ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ 29 ಮಂದಿಗೆ ಸೋಂಕು: ಒಂದು ವಾರದಲ್ಲಿ 125 ಜನರಿಗೆ ಕೋವಿಡ್‌–19

ನಗರದಲ್ಲಿ ಸೋಂಕಿತರ ಸಂಖ್ಯೆ 522ಕ್ಕೆ ಏರಿಕೆ
Last Updated 9 ಜೂನ್ 2020, 21:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 29 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 522ಕ್ಕೆ ಏರಿಕೆಯಾಗಿದೆ.

ನಗರದಲ್ಲಿ ಒಂದು ವಾರದಲ್ಲಿ 125 ಮಂದಿ ಸೋಂಕಿತರಾಗಿದ್ದು, ಈ ಅವಧಿಯಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ನಿಮ್ಹಾನ್ಸ್‌ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದೆ. ಕಳೆದ ವಾರ ಸಂಸ್ಥೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದ ರೋಗಿಯೊಬ್ಬರು ಸೋಂಕಿತರಾಗಿದ್ದರು. ಮಹಿಳಾ ಸಿಬ್ಬಂದಿ ಗುರಪ್ಪನ ಪಾಳ್ಯದ ನಿವಾಸಿ. ಪಾರ್ವತಿಪುರದ 65 ವರ್ಷದ ವೃದ್ಧೆ ಜೂ. 3ರಂದು ಮೃತರಾಗಿದ್ದರು. ಅವರ ಸಂಪರ್ಕ ಹೊಂದಿದ್ದ 6 ಮಂದಿಗೆ ಸೋಂಕು ತಗುಲಿದೆ.30 ವರ್ಷದ ಪುರುಷ, 8 ವರ್ಷದ ಬಾಲಕ, 14 ವರ್ಷದ ಬಾಲಕ, 16 ವರ್ಷದ ಬಾಲಕಿ, 38 ವರ್ಷದ ಮಹಿಳೆ ಹಾಗೂ 42 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಒಂದೇ ಕುಟುಂಬದ ಸದಸ್ಯರು.

ಆನಂದರಾವ್ ವೃತ್ತದಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದ24 ವರ್ಷದ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ. ಅವರಿಗೆ ಹೇಗೆ ಸೋಂಕು ತಗುಲಿತು ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ. ಸಿದ್ದನಹೊಸಳ್ಳಿಯಲ್ಲಿ ರೋಗಿಯೊಬ್ಬರ ಸಂಪರ್ಕದಿಂದ 24 ಹಾಗೂ 26 ವರ್ಷದ ವ್ಯಕ್ತಿಗಳು ಸೋಂಕಿತರಾಗಿದ್ದಾರೆ.

ಕೆಲ ದಿನಗಳ ಹಿಂದೆಪಾಟರಿ ಟೌನ್‌ನ 57 ವರ್ಷದ ಮಹಿಳೆ ಕಾಯಿಲೆ ಪೀಡಿತರಾಗಿದ್ದರು. ಅವರೊಂದಿಗೆ ಸಂಪರ್ಕ ಹೊಂದಿದ್ದಎಸ್.ಕೆ.ಗಾರ್ಡನ್‌ನ ವಿಲಿಯಮ್ಸನ್ ಟೌನ್‌ನ 34 ವರ್ಷದ ಮಹಿಳೆ, 38 ವರ್ಷದ ಮಹಿಳೆ ಹಾಗೂ 68 ವರ್ಷದ ವೃದ್ಧೆಗೆ ಕೋವಿಡ್‌–19 ಬಂದಿದೆ. ಹನುಮಂತನಗರದ ಮಾರುತಿ ಸರ್ಕಲ್ ಸಮೀಪದ 60 ವರ್ಷದ ವೃದ್ಧ ರೋಗಪೀಡಿತರಾಗಿದ್ದಾರೆ. ಅವರು ಎರಡು ಬಾರಿ ತುಮಕೂರಿಗೆ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದಾರೆ.

ವಿದೇಶದಿಂದ ಬಂದವರಿಗೆ ಸೋಂಕು:ಕೆಲ ದಿನಗಳ ಹಿಂದೆ ಕುವೈತ್‌ನಿಂದ ವಾಪಸ್‌ ಆದವರಿಗೆ ಸೋಂಕು ತಗುಲಿದೆ.29 ವರ್ಷದ ಯುವತಿ, 52 ವರ್ಷದ ಮಹಿಳೆ ಹಾಗೂ 47 ವರ್ಷದಮಹಿಳೆ ಕಾಯಿಲೆ ಪೀಡಿತರಾಗಿದ್ದು, ಅವರು ಹಜ್ ಭವನದಲ್ಲಿ ಕ್ವಾರಂಟೈನ್‌ನಲ್ಲಿ ಇದ್ದರು. ಕೋವಿಡ್ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.ನಗರದಲ್ಲಿ ಈವರೆಗೆ 298 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 204 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸೋಂಕಿನಿಂದ 19 ಮಂದಿ ಮೃತಪಟ್ಟಿದ್ದಾರೆ.

ಪೊಲೀಸರ ಆರೋಗ್ಯ ವೃದ್ಧಿಗೆ ವಿಶೇಷ ಪೂಜೆ
ಪೊಲೀಸರ ಆರೋಗ್ಯ ವೃದ್ಧಿಸಲೆಂದು ಪ್ರಾರ್ಥಿಸಿ ನಗರದಲ್ಲಿ ಮಂಗಳವಾರ ವಿಶೇಷ ಪೂಜೆ ನೆರವೇರಿಸಲಾಯಿತು.

ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದಲ್ಲಿ ನಡೆದ ಪೂಜೆಯಲ್ಲಿ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

‘ಜನರ ರಕ್ಷಣೆಗಾಗಿ ಪೊಲೀಸರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನಗಳಿಗೆ ಬಂದರೆ ಸಕಾರಾತ್ಮಕ ಶಕ್ತಿ ಸಿಕ್ಕಂತಾಗುತ್ತದೆ’ ಎಂದು ಭಾಸ್ಕರ್ ರಾವ್ ಹೇಳಿದರು.

ಕಂಟೈನ್‌ಮೆಂಟ್‌ ಪ್ರದೇಶ: ಏಳು ವಾರ್ಡ್‌ ಸೇರ್ಪಡೆ
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಿಯಂತ್ರಿತ (ಕಂಟೈನ್‌ಮೆಂಟ್‌) ಪ್ರದೇಶಗಳನ್ನು ಹೊಂದಿರುವ ವಾರ್ಡ್‌ಗಳ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಮಂಗಳವಾರ ಏಳು ವಾರ್ಡ್‌ಗಳು ಈ ಪಟ್ಟಿಗೆ ಸೇರ್ಪಡೆಯಾಗಿವೆ.

ಸೋಮವಾರದವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 54 ನಿಯಂತ್ರಿತ ಪ್ರದೇಶಗಳಿದ್ದವು. ಮಂಗಳವಾರ ಇವುಗಳ ಸಂಖ್ಯೆ 64 ಕ್ಕೆ ಹೆಚ್ಚಳವಾಗಿದೆ.

ಪೂರ್ವ ವಲಯದ ಕಾಚರಕನಹಳ್ಳಿ, ಕೋನೇನ ಅಗ್ರಹಾರ, ಮುನೇಶ್ವರನಗರ, ಸಂಪಂಗಿರಾಮನಗರ ವಾರ್ಡ್‌ಗಳನ್ನು ನಿಯಂತ್ರಿತ ಪ್ರದೇಶಗಳಿರುವ ಪಟ್ಟಿಗೆ ಸೇರಿಸಲಾಗಿದೆ. ದಕ್ಷಿಣ ವಲಯದಲ್ಲಿ ಗಾಳಿ ಆಂಜನೇಯ ದೇವಸ್ಥಾನ ವಾರ್ಡ್, ಧರ್ಮರಾಯಸ್ವಾಮಿನಗರ ವಾರ್ಡ್‌ಗಳಲ್ಲಿ ಹಾಗೂಪಶ್ಚಿಮವಲಯದಲ್ಲಿ ಚಾಮರಾಜಪೇಟೆ ವಾರ್ಡ್‌ನಲ್ಲಿ ನಿಯಂತ್ರಿತ ವಲಯಗಳನ್ನು ಗುರುತಿಸಲಾಗಿದೆ.

ಪ್ರಸ್ತುತ ಸೋಂಕಿತರು ಇರುವ ಪ್ರಕರಣಗಳಲ್ಲಿ ಶೇ 41ರಷ್ಟು ಕೇವಲ ಆರು ವಾರ್ಡ್‌ಗಳಲ್ಲಿವೆ. ಪಾದರಾಯನಪುರ (ಶೇ 10), ಎಸ್‌.ಕೆ.ಗಾರ್ಡನ್‌ (ಶೇ 11), ಮಲ್ಲೇಶ್ವರ (ಶೇ 7), ಅಗ್ರಹಾರ ದಾಸರಹಳ್ಳಿ (ಶೇ 5), ಅಗರ ಹಾಗೂ ಮಂಗಮ್ಮನಪಾಳ್ಯ (ಶೇ 4) ವಾರ್ಡ್‌ಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ.

ಕ್ವಾರಂಟೈನ್‌ ಕೇಂದ್ರದಲ್ಲಿದ್ದಮಹಿಳೆಗೆ ಅನಾರೋಗ್ಯ
ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ಕ್ವಾರಂಟೈನ್‌ ಕೇಂದ್ರದಲ್ಲಿ ಉಳಿದಿದ್ದಮಹಿಳೆಯೊಬ್ಬರಿಗೆ ಸೋಮವಾರ ರಾತ್ರಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಸಿಗದೇ ನರಳುತ್ತಿದ್ದ ಅವರನ್ನು ಪೊಲೀಸರೇ ಆಸ್ಪತ್ರೆಗೆ ಸೇರಿಸಿದ್ದಾರೆ.

ಹೊರ ರಾಜ್ಯದಿಂದ ಮರಳಿದ್ದ ಮಹಿಳೆಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ರಾತ್ರಿ 9ರ ಸುಮಾರಿಗೆ ಏಕಾಏಕಿ ಮೂರ್ಛೆ ತಪ್ಪಿ ಒದ್ದಾಡುತ್ತಿದ್ದರು. ಕೊರೊನಾ ಭೀತಿ ಇದ್ದಿದ್ದರಿಂದ ಯಾರೊಬ್ಬರೂ ಹತ್ತಿರ ಹೋಗಿರಲಿಲ್ಲ. ಕ್ವಾರಂಟೈನ್ ಕೇಂದ್ರ ಸಿಬ್ಬಂದಿಯೂ ಮಹಿಳೆ ರಕ್ಷಣೆಗೆ ಮುಂದಾಗಿರಲಿಲ್ಲ.

ಕೇಂದ್ರದಲ್ಲಿ ಕ್ವಾರಂಟೈನ್‌ಗೆ ಒಳಪಟ್ಟಿದ್ದ ಜನರೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಹೊಯ್ಸಳ ವಾಹನದಲ್ಲಿ ಕೇಂದ್ರಕ್ಕೆ ಬಂದಿದ್ದ ಪೊಲೀಸರು, ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿ ಮಹಿಳೆಯನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಘಟನೆಯಿಂದ ಆಕ್ರೋಶಗೊಂಡ ಕೇಂದ್ರದ ವಾಸಿಗಳು ಘೋಷಣೆ ಕೂಗಿದರು. ‘ಕೇಂದ್ರದಲ್ಲಿ ವ್ಯವಸ್ಥೆಗಳು‌ ಸರಿ ಇಲ್ಲ. ಅನಾರೋಗ್ಯಕ್ಕೆ ತುತ್ತಾದರೂ ಕೇಳುವವರಿಲ್ಲ’ ಎಂದು ಆರೋಪಿಸಿದರು.

‘ಕೊಠಡಿಯಲ್ಲೇ ಮಹಿಳೆ ನರಳಾಡಿದರೂ ಕೇಂದ್ರದ ಸಿಬ್ಬಂದಿ ಸಹಾಯಕ್ಕೆ ಬರಲಿಲ್ಲ. ಆಸ್ಪತ್ರೆಗೆ ಕಳುಹಿಸಲೂ ಮುಂದಾಗದೇ ನಿರ್ಲಕ್ಷ್ಯ ವಹಿಸಿದರು’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT