ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: 55,612 ಮಂದಿಗೆ ಲಸಿಕೆ

Last Updated 8 ಮಾರ್ಚ್ 2021, 18:41 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 2,411 ಕಡೆ ಕೋವಿಡ್‌ ಲಸಿಕೆ ವಿತರಣೆ ಅಭಿಯಾನ ನಡೆದಿದ್ದು, 55,612 ಮಂದಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಇದರಲ್ಲಿ 32,183 ಮಂದಿ ಹಿರಿಯ ನಾಗರಿಕರು ಸೇರಿದ್ದಾರೆ.

3 ಸಾವಿರ ಆರೋಗ್ಯ ಕೇಂದ್ರಗಳಲ್ಲಿ ಪ್ರತಿನಿತ್ಯ 1.50 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿತ್ತು. ಈ ಸಂಬಂಧ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ವಿವಿಧಡೆ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಒಂದೊಂದು ಪಿಂಕ್‌ ಬೂತ್‌ಗಳನ್ನು ನಿರ್ಮಿಸಿ, ಲಸಿಕೆ ನೀಡಲಾಯಿತು. ಆರೋಗ್ಯ ಕಾರ್ಯಕರ್ತರಲ್ಲಿ 11,871 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡರು. ಕೋವಿಡೇತರ ಕಾಯಿಲೆಗಳನ್ನು ಎದುರಿಸುತ್ತಿರುವ 45ರಿಂದ 60 ವರ್ಷ ವಯೋಮಾನದವರಲ್ಲಿ 5,669 ಮಂದಿ ಲಸಿಕೆ ಹಾಕಿಸಿಕೊಂಡರು.

ಎರಡು ವಾರಗಳಿಂದ ಪ್ರತಿನಿತ್ಯ 500ರ ಗಡಿ ದಾಟುತ್ತಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದೆ. ಸೋಮವಾರ 436 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಈವರೆಗೆ ಸೋಂಕಿತರಾದವರ ಒಟ್ಟು ಸಂಖ್ಯೆ 9.55 ಲಕ್ಷ ದಾಟಿದೆ. ಈ ತಿಂಗಳು ಎಂಟು ದಿನಗಳ ಅವಧಿಯಲ್ಲಿ 4,200 ಮಂದಿ ಕೋವಿಡ್ ಪೀಡಿತರಾಗಿರುವುದು ಖಚಿತಪಟ್ಟಿದೆ. ಸೋಂಕಿತರಲ್ಲಿ ಬೆಂಗಳೂರಿನಲ್ಲಿ ನಾಲ್ವರು ಹಾಗೂ ಮೈಸೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಸಾವಿಗೀಡಾದವರ ಒಟ್ಟು ಸಂಖ್ಯೆ 12,367ಕ್ಕೆ ತಲುಪಿದೆ. ಕೋವಿಡ್ ಪೀಡಿತರಲ್ಲಿ 478 ಮಂದಿ ಗುಣಮುಖರಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 9.36 ಲಕ್ಷ ದಾಟಿದೆ.

ಏರಿಕೆ ಕಂಡಿದ್ದ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗಿದೆ. ಒಂದು ದಿನದ ಅವಧಿಯಲ್ಲಿ 56 ಸಾವಿರ ಪರೀಕ್ಷೆ ನಡೆಸಲಾಗಿದೆ. ಈವರೆಗೆ 1.93 ಕೋಟಿ ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಸೋಂಕಿತರಲ್ಲಿ 6,815 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರಲ್ಲಿ 116 ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಬ್ರಿಟನ್‌ನಿಂದ ಮತ್ತೆ 261 ಮಂದಿ ಇಲ್ಲಿಗೆ ಬಂದಿದ್ದಾರೆ. ಕಳೆದ ನ.25ರಿಂದ ಈವರೆಗೆ ಬಂದವರ ಸಂಖ್ಯೆ 13,748ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ 287 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 4.08 ಲಕ್ಷ ದಾಟಿದೆ. ಕಲಬುರ್ಗಿಯಲ್ಲಿ 22, ಉಡುಪಿಯಲ್ಲಿ 18, ದಕ್ಷಿಣ ಕನ್ನಡದಲ್ಲಿ 14, ತುಮಕೂರಿನಲ್ಲಿ 12 ಪ್ರಕರಣಗಳು ಹೊಸದಾಗಿ ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT