ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶುಚಿತ್ವದಿಂದ ಅನಾರೋಗ್ಯ ಸಮಸ್ಯೆ ಇಳಿಕೆ’

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಮತ
Last Updated 9 ಜನವರಿ 2021, 16:25 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಕಾಣಿಸಿಕೊಂಡ ಬಳಿಕ ಜನ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ ಜ್ವರ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳ ಪ್ರಮಾಣ ಕಡಿಮೆಯಾಗಿದೆ. ಮನೆಯಲ್ಲಿಯೇ ನಿಯಮಿತವಾಗಿ ಯೋಗ–ವ್ಯಾಯಾಮ ಮಾಡುತ್ತಿರುವ ಕಾರಣ ಜನರು ದೈಹಿಕವಾಗಿಯೂ ಬಲಶಾಲಿಗಳಾತ್ತಿದ್ದಾರೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅಭಿಪ್ರಾಯಪಟ್ಟರು.

ನಾರಾಯಣ ನೇತ್ರಾಲಯವು ನಗರದಲ್ಲಿ ಶನಿವಾರ ಹಮ್ಮಿಕೊಂಡ ನೇತ್ರದಾನ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ‘ಕೋವಿಡ್‌ನಿಂದಾಗಿ ಜನರ ಜೀವನ ಶೈಲಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ, ಮುಖಗವಸು ಧರಿಸುವಿಕೆ ಸೇರಿದಂತೆ ವಿವಿಧ ಉತ್ತಮ ಅಭ್ಯಾಸಗಳನ್ನು ಜನ ರೂಢಿಸಿಕೊಂಡಿದ್ದಾರೆ. ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗಕ್ಕೆ (ಒಪಿಡಿ) ಬರುವವರ ಸಂಖ್ಯೆಯೂ ಕಡಿಮೆಯಾಗಿರುವುದಕ್ಕೂ ಜವನಶೈಲಿಯಲ್ಲಿನ ಬದಲಾವಣೆಯೇ ಪ್ರಮುಖ ಕಾರಣ’ ಎಂದರು.

‘8–10 ತಿಂಗಳುಗಳಿಂದ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾದವರಲ್ಲಿ ಕೆಲವರು ಕೋವಿಡ್ ತಗಲುವ ಭೀತಿಯಿಂದಾಗಿ ತೃತೀಯ ಹಂತದ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಲು ಹಿಂದೇಟು ಹಾಕುತ್ತಿದ್ದರು. ಇದರಿಂದ ಅಂಗಾಂಗ ದಾನ ಪ್ರಕ್ರಿಯೆ ಹಾಗೂ ಅಂಗಾಂಗ ಕಸಿಗೆ ಹಿನ್ನಡೆ ಉಂಟಾಗಿತ್ತು. ರೋಗಿಗಳು ತೃತೀಯ ಹಂತದ ಚಿಕಿತ್ಸೆಗೆ ಆಸ್ಪತ್ರೆಗೆ ಬರಲಾರಂಭಿಸಿದ ಪರಿಣಾಮ ಅಂಗಾಂಗ ಕಸಿಯೂ ಹೆಚ್ಚಲಿದೆ’ ಎಂದರು.

‘ಸರ್ಕಾರವು ಆರೋಗ್ಯ ಕ್ಷೇತ್ರದ ಖಾಸಗಿ ಸಂಸ್ಥೆಗಳನ್ನೂ ಪ್ರೋತ್ಸಾಹಿಸುತ್ತಿದೆ. ಕೋವಿಡ್‌ನಂತಹ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣ ಮಾಡಲು ಖಾಸಗಿ ಆಸ್ಪತ್ರೆಗಳ ಸಹಕಾರವೂಸರ್ಕಾರಕ್ಕೆ ಅತ್ಯಗತ್ಯ’ ಎಂದು ತಿಳಿಸಿದರು.

ಕೋವಿಡ್‌ನಿಂದ ಸಮಸ್ಯೆ: ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ. ಭುಜಂಗ ಶೆಟ್ಟಿ, ‘ಕೋವಿಡ್‌ ಕಾಣಿಸಿಕೊಂಡ ಪ್ರಾರಂಭಿಕ ತಿಂಗಳಲ್ಲಿ ನೇತ್ರದಾನವು ಗಣನೀಯವಾಗಿ ಇಳಿಕೆಯಾಗಿತ್ತು. ಇದರಿಂದ ಹಲವರು ಗಂಭೀರ ಸಮಸ್ಯೆ ಎದುರಿಸಬೇಕಾಯಿತು. ಈಗ ದಾನಿಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ನಮ್ಮ ಸಂಸ್ಥೆಯು ಕೋವಿಡ್ ಕಾಣಿಸಿಕೊಳ್ಳುವ ಮೊದಲು ಪ್ರತಿ ತಿಂಗಳು ಸರಾಸರಿ 150 ಕಣ್ಣುಗಳನ್ನು ಸಂಗ್ರಹಿಸುತ್ತಿತ್ತು. ಈಗ ಆ ಸಂಖ್ಯೆ 20ರಿಂದ 30ಕ್ಕೆ ಇಳಿಕೆಯಾಗಿದೆ. ವಿವಿಧ ಆಸ್ಪತ್ರೆಗಳ ಸಹಕಾರದಿಂದ ಕಣ್ಣುಗಳನ್ನು ಸಂಗ್ರಹಿಸಿ, ಕಸಿ ಮಾಡಲಾಗುತ್ತಿದೆ’ ಎಂದರು.

‘ಕಣ್ಣಿನ ಹುಣ್ಣು ಸೇರಿದಂತೆ ವಿವಿಧ ಸಂದರ್ಭದಲ್ಲಿ ವ್ಯಕ್ತಿಯು ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರಾರಂಭಿಕ ಹಂತದಲ್ಲಿಯೇ ಸಮಸ್ಯೆಗಳನ್ನು ಗುರುತಿಸಿ, ಚಿಕಿತ್ಸೆ ಒದಗಿಸಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT