ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಕಣ್ಣು: ಸಮಸ್ಯೆ ಶೇ 30ರಷ್ಟು ಹೆಚ್ಚಳ

ಡಾ.ಅಗರ್‌ವಾಲ್ಸ್‌ ಕಣ್ಣಿನ ಆಸ್ಪತ್ರೆಯ ತಜ್ಞರ ಕಳವಳ
Last Updated 7 ಜುಲೈ 2022, 16:13 IST
ಅಕ್ಷರ ಗಾತ್ರ

ಬೆಂಗಳೂರು: ‘ಮನೆಯಲ್ಲಿಯೇ ಕಚೇರಿ ಕೆಲಸ, ಆನ್‌ಲೈನ್ ತರಗತಿ, ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ನಂತಹ ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯಿಂದಾಗಿ ನಗರದಲ್ಲಿ ಒಣಕಣ್ಣಿನ ಸಮಸ್ಯೆ (ಡ್ರೈ ಐ) ಕೋವಿಡ್ ಪೂರ್ವಕ್ಕೆ ಹೋಲಿಸಿದರೆ ಶೇ 30ರಷ್ಟು ಹೆಚ್ಚಳವಾಗಿದೆ’ ಎಂದು ಡಾ.ಅಗರ್‌ವಾಲ್ಸ್‌ ಕಣ್ಣಿನ ಆಸ್ಪತ್ರೆಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಇಂದಿರಾನಗರದ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾದ ಡ್ರೈ ಐ ಕ್ಲಿನಿಕ್‌ ಅನ್ನುಸಿ.ವಿ. ರಾಮನ್ ನಗರದ ಶಾಸಕ ಎಸ್. ರಘು ಗುರುವಾರ ಉದ್ಘಾಟಿಸಿದರು.ಕ್ಲಿನಿಕ್‍ನ ಉದ್ಘಾಟನಾ ಕೊಡುಗೆಯಾಗಿ ಆಸ್ಪತ್ರೆಯು ಆ.15ರ ವರೆಗೆ ಉಚಿತ ಒಣಕಣ್ಣು ತಪಾಸಣೆ ಮತ್ತು ವೈದ್ಯರ ಸಮಾಲೋಚನೆ ಸೌಲಭ್ಯ ಘೋಷಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಆಸ್ಪತ್ರೆಯ ವೈದ್ಯೆ ಡಾ. ಸಂಜನಾ ವತ್ಸ, ‘ಸುದೀರ್ಘ ಅವಧಿ ಡಿಜಿಟಲ್ ಪರದೆಯನ್ನು ನೋಡುವುದರಿಂದ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಡಿಜಿಟಲ್ ಪರದೆ ಮುಂದೆ ಕೆಲಸ ಮಾಡುವವರು ಸಾಮಾನ್ಯವಾಗಿ ಕಣ್ಣಿನ ರೆಪ್ಪೆಯನ್ನು ಮಿಟುಕಿಸುವುದು ಕಡಿಮೆ. ಇದರ ಜೊತೆಗೆ ಪರದೆಯಿಂದ ಹೊರಹೊಮ್ಮುವ ಬೆಳಕು ಕಣ್ಣಿನ ಮೇಲೆ ನೇರ ಪರಿಣಾಮ ಬೀರುತ್ತದೆ’ ಎಂದು ಹೇಳಿದರು.

‘ಮಧುಮೇಹ, ಥೈರಾಯ್ಡ್ ಸಮಸ್ಯೆಗಳು ಮತ್ತು ವಿಟಮಿನ್ ಎ ಕೊರತೆಯೂ ಒಣಕಣ್ಣು ಸಮಸ್ಯೆಗೆ ಕಾರಣವಾಗುತ್ತಿದೆ.20ರಿಂದ 40 ವರ್ಷದವರಲ್ಲಿ ಈ ಸಮಸ್ಯೆ ಹೆಚ್ಚಳವಾಗುತ್ತಿದೆ. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರಲ್ಲಿ ಬಹುತೇಕರು ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಾಗಿದ್ದಾರೆ. ಒಣಕಣ್ಣಿನ ಸಮಸ್ಯೆ ಇನ್ನೂ ಶೇ 15ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

ಆಸ್ಪತ್ರೆಯ ಕ್ಲಿನಿಕಲ್ ಸೇವೆಯಪ್ರಾದೇಶಿಕ ಮುಖ್ಯಸ್ಥೆ ಡಾ.ಅರ್ಚನಾ ಎಸ್., ‘ಕಣ್ಣಿನಲ್ಲಿತುರಿಕೆ, ಕೆಂಪು ಬಣ್ಣಕ್ಕೆ ತಿರುಗುವುದು, ದೃಷ್ಟಿ ಮಸುಕಾಗುವುದು, ಅಸ್ವಸ್ಥತೆ ಸೇರಿ ವಿವಿಧ ಲಕ್ಷಣಗಳು ಕಂಡುಬಂದ ತಕ್ಷಣ ನೇತ್ರ ತಜ್ಞರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ನೀಡಲಾಗುವುದು. ಇಂತಹ ರೋಗಲಕ್ಷಣಗಳಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಕೆಲವು ವೇಳೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT