ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕಾಟನ್‌ಪೇಟೆ ರಸ್ತೆಯಲ್ಲಿ ಬಸ್‌ ಸಂಚಾರಕ್ಕೆ ನಿರ್ಬಂಧ

Last Updated 6 ಅಕ್ಟೋಬರ್ 2022, 19:43 IST
ಅಕ್ಷರ ಗಾತ್ರ

ಬೆಂಗಳೂರು: ಕಾಟನ್‌ಪೇಟೆ ಮುಖ್ಯರಸ್ತೆಯನ್ನು ಟೆಂಡರ್‌ ಶ್ಯೂರ್‌ ಯೋಜನೆ ಅಡಿ ಅಭಿವೃದ್ಧಿಪಡಿಸಿದ ಬಳಿಕ ಈ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರ ನಿರ್ಬಂಧಿಸಲಾಗಿದೆ. ಬಸ್‌ಗಳು ಈಗ ನಾಲ್ಕೈದು ಕಿಲೋ ಮೀಟರ್ ಸುತ್ತಾಡಬೇಕಾದ ಅನಿವಾರ್ಯ ಇದೆ.

1.15 ಕಿಲೋ ಮೀಟರ್ ಉದ್ದದ ಕಾಟನ್‌ಪೇಟೆ ಮುಖ್ಯ ರಸ್ತೆಯಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗ ಸಹಿತ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಮೆಜೆಸ್ಟಿಕ್‌ನಿಂದ ಮೈಸೂರು ರಸ್ತೆಯನ್ನು ಕೆಲವೇ ನಿಮಿಷಗಳಲ್ಲಿ ಸಂಪರ್ಕಿಸಲು ಇರುವ ಮಾರ್ಗ ಇದು. ರಸ್ತೆ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಸಂಚಾರ ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ವಾಹನ ಸಂಚಾರ ಪುನರ್ ಆರಂಭಗೊಂಡ ಬಳಿಕ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ.

ಪಾದಚಾರಿ ಮಾರ್ಗ ವಿಶಾಲವಾದ ಬಳಿಕ ರಸ್ತೆ ಕಿರಿದಾಗಿದ್ದು, ಬಿಎಂಟಿಸಿ ಬಸ್‌ಗಳು ಸಂಚರಿಸಿದರೆ ಸಂಚಾರ ದಟ್ಟಣೆ ಉಂಟಾಗಲಿದೆ ಎಂಬುದು ಪೊಲೀಸರ ಅಭಿಪ್ರಾಯ. 10ರಿಂದ 15 ನಿಮಿಷದಲ್ಲಿ ಮೈಸೂರು ರಸ್ತೆ ತಲುಪುತ್ತಿದ್ದ ಬಸ್ ಪ್ರಯಾಣಿಕರು ಈಗ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಯಾಣ ಮಾಡಬೇಕಿದೆ.

ಮೆಜೆಸ್ಟಿಕ್‌ನಿಂದ ಹೊರಡುವ ಬಸ್‌ಗಳು ಹಳೇ ಮೈಸೂರು ರಸ್ತೆ, ಟ್ಯಾಂಕ್‌ ಬಂಡ್ ರಸ್ತೆ ಮೂಲಕ ಮೈಸೂರು ರಸ್ತೆ ತಲುಪುತ್ತಿವೆ. 1.15 ಕಿಲೋ ಮೀಟರ್ ಕ್ರಮಿಸುವ ಬದಲು ನಾಲ್ಕೂವರೆ ಕಿಲೋ ಮೀಟರ್ ಸುತ್ತಾಡಬೇಕಾದ ಸ್ಥಿತಿ ಇದೆ.

‘ಸಂಚಾರ ದಟ್ಟಣೆಗೆ ಬಿಎಂಟಿಸಿ ಬಸ್‌ಗಳು ಕಾರಣವಲ್ಲ. ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಕಾರಣ. ಬಸ್‌ಗಳ ಸಂಂಚಾರಕ್ಕೆ ನಿರ್ಬಂಧ ಹೇರುವುದು ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವಲ್ಲ’ ಎಂಬುದು ಬಸ್‌ ಪ್ರಯಾಣಿಕರ ಅಭಿಪ್ರಾಯ.

‘ಕಾರುಗಳ ಸಂಚಾರ ನಿರ್ಬಂಧಿಸಲಿ’

‘ಕಾಟನ್‌ಪೇಟೆ ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರ ನಿರ್ಬಂಧಿಸಿರುವುದು ದುರಂತದ ವಿಷಯ’ ಎಂದು ಬಸ್‌ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

‘ಕಳೆದ ಐದಾರು ವರ್ಷಗಳಲ್ಲಿ ಬಸ್‌ಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೆ, ಖಾಸಗಿ ವಾಹನಗಳ ಸಂಖ್ಯೆ ಅದರಲ್ಲೂ ಕಾರುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಖಾಸಗಿ ವಾಹನ ಸವಾರರ ಅನುಕೂಲಕ್ಕೆ ಸಾರ್ವಜನಿಕ ಸೇವೆ ಒದಗಿಸುವ ಬಸ್‌ಗಳ ಸಂಚಾರಕ್ಕೆ ಕಡಿವಾಣ ಹಾಕುವುದು ಸರಿಯಾದ ಕ್ರಮ ಅಲ್ಲ’ ಎಂದು ಅವರು ಹೇಳಿದರು.

‘ಬಡವರು, ಕೂಲಿ ಕಾರ್ಮಿಕರು ಪ್ರಯಾಣಿಸುವ ಬಿಎಂಟಿಸಿ ಬಸ್‌ಗಳ ಸಂಚಾರ ನಿರ್ಬಂಧಿಸುವ ಬದಲು ಕಾರುಗಳ ಸಂಚಾರವನ್ನು ನಿರ್ಬಂಧಿಸಲಿ. ಪೊಲೀಸರು ಬಡ ಸಾರ್ವಜನಿಕರಿಗೆ ಅನುಕೂಲ ಆಗುವ ಕೆಲಸಗಳನ್ನು ಮಾಡಬೇಕು. ಕಾಟನ್‌ಪೇಟೆ ಮುಖ್ಯ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಕೂಡಲೇ ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT