ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಂತರ ವೈರಾಣು: ನಗರದಲ್ಲಿ 6ಕ್ಕೆ ಏರಿಕೆ

Last Updated 2 ಜನವರಿ 2021, 3:57 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶುಕ್ರವಾರ ಮೂರು ಹೊಸ ಮಾದರಿಯ(ಬ್ರಿಟನ್) ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ರೂಪಾಂತರ ಕೊರೊನಾ ವೈರಾಣು ಹೊಂದಿರುವವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಕೆಲ ದಿನಗಳ ಹಿಂದೆ ಬ್ರಿಟನ್‌ನಿಂದ ನಗರಕ್ಕೆ ಬಂದು ಕೋವಿಡ್ ಪೀಡಿತರಾದ 10ಕ್ಕೂ ಅಧಿಕ ಮಂದಿಯ ಮಾದರಿಗಳನ್ನು ಜಿನೋಮಿಕ್ ಸೀಕ್ಷೆನ್ಸಿಸ್ ಪರೀಕ್ಷೆಗಾಗಿ ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವರಲ್ಲಿ ಮತ್ತೆ ಮೂವರಲ್ಲಿ ಹೊಸ ಮಾದರಿಯ ವೈರಾಣು ಇರುವುದು ದೃಢಪಟ್ಟಿದೆ. ಇವರಲ್ಲಿ ಒಬ್ಬರು ಬೊಮ್ಮನಹಳ್ಳಿಯ ವಲಯದವರಾಗಿದ್ದು, ಈ ಮೊದಲು ಸೋಂಕಿತರಾಗಿದ್ದ ತಾಯಿ ಮತ್ತು ಮಗಳ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಉಳಿದ ಇಬ್ಬರು ಕೆಲ ದಿನಗಳ ಹಿಂದೆ ಬ್ರಿಟನ್‌ನಿಂದ ಬಂದು, ಸೋಂಕಿತರಾಗಿದ್ದರು. ಅವರು ರಾಜಾಜಿನಗರ ನಿವಾಸಿಗಳಾಗಿದ್ದಾರೆ.

ಸೋಂಕಿತರಲ್ಲಿ ಪ್ರಾರಂಭಿಕ ಲಕ್ಷಣಗಳು ಕಾಣಿಸಿಕೊಂಡಿದ್ದು, ಕೆ.ಸಿ. ಜನರಲ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಸಂಪರ್ಕಿತರನ್ನು ಬಿಬಿಎಂಪಿ ಅಧಿಕಾರಿಗಳು ಪತ್ತೆ ಮಾಡಲಾರಂಭಿಸಿದ್ದಾರೆ. ಪ್ರಾಥಮಿಕ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ.

ಸಂಪರ್ಕಿತರಿಗೆ ಸೋಂಕು: ರಾಜಾಜಿನಗರದಲ್ಲಿ ನೆಲೆಸಿದ್ದ ತಂದೆ ಅನಾರೋಗ್ಯಕ್ಕೆ ಒಳಗಾದ ಕಾರಣ40 ವರ್ಷದ ಮಹಿಳೆಯೊಬ್ಬರು ಬ್ರಿಟನ್‌ನಿಂದ ನಗರಕ್ಕೆ ಡಿ.20ರಂದು ಬಂದಿದ್ದರು. ಅವರು ತಾಯಿಯ ಸಂಪರ್ಕಕ್ಕೆ ಬಂದಿದ್ದರು. ಬ್ರಿಟನ್‌ನಿಂದ ಬಂದಿದ್ದ ಕಾರಣ ಡಿ.24ರಂದು ಅವರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ಅವರು ಸೋಂಕಿತರಾಗಿರುವುದು ಖಚಿತಪಡುತ್ತಿದ್ದಂತೆಯೇ ಪ್ರಾಥಮಿಕ ಸಂಪರ್ಕಿತರಾಗಿದ್ದ ಅವರ ತಾಯಿಯನ್ನು ಡಿ.25ರಂದು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರು ಕೂಡ ಸೋಂಕಿತರಾಗಿದ್ದರು.

ಡಿ.29ರಂದು ಜಿನೋಮಿಕ್ ಸೀಕ್ಷೆನ್ಸಿಸ್ ಪರೀಕ್ಷೆ ವರದಿಯಲ್ಲಿ ಮಹಿಳೆಯಲ್ಲಿ ಹೊಸ ಮಾದರಿಯ ವೈರಾಣು ಇರವುದು ದೃಢಪಟ್ಟಿತು.ಹೀಗಾಗಿ ಅವರ ತಾಯಿಯ ಮಾದರಿಯನ್ನೂ ನಿಮ್ಹಾನ್ಸ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರಿಂದಾಗಿ ಮಗಳ ಸಂಪರ್ಕದಿಂದ ತಾಯಿಗೂ ಹೊಸ ಮಾದರಿಯ ವೈರಾಣು ತಗುಲಿದೆ ಎನ್ನುವುದು ಖಚಿತಪಟ್ಟಿದೆ.

‘ಮಹಿಳೆಯು ತಾಯಿಯನ್ನು ಹೊರತುಪಡಿಸಿ ಬೇರೆ ಯಾರ ಸಂಪರ್ಕಕ್ಕೂ ಬಂದಿಲ್ಲ. ಅವರ ತಂದೆಯು ಐಸಿಯುನಲ್ಲಿ ಇದ್ದಾರೆ. ಅವರನ್ನು ಭೇಟಿ ಮಾಡಿರಲಿಲ್ಲ. ಸಹೋದರ ಕೂಡ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹೀಗಾಗಿ ಅವರಿಂದ ಬೇರೆ ಯಾರಿಗೂ ವೈರಾಣು ಹರಡಿಲ್ಲ’ ಎಂದು ಬಿಬಿಎಂಪಿಯ ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಮನೋರಂಜನ್ ಹೆಗ್ಡೆ ತಿಳಿಸಿದರು.

‘ತಾಯಿ ಮತ್ತು ಮಗಳು ಇಬ್ಬರೂ ಲಕ್ಷಣ ರಹಿತರಾಗಿದ್ದಾರೆ. ತಾಯಿಗೆ ಅಧಿಕ ರಕ್ತದೊತ್ತಡ ಸಮಸ್ಯೆಯಿದೆ. 14 ದಿನಗಳು ಕಳೆದ ಬಳಿಕ 24 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಕೋವಿಡ್ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಗಳಲ್ಲಿ ಸೋಂಕಿತರಾಗಿಲ್ಲ ಎನ್ನುವುದು ದೃಢಪಟ್ಟ ಬಳಿಕ ಮನೆಗೆ ಕಳುಹಿಸಲಾಗುತ್ತದೆ’ ಎಂದು ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT