ಶುಕ್ರವಾರ, ಜೂನ್ 25, 2021
24 °C
ಐಟಿ ಕಂಪನಿ ಉದ್ಯೋಗಿ ಅನುಭವ

ಕೋವಿಡ್‌ ಗೆದ್ದವರ ಕಥೆ: ಕೋವಿಡ್‌ ಜೊತೆಗೇ ಜನ್ಮದಿನ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮದುವೆಯಾಗಿ ಮೊದಲ ಜನ್ಮದಿನವನ್ನೇ ಕೋವಿಡ್‌ನೊಂದಿಗೆ ಕಳೆಯಬೇಕಾದ, ಅದರಿಂದ ಹೊರಬಂದ ಅನುಭವವನ್ನು ಐಟಿ ಕಂಪನಿ ಉದ್ಯೋಗಿ ನಿಹಾರಿಕಾ ಸುವ್ವಿ ಹಂಚಿಕೊಂಡಿದ್ದು ಹೀಗೆ...

ಲಾಕ್ ಡೌನ್ ಇದ್ದುದರಿಂದ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದೆ. ಅಂದು ಬೆಳಿಗ್ಗೆ ಒಂದಿಷ್ಟು ವ್ಯಾಯಾಮ ಮಾಡಿದ್ದೆ. ಸಂಜೆಯಾಗುತ್ತಿದ್ದಂತೆ ಕೊಂಚ ಸುಸ್ತಾಗತೊಡಗಿತು. ಜ್ವರ ಬಂದಂತೆ ಅನ್ನಿಸಿತು. ಬಹಳ ದಿನಗಳ ನಂತರ ವ್ಯಾಯಾಮ ಮಾಡಿದ್ದರಿಂದ ಹೀಗಾಗುತ್ತಿದೆ ಎಂದುಕೊಂಡೆ.

ಜ್ವರದ ಮಾತ್ರೆ ನುಂಗಿ ಮಲಗಿದೆ. ಮಧ್ಯರಾತ್ರಿಯಾಗುತ್ತಿದ್ದಂತೆ ಜ್ವರ ಏರತೊಡಗಿತು. ನರಳಾಟ ಶುರುವಾಯಿತು. ಒಳಗೆ ಆತಂಕವಿದ್ದರೂ ‘ನಿದ್ದೆ ಮಾಡಿದರೆ ಬೆಳಿಗ್ಗೆ ಎಲ್ಲ ಸರಿಹೋಗುತ್ತದೆ’ ಎಂದು ಸಂಗಾತಿ ಶ್ರೇಯಸ್ ಧೈರ್ಯ ತುಂಬುವ ಮಾತುಗಳನ್ನಾಡಿದರು. ಬೆಳಕು ಹರಿಯಿತು; ಜ್ವರ ಇನ್ನಷ್ಟು ಏರಿತ್ತು. ಸಂಜೆಯಷ್ಟೊತ್ತಿಗೆ ತಮ್ಮ ಬಂದು ತವರುಮನೆಗೆ ಕರೆದೊಯ್ದ.

ಅಪ್ಪ ಪರಿಚಿತ ವೈದ್ಯರನ್ನು ದೂರವಾಣಿಯಲ್ಲೇ ಸಂಪರ್ಕಿಸಿ ಸಲಹೆ ಪಡೆದರು. ಭಾನುವಾರ ಎಲ್ಲರೂ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾದೆವು. ಮನೆಯಲ್ಲಿದ್ದರೂ ಎಲ್ಲರೂ ಮಾಸ್ಕ್ ಧಾರಿಗಳಾದೆವು. ನಾನು ಒಂದು ಕೋಣೆಯಲ್ಲಿ ಪ್ರತ್ಯೇಕವಾದೆ. ಎಲ್ಲರಲ್ಲೂ ಒಳಗೆ ಕಳವಳ; ಹೊರಗೆ ಸಮಾಧಾನದ ಮಾತುಗಳು. ನನಗೆ ಜ್ವರ ಹೆಚ್ಚಿದ್ದರಿಂದ ಸೋಮವಾರ ವೈದ್ಯರ ಸೂಚನೆಯಂತೆ ಶ್ವಾಸಕೋಶದ ಸ್ಕ್ಯಾನ್ ಮತ್ತು ರಕ್ತ ಪರೀಕ್ಷೆ ಮಾಡಿಸಬೇಕಾಯಿತು. ಅಂದು ಮದುವೆ ನಂತರದ ನನ್ನ ಮೊದಲ ಹುಟ್ಟುಹಬ್ಬ. ಆಪ್ತೇಷ್ಟರೆಲ್ಲಾ ಶುಭಾಶಯ ಕೋರುತ್ತಿದ್ದರೆ ನಾನು ಆತಂಕದಿಂದ ಡಯಾಗ್ನಾಸ್ಟಿಕ್ ಕೇಂದ್ರದಲ್ಲಿ ಪರೀಕ್ಷೆಗೊಳಗಾಗಿದ್ದೆ!

ಮಂಗಳವಾರ ಮಧ್ಯರಾತ್ರಿ ಮೊಬೈಲಿನಲ್ಲಿ ಕೋವಿಡ್ ‘ಪಾಸಿಟಿವ್’ ಸಂದೇಶ ಬಂದು ಕೂತಿತ್ತು. ಅಮ್ಮನನ್ನು ಹೊರತುಪಡಿಸಿ ಅಪ್ಪ, ತಮ್ಮ, ಗಂಡ ಎಲ್ಲರೂ ಪಾಸಿಟಿವ್. ಬಹಳ ಕಸಿವಿಸಿಯಾಯಿತು. ಸೋಂಕಿತರಾಗಿ ಪ್ರತ್ಯೇಕ ಕೋಣೆ ಸೇರಿದ ನಮ್ಮೆಲ್ಲರ ಉಪಚಾರದ ಜೊತೆಗೆ ತನಗೆ ರೋಗ ತಗುಲದಂತೆ ಎಚ್ಚರ ವಹಿಸುವ ಜವಾಬ್ದಾರಿ ಅಮ್ಮನ ಮೇಲೆ ಬಿತ್ತು.

ವೈದ್ಯರು ಸೂಚಿಸಿದ ಔಷಧಿಗಳನ್ನು ನಿಯಮಿತವಾಗಿ ಸೇವಿಸುತ್ತಾ ಕಾಲಕಾಲಕ್ಕೆ ಆಮ್ಲಜನಕ ಮಟ್ಟ ಮತ್ತು ದೇಹದ ತಾಪಮಾನದ ಮೇಲೆ ನಿಗಾ ಇಟ್ಟೆವು. ನನ್ನಿಂದಾಗಿ ಮನೆವರಿಗೆಲ್ಲ ಸೋಂಕು ಹರಡಿತೇನೋ ಎಂಬ ತಪ್ಪಿತಸ್ಥ ಭಾವನೆ ಕಾಡಿತು. ಮಾನಸಿಕವಾಗಿ ಕುಗ್ಗುವಂತಾಯಿತು. ಪರಿಚಿತರು ಕೋವಿಡ್‌ನಿಂದ ನಿಧನರಾದ ಸುದ್ದಿಗಳು ಭೀತಿ ಹುಟ್ಟಿಸಿದವು.

ದಿನಗಳು ಉರುಳಿದಂತೆ ಹಲವು ಹೊಯ್ದಾಟಗಳ ನಡುವೆ ನಿಧಾನವಾಗಿ ಎಲ್ಲರಲ್ಲೂ ಚೇತರಿಕೆ ಮೂಡತೊಡಗಿತು. ಮನೆಯವರ ಸಮಯಪ್ರಜ್ಞೆ, ವೈದ್ಯರ ನಿಖರ ಮಾರ್ಗದರ್ಶನ, ಹಿತೈಷಿಗಳ ಹಾರೈಕೆ ಮೇಳೈಸಿ ಕೋವಿಡ್ ಗೆಲ್ಲಲು ಸಾಧ್ಯವಾಯಿತು. ಈಗ ಎಲ್ಲರೂ ಗುಣಮುಖರಾಗಿದ್ದೇವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು