ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಲಾಕ್‌ಡೌನ್ ಸಡಿಲಿಕೆಗೆ ಪ್ರಸ್ತಾವನೆ

ಹಸಿರು ವಲಯಗಳ ಮಾದರಿಯಲ್ಲಿ ವಿನಾಯಿತಿ ನೀಡಲು ಬಿಬಿಎಂಪಿ ಸಿದ್ಧತೆ
Last Updated 4 ಮೇ 2020, 3:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿನ ಕಂಟೈನ್‌ಮೆಂಟ್ ವಲಯಗಳನ್ನು ಹೊರತುಪಡಿಸಿ ಉಳಿದ 177 ವಾರ್ಡ್‌ಗಳಲ್ಲಿ ಹಸಿರು ವಲಯದ ಮಾದರಿಯಲ್ಲಿ ಲಾಕ್‌ಡೌನ್ ಸಡಿಲಿಕೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.

ಬಾಪೂಜಿನಗರ, ಹೊಸಹಳ್ಳಿ, ಕರಿಸಂದ್ರ, ಸುಧಾಮನಗರ, ರಾಮಸ್ವಾಮಿ ಪಾಳ್ಯ,‍ಪುಲಕೇಶಿನಗರ, ರಾಜರಾಜೇಶ್ವರಿನಗರ, ವಸಂತನಗರ, ಹಂಪಿನಗರ, ಬೈರಸಂದ್ರ, ಯಶವಂತಪುರ, ಛಲವಾದಿ ಪಾಳ್ಯ, ಜಗಜೀವನ್‌ರಾಮ್ ನಗರ, ದೀಪಾಂಜಲಿನಗರ, ಬಿಳೇಕಹಳ್ಳಿ, ಮಾರುತಿ ಸೇವಾನಗರ, ಹಗದೂರು, ರಾಧಾಕೃಷ್ಣ ದೇವಸ್ಥಾನ, ಕೆ.ಆರ್.ಮಾರುಕಟ್ಟೆ, ಪಾದರಾಯನಪುರ, ಹೊಂಗಸಂದ್ರ ಸೇರಿ 21 ವಾರ್ಡ್‌ಗಳು ಕಂಟೈನ್‌ಮೆಂಟ್ ವಲಯದಲ್ಲಿವೆ.

‘ಬೆಂಗಳೂರು ನಗರ ಜಿಲ್ಲೆಯನ್ನು ಕೆಂಪು ವಲಯದ ಪಟ್ಟಿಯಲ್ಲಿ ಸೇರಿಸಿದ್ದು, ಲಾಕ್‌ಡೌನ್ ಚಾಲ್ತಿಯಲ್ಲಿದೆ.177ವಾರ್ಡ್‌ಗಳಲ್ಲಿ ಕೋವಿಡ್‌–19 ಪ್ರಕರಣಗಳು ಸದ್ಯ ಇಲ್ಲದ ಕಾರಣ ಅಲ್ಲಿ ಹಸಿರು ವಲಯದ ಮಾದರಿಯಲ್ಲಿ ಲಾಕ್‌ಡೌನ್ ಸಡಿಲಿಕೆಗೆ ಅನುಮತಿ ಕೋರಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದರು.

ನಿರ್ಮಾಣ ಕಾಮಗಾರಿ ಮತ್ತು ಅದಕ್ಕೆ ಬೇಕಿರುವ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಮತ್ತಷ್ಟು ಸಡಿಲಿಕೆ ಮಾಡಲಾಗುವುದು ಎಂದು ಹೇಳಿದರು.

ಪಾದರಾಯನಪುರ ನಾಲ್ವರಿಗೆ ಸೋಂಕು
ನಗರದಲ್ಲಿ ಭಾನುವಾರ 4 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ ಪಾದರಾಯನಪುರದವರೇ ಆಗಿದ್ದಾರೆ. ಇದರಿಂದಾಗಿ ಅಲ್ಲಿ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.

ಕಂಟೈನ್‌ಮೆಂಟ್ ವಲಯವೆಂದು ಗುರುತಿಸಲ್ಪಟ್ಟಿರುವ ಪಾದರಾಯನಪುರದಲ್ಲಿ ಸೋಂಕಿತರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದ್ದು, ಬಂಧಿತ ಗಲಭೆಕೋರನಲ್ಲಿ 12 ದಿನಗಳ ಬಳಿಕ ಸೋಂಕು ಕಾಣಿಸಿಕೊಂಡಿದೆ. ರಾಮನಗರದಿಂದ ಹಜ್‌ ಭವನಕ್ಕೆ ಸ್ಥಳಾಂತರ ಮಾಡಿದಾಗ ಅವರ ಗಂಟಲದ್ರವವನ್ನು ಪರೀಕ್ಷೆ ಮಾಡಲಾಗಿತ್ತು. ಆದರೆ, ಆಗ ಸೋಂಕು ಪತ್ತೆಯಾಗಿರಲಿಲ್ಲ. 24 ವರ್ಷದ ಯುವಕನಲ್ಲಿ ಕೆಲ ದಿನಗಳ ಬಳಿಕ ಸೋಂಕು ಬೆಳಕಿಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಅದೇ ರೀತಿ, ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯ ನಂಟಿನಿಂದ (350ನೇ ರೋಗಿ ಸಂಪರ್ಕ) ಮೂವರಿಗೆ ಸೋಂಕು ತಗುಲಿದೆ. ಇದರಿಂದಾಗಿ ಅಲ್ಲಿ ಸೋಂಕು ಲಕ್ಷಣ ಹೊಂದಿರುವ 12 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಒಟ್ಟು 296 ಮಂದಿಯನ್ನು ಕ್ವಾರಂಟೈನ್ ವ್ಯವಸ್ಥೆಗೆ ಒಳಪಡಿಸಲಾಗಿದೆ.

149ಕ್ಕೆ ಏರಿಕೆ: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 149ಕ್ಕೆ ತಲುಪಿದೆ. ಈವರೆಗೆ 72 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಸದ್ಯ 72 ಕೋವಿಡ್ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕು ಶಂಕೆ ಹಿನ್ನೆಲೆಯಲ್ಲಿ 29 ಮಂದಿಯನ್ನು ನಿಗದಿತ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT