ಭಾನುವಾರ, ಆಗಸ್ಟ್ 1, 2021
27 °C
ಮೃತರ ಸಂಖ್ಯೆ 437ಕ್ಕೆ ಏರಿಕೆ: ತೀವ್ರ ನಿಗಾ ಘಟಕದಲ್ಲಿ 317 ರೋಗಿಗಳಿಗೆ ಚಿಕಿತ್ಸೆ

ಕೋವಿಡ್–19 | ಬೆಂಗಳೂರು: 15 ದಿನಗಳಲ್ಲಿ 17 ಸಾವಿರ ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ಮತ್ತೆ 1,935 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕೋವಿಡ್ ಪೀಡಿತರಲ್ಲಿ ಪುನಃ 60 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಈವರೆಗೆ ಒಂದು ದಿನ ವರದಿಯಾದ ಗರಿಷ್ಠ ಪ್ರಕರಣಗಳು ಹಾಗೂ ಖಚಿತಪಟ್ಟ ಸಾವಿನ ಸಂಖ್ಯೆ ಇವಾಗಿವೆ. 

ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಹೊಸದಾಗಿ ವರದಿಯಾಗುತ್ತಿರುವ ಪ್ರಕರಣಗಳಲ್ಲಿ ರೋಗಿಗಳಿಗೆ ಹೇಗೆ ಸೋಂಕು ತಗುಲಿತು ಎಂಬುದೇ ಪತ್ತೆಯಾಗುತ್ತಿಲ್ಲ. ಇದರಿಂದಾಗಿ ಅವರ ಸಂಪರ್ಕ ಹೊಂದಿದ್ದವರನ್ನು ಪತ್ತೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. 15 ದಿನಗಳಲ್ಲಿ 17,654 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಇದೇ ಅವಧಿಯಲ್ಲಿ 340 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 22,944 ಹಾಗೂ ಮೃತಪಟ್ಟವರ ಸಂಖ್ಯೆ 437ಕ್ಕೆ ಏರಿಕೆಯಾಗಿದೆ. 

ಆಸ್ಪತ್ರೆಗಳಿಂದ ಗುಣಮುಖರಾಗಿ ಮನೆಗೆ ಹೋಗುವವರ ಸಂಖ್ಯೆ ಕೂಡ ಹೆಚ್ಚಳವಾಗಿದೆ.  ಬುಧವಾರ 463 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಗುಣಮುಖರಾದವರ ಸಂಖ್ಯೆ 5,455ಕ್ಕೆ ತಲುಪಿದೆ. 17,051 ಸೋಂಕಿತರು ವಿವಿಧ ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳು ಹಾಗೂ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. 

ರೋಗಿಗಳಲ್ಲಿ 317 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಒದಗಿಸಲಾಗುತ್ತಿದೆ.

ಸಂಜಯ್‌ ಗಾಂಧಿ ಒಪಿಡಿ ಬಂದ್
ಸಂಜಯ್‌ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ವೈದ್ಯರು ಸೇರಿದಂತೆ 18 ಮಂದಿಗೆ ಕೊರೊನಾ ಸೋಂಕು ತಗುಲಿದೆ. ತಾತ್ಕಾಲಿಕವಾಗಿ ಅಲ್ಲಿನ ಹೊರರೋಗಿಗಳ ವಿಭಾಗವನ್ನು (ಒಪಿಡಿ) ಬಂದ್ ಮಾಡಲಾಗಿದೆ. ತುರ್ತು ಚಿಕಿತ್ಸೆಗಳು ದೊರೆಯಲಿವೆ. 

‘ಸಂಸ್ಥೆಯಲ್ಲಿ ರ್‍ಯಾಂಡಮ್‌ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಐವರು ವೈದ್ಯರು, 12 ಪ್ಯಾರಾ ಮೆಡಿಕಲ್ ಸಿಬ್ಬಂದಿ ಹಾಗೂ ಒಬ್ಬ ರೋಗಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರ ಸಂಪರ್ಕ ಹೊಂದಿದ್ದವರನ್ನು ಮನೆ ಕ್ವಾರಂಟೈನ್‌ಗೆ ಒಳಗಾಗಲು ಸೂಚಿಸಲಾಗಿದೆ. ಸೋಂಕಿತ ವೈದ್ಯರು ಮನೆ ಆರೈಕೆಗೆ ಒಳಗಾಗಿದ್ದಾರೆ. ಸಿಬ್ಬಂದಿಗೆ ಮನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಸಂಸ್ಥೆಯಲ್ಲಿನ ಪ್ರತ್ಯೇಕ ವಾರ್ಡ್‌ನಲ್ಲಿ ಆರೈಕೆ ಮಾಡಲಾಗುತ್ತಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಎಚ್.ಎಸ್. ಚಂದ್ರಶೇಖರ್ ತಿಳಿಸಿದರು.

ಎಂಟಿಆರ್: 55 ನೌಕರರಿಗೆ ಸೋಂಕು
ಬೊಮ್ಮಸಂದ್ರದಲ್ಲಿರುವ ಎಂಟಿಆರ್ ಕಾರ್ಖಾನೆಯಲ್ಲಿ 55 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಕಾರ್ಖಾನೆಗೆ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ. 

‘ಜುಲೈ 6ರಂದು ಉದ್ಯೋಗಿಯೊಬ್ಬರು ಮಂಡ್ಯದ ನಾಗಮಂಗಲದಲ್ಲಿರುವ ತಮ್ಮ ಗ್ರಾಮಕ್ಕೆ ತೆರಳಿದ್ದರು. ವಾಪಸಾದ ಐದು ದಿನಗಳ ಬಳಿಕ ಅವರಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡವು. ಅವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರ ಸಂಪರ್ಕ ಹೊಂದಿದ್ದವರು ಕೂಡ ಕೋವಿಡ್ ಪೀಡಿತರಾಗಿದ್ದಾರೆ’ ಎಂದು ಕಾರ್ಮಿಕ ಮುಖಂಡ ಜಿ.ಆರ್. ಶಿವಶಂಕರ್ ತಿಳಿಸಿದರು. 

ಕಾರ್ಖಾನೆಯಲ್ಲಿ 550 ಜನರು ಕಾರ್ಯನಿರ್ವಹಿಸುತ್ತಿದ್ದರು. ಅದರಲ್ಲಿ 130 ಜನರನ್ನು ಪರೀಕ್ಷೆ ಮಾಡಲಾಗಿತ್ತು. ಸೋಂಕಿತರಾದವರಲ್ಲಿ 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಕೋವಿಡ್‌ ಆರೈಕೆ ಕೇಂದ್ರದಲ್ಲಿದ್ದಾರೆ. ಜುಲೈ 20ರವರೆಗೆ ಕಾರ್ಖಾನೆಯನ್ನು ಬಂದ್ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು