ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಕೋವಿಡ್–19 | ಸೋಂಕಿನ ಹಾದಿ ನಿಗೂಢ

ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 564ಕ್ಕೆ ಏರಿಕೆ l 24 ಗಂಟೆಗಳಲ್ಲಿ 42 ಮಂದಿಗೆ ಕೋವಿಡ್
Last Updated 10 ಜೂನ್ 2020, 20:22 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 24 ಗಂಟೆಗಳಲ್ಲಿ 42 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. ಇದರಿಂದಾಗಿ ಕೋವಿಡ್ ಪೀಡಿತರ ಸಂಖ್ಯೆ 564ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾದರೂ ನಗರದಲ್ಲಿ ಮಾತ್ರ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮೂರು ದಿನಗಳಲ್ಲಿ 89 ಮಂದಿ ಸೋಂಕಿತರಾಗಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಸೋಂಕು ತಗುಲಿರುವುದು ಹೇಗೆ ಎಂಬುದು ಪತ್ತೆಯೇ ಆಗಿಲ್ಲ.

ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿದ್ದವರು, ಆಸ್ಪತ್ರೆಗಳಿಗೆ ತೆರಳಿ, ಕೋವಿಡ್ ಪರೀಕ್ಷೆ ಮಾಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿಯೂ 20 ಮಂದಿ ಐಎಲ್‌ಐ ಸಮಸ್ಯೆ ಎದುರಿಸುತ್ತಿದ್ದವರು.

ಸಿಂಗಸಂದ್ರದಲ್ಲಿ 38 ವರ್ಷದ ವ್ಯಕ್ತಿ, ಕುಮಾರಸ್ವಾಮಿ ಬಡಾವಣೆಯ ಎರಡನೇ ಹಂತದಲ್ಲಿ 45 ವರ್ಷದ ವ್ಯಕ್ತಿ, ಆನೇಕಲ್‌ನಲ್ಲಿ 42 ವರ್ಷದ ವ್ಯಕ್ತಿಗೆ ಕೋವಿಡ್‌–19 ದೃಢಪಟ್ಟಿದೆ.

ಬೆಳ್ಳಂದೂರಿನಲ್ಲಿ 68 ವರ್ಷದ ವ್ಯಕ್ತಿ ಹಾಗೂ ಕಾಡುಗೋಡಿಯಲ್ಲಿ 34 ವರ್ಷದ ವ್ಯಕ್ತಿ ಕೋವಿಡ್‌ ಪೀಡಿತರಾಗಿದ್ದು, ಇಬ್ಬರೂ ಐಎಲ್‌ಐ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮುಂಬೈನಿಂದ ವಾಪಸ್ ಆಗಿದ್ದ 49 ವರ್ಷ, 36 ವರ್ಷ, 54 ವರ್ಷ ಹಾಗೂ 62 ವರ್ಷದ ಮಹಿಳೆ ಕ್ವಾರಂಟೈನ್‌ನಲ್ಲಿ ಇದ್ದರು. ವಿಜಯಪುರದಿಂದ ವಾಪಸ್ ಆಗಿದ್ದ ಕೆ.ಆರ್.ಪುರದ 43 ವರ್ಷದ ವ್ಯಕ್ತಿಗೂ ಸೋಂಕು ತಗುಲಿದೆ. ದೊಡ್ಡಕಲಸಂದ್ರದಲ್ಲಿ 39 ವರ್ಷದ ವ್ಯಕ್ತಿ ಸೋಂಕಿತರಾಗಿದ್ದಾರೆ. ಡಿ.ಜೆ. ಹಳ್ಳಿಯಲ್ಲಿ 27 ವರ್ಷದ ವ್ಯಕ್ತಿ, ಹನುಮಂತನಗರದಲ್ಲಿ 63 ವರ್ಷದ ವ್ಯಕ್ತಿಗೆ ರೋಗ ತಗುಲಿದೆ.

ವೈದ್ಯಕೀಯ ಸಿಬ್ಬಂದಿಗೆ ಸೋಂಕು: ಕೋವಿಡ್ ಆಸ್ಪತ್ರೆಯಾದ ವಿಕ್ಟೋರಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ 22 ವರ್ಷದ ವೈದ್ಯಕೀಯ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದೆ. ಕೆಲ ದಿನಗಳ ಹಿಂದಷ್ಟೇ ಅಲ್ಲಿನ ಶುಶ್ರೂಷಕಿಯೊಬ್ಬರು ಸೋಂಕಿತರಾಗಿದ್ದರು. ವಿ.ವಿ.ಪುರದ ಪಾರ್ವತಿಪುರದಲ್ಲಿ 16 ವರ್ಷದ ಬಾಲಕನಿಗೆ ಸೋಂಕು ತಗುಲಿದೆ.

ಮೃತರ ಸಂಖ್ಯೆ 21ಕ್ಕೆ ಏರಿಕೆ
ನಗರದಲ್ಲಿ ಮತ್ತೆ ಇಬ್ಬರು ಕೊರೊನಾ ಸೋಂಕಿನಿಂದಲೇ ಮೃತ ಪಟ್ಟಿರುವುದು ಬುಧವಾರ ದೃಢಪಟ್ಟಿದೆ. ಇದರಿಂದ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ 10 ಮಂದಿ ಮೃತಪಟ್ಟಿದ್ದಾರೆ.

ಆನೇಕಲ್‌ನ ಸೂರ್ಯನಗರದಲ್ಲಿ ಸೆಪ್ಟಿಕ್ ಟ್ಯಾಂಕ್‌ ಸ್ವಚ್ಛತೆ ವೇಳೆ ಉಸಿರುಗಟ್ಟಿ ಮೃತ‍ಪಟ್ಟವರಲ್ಲಿ 32 ವರ್ಷದ ವ್ಯಕ್ತಿ ಕೋವಿಡ್ ಪೀಡಿತರಾಗಿದ್ದರು ಎನ್ನುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಮರಣದ ನಂತರ ಅವರ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ತರಲಾಗಿತ್ತು. ಈಗ ಅವರೊಂದಿಗೆ ಸಂಪರ್ಕ ಹೊಂದಿದ್ದವರನ್ನು ಪತ್ತೆ ಮಾಡಲಾಗುತ್ತಿದೆ.

ಕಂಟೈನ್‌ಮೆಂಟ್‌ ಪ್ರದೇಶ: ಎಂಟು ವಾರ್ಡ್‌ ಸೇರ್ಪಡೆ
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಿಯಂತ್ರಿತ (ಕಂಟೈನ್‌ಮೆಂಟ್‌) ಪ್ರದೇಶಗಳನ್ನು ಹೊಂದಿರುವ ವಾರ್ಡ್‌ಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಬುಧವಾರ ಎಂಟು ವಾರ್ಡ್‌ಗಳು ಈ ಪಟ್ಟಿಗೆ ಸೇರ್ಪಡೆಯಾಗಿವೆ.

ಕೋವಿಡ್‌ 19 ಹೊಸ ಪ್ರಕರಣಗಳು ಪತ್ತೆಯಾದ ಕಾರಣ ದಕ್ಷಿಣ ವಲಯದಲ್ಲಿ ಹಂಪಿನಗರ ಹಾಗೂ ವಿದ್ಯಾಪೀಠ ವಾರ್ಡ್‌ಗಳು, ಪಶ್ಚಿಮ ವಲಯದಲ್ಲಿ ರಾಜಮಹಲ್‌ ಗುಟ್ಟಹಳ್ಳಿ, ಶ್ರೀರಾಮಮಂದಿರ, ಗಾಂಧಿನಗರ, ಮಹಾಲಕ್ಷ್ಮಿ ಲೇಔಟ್‌ ವಾರ್ಡ್‌ಗಳು, ಯಲಹಂಕ ವಲಯದಲ್ಲಿ ವಿದ್ಯಾರಣ್ಯಪುರ ಹಾಗೂ ದಾಸರಹಳ್ಳಿ ವಲಯದಲ್ಲಿ ಶೆಟ್ಟಿಹಳ್ಳಿ ವಾರ್ಡ್‌ಗಳಲ್ಲಿ ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಗುರುತಿಸಲಾಗಿದೆ.

ಮಂಗಳವಾರದವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 64 ನಿಯಂತ್ರಿತ ಪ್ರದೇಶಗಳಿದ್ದವು. ಬುಧವಾರ ಇವುಗಳ ಸಂಖ್ಯೆ 85ಕ್ಕೆ ಹೆಚ್ಚಳವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ ಒಟ್ಟು 88 ವಾರ್ಡ್‌ಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

50 ಸಾವಿರ ಪರೀಕ್ಷೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ ಒಟ್ಟು 50,415 ಮಂದಿಯನ್ನು ಕೋವಿಡ್‌ 19 ಪರೀಕ್ಷೆಗೆ ಒಳಪಡಿಸಲಾಗಿದೆ.

ಮೆಯೊಹಾಲ್ ಕೋರ್ಟ್ ಕಲಾಪ ರದ್ದು
ಮೆಯೊಹಾಲ್ ನಲ್ಲಿರುವ 11ನೇ ಎಸಿಎಂಎಂ ಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್‌ಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇದೇ 11 ಮತ್ತು 12ರಂದು ಕೋರ್ಟ್ ಕಲಾಪ ರದ್ದುಗೊಳಿಸಲಾಗಿದೆ.

ಕೋರ್ಟ್ ಆವರಣಕ್ಕೆ ಸ್ಯಾನಿಟೈಸರ್ ಸಿಂಪಡಣೆ ಮಾಡಬೇಕಾಗಿರುವ ಕಾರಣ ಸಿಬ್ಬಂದಿ, ವಕೀಲರು ಸೇರಿದಂತೆ ಎಲ್ಲರ ಪ್ರವೇಶ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT