ಭಾನುವಾರ, ಏಪ್ರಿಲ್ 11, 2021
23 °C
ನ್ಯಾಯಾಲಯದ ಆದೇಶಗಳ ಅನುಪಾಲನಾ ಸಪ್ತಾಹ

ಬಿಡಿಎ: ಒಂದು ವಾರ ಜನರ ಭೇಟಿಗೆ ಇಲ್ಲ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಡ್ಡಾಯವಾಗಿ ಜಾರಿಗೆ ತರಲೇಬೇಕಾದ ಆದೇಶಗಳನ್ನು ಹೈಕೋರ್ಟ್‌ ನೀಡಿದೆ. ಇವುಗಳನ್ನು ತುರ್ತಾಗಿ ಜಾರಿಗೊಳಿಸಲು ಬಿಡಿಎ ಇದೇ 15ರಿಂದ 20ರವರೆಗೆ ‘ಹೈಕೋರ್ಟ್‌ ಆದೇಶ ಅನುಪಾಲನಾ ಸಪ್ತಾಹ’ವನ್ನು ಹಮ್ಮಿಕೊಂಡಿದೆ.

ಈ ಸಪ್ತಾಹದ ಅವಧಿಯಲ್ಲಿ ನಿತ್ಯವೂ ಬೆಳಿಗ್ಗೆ 9ರಿಂದ ಸಂಜೆ 5.30ರವರೆಗೆ ಬಿಡಿಎ ಕೇಂದ್ರ ಕಚೇರಿಗೆ ಸಾರ್ವಜನಿಕರ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ. ಇ-ಹರಾಜಿನ ಮೂಲಕ ಮಾರಾಟ ಮಾಡಿರುವ ನಿವೇಶನಗಳ ನೊಂದಣಿ ಕಾರ್ಯಗಳೂ ಸೇರಿದಂತೆ ಇತರ ಕಾರ್ಯಗಳನ್ನು ಐದು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಲಾಗುತ್ತದೆ. ಇವುಗಳ ನೊಂದಣಿಗೆ ಪ್ರತ್ಯೇಕ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಬಿಡಿಎ ತಿಳಿಸಿದೆ.

‘500ಕ್ಕೂ ಅಧಿಕ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶ ಜಾರಿಗೊಳಿಸಲು ಬಾಕಿ ಇದೆ. ನ್ಯಾಯಾಲಯದ ಆದೇಶ ಪಾಲನೆ ಆಗದಿರುವುದನ್ನು ಪ್ರಶ್ನಿಸಿ ಅನೇಕರು ದೂರುದಾರರು ನ್ಯಾಯಾಂಗನಿಂದನೆ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಹಲವು ಪ್ರಕರಣಗಳಲ್ಲಿ ಆದೇಶ ಜಾರಿ ವಿಳಂಬವಾಗಿದ್ದಕ್ಕೆ ಬಿಡಿಎ ದಂಡ ಪಾವತಿ ಮಾಡಬೇಕಾದ ಪ್ರಮೇಯಗಳೂ ಎದುರಾಗಿವೆ. ಆದೇಶಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂದು ನ್ಯಾಯಾಲಯ ಅಭಿಪ್ರಾಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ನ್ಯಾಯಾಲಯದ ಆದೇಶಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸಲು ವಿಶೇಷ ಸಪ್ತಾಹ ಹಮ್ಮಿಕೊಂಡಿದ್ದೇವೆ’ ಎಂದು ಪ್ರಾಧಿಕಾರದ ಆಯುಕ್ತ ಎಚ್‌.ಆರ್‌.ಮಹದೇವ ತಿಳಿಸಿದರು. 

‘ಅಧಿಕಾರಿಗಳಿಗೆ ಅನ್ಯ ಕಾರ್ಯಗಳನ್ನು ಹಚ್ಚಿದರೆ, ನ್ಯಾಯಾಲಯದ ಆದೇಶಗಳ ಅನುಷ್ಠಾನ ಮತ್ತಷ್ಟು ವಿಳಂಬವಾಗುತ್ತದೆ. ಇದನ್ನು ತಪ್ಪಿಸಲು ಒಂದು ಬಾರಿಗೆ ಸಪ್ತಾಹವನ್ನು ಹಮ್ಮಿಕೊಂಡು ಹೆಚ್ಚಿನ ಆದೇಶಗಳನ್ನು ಜಾರಿಗೊಳಿಸಲಿದ್ದೇವೆ’ ಎಂದರು.

‘ಸಾರ್ವಜನಿಕರ ಹಿತಾದೃಷ್ಟಿಯಿಂದಲೇ ಈ ಸಪ್ತಾಹವನ್ನು ಹಮ್ಮಿಕೊಂಡಿದ್ದೇವೆ. ಈ ಅವಧಿಯಲ್ಲಿ ಇತರ ಸೇವೆಗಳು ಲಭ್ಯ ಇಲ್ಲದೇ ಇರುವುದಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಅವರು ವಿನಂತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು