗಲು ಸಾಧ್ಯ. ದಿನಕ್ಕೊಂದು ಆದೇಶ ನೀಡುತ್ತಿದ್ದರೆ ಪಾಲನೆ ಮಾಡುವುದು ಹೇಗೆ' ಎಂದು ಶಿಕ್ಷಕರೊಬ್ಬರು ಪ್ರಶ್ನಿಸಿದರು. 

'ಸಂಕಷ್ಟದ ಈ ಸಮಯದಲ್ಲಿ ಮೌಲ್ಯಮಾಪನದ ಹಣವಾದರೂ ಬಂದರೆ ಅನುಕೂಲವಾಗುತ್ತಿತ್ತು. ಅದೂ ತಪ್ಪಿದಂತಾಯಿತು' ಎಂದು ಅವರು ಬೇಸರ ಮಾಡಿಕೊಂಡರು. 

ವ್ಯವಸ್ಥೆ ಮಾಡಲಾಗಿದೆ: 'ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮೌಲ್ಯಮಾಪನ ಮುಂದೂಡಲಾಗಿತ್ತೆ ವಿನಾ ರದ್ದು ಮಾಡಿರಲಿಲ್ಲ. ‌ಈ ವೇಳೆ ಊರಿಗೆ ಹೋಗಿದ್ದೇವೆ. ಮೌಲ್ಯಮಾಪನಕ್ಕೆ ಬರಲಾಗುತ್ತಿಲ್ಲ ಎಂದು ಹೇಳುವುದು ಸರಿಯಲ್ಲ' ಎಂದು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಿರ್ದೇಶಕಿ‌ ವಿ. ಸುಮಂಗಲಾ 'ಪ್ರಜಾವಾಣಿ'ಗೆ ತಿಳಿಸಿದರು. 

'ಲಾಕ್ ಡೌನ್ ನಿರ್ಬಂಧಗಳಿಂದ ಮೌಲ್ಯಮಾಪನ ಪ್ರಕ್ರಿಯೆಗೆ ವಿನಾಯ್ತಿ ನೀಡಲಾಗಿದೆ. ಮಂಗಳವಾರ ರಾತ್ರಿಯೇ ಎಲ್ಲರಿಗೂ ಮಾಹಿತಿ ರವಾನಿಸಲಾಗಿದ್ದು, ವಾಹನ ಸೌಲಭ್ಯಕ್ಕಾಗಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಲಾಗಿತ್ತು' ಎಂದು ಹೇಳಿದರು. 

'ಬುಧವಾರ ಮೊದಲ ದಿನವಾಗಿರುವುದರಿಂದ ವಾಹನ ಸೌಲಭ್ಯ ಕಲ್ಪಿಸಲು ಸ್ವಲ್ಪ ತಡವಾಗಿರಬಹುದು. ಅಧಿಕಾರಿಗಳಿಗೆ ಕರೆ ಮಾಡಿರುವ ಶಿಕ್ಷಕರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ' ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು