ಭಾನುವಾರ, ನವೆಂಬರ್ 29, 2020
19 °C

ಕೋವಿಡ್‌ ನಿಯಂತ್ರಣ– ನಾಲ್ಕು ಹಂತಗಳ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಮುಖಗವಸು (ಮಾಸ್ಕ್‌) ಧರಿಸುವಿಕೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಅಂತರ ಕಾಪಾಡುವ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಬಿಬಿಎಂಪಿ ಮುಂದಾಗಿದೆ. ಈ ಬಗ್ಗೆ ನಿಗಾ ಇಡಲು ನಾಲ್ಕು ಹಂತಗಳಲ್ಲಿ ಸಮಿತಿಗಳನ್ನು ರಚಿಸಿ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌  ಮಂಗಳವಾರ ಆದೇಶ ಹೊರಡಿಸಿದ್ದಾರೆ.

ವಾರ್ಡ್‌ ಮಟ್ಟದಲ್ಲಿ ಸಹಾಯಕ ಎಂಜಿನಿಯರ್‌ ನೇತೃತ್ವದ ಸಮಿತಿ ಕೋವಿಡ್‌ ನಿಯಂತ್ರಣದ ಬಗ್ಗೆ ನಿಗಾ ಇಡಲಿದೆ. ಹಿರಿಯ ಆರೋಗ್ಯ ನಿರೀಕ್ಷಕ ಹಾಗೂ ಪೊಲೀಸ್‌ ಕಮಿಷನರ್‌ ನೇಮಿಸುವ ಪೊಲೀಸ್‌ ಅಧಿಕಾರಿ ಈ ಸಮಿತಿಯಲ್ಲಿರುತ್ತಾರೆ. ಜನರು ಮಾಸ್ಕ್‌ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡಿದರೆ, ಅಂತರ ಕಾಪಾಡದಿದ್ದರೆ ದಂಡವಿಧಿಸುವ ಅಧಿಕಾರವನ್ನು ಈ ಸಮಿತಿಗೆ ನೀಡಲಾಗಿದೆ.

ವಿಭಾಗ ಮಟ್ಟದಲ್ಲಿ ಕಾರ್ಯಪಾಲಕ ಎಂಜಿನಿಯರ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಆರೋಗ್ಯ ವೈದ್ಯಾಧಿಕಾರಿ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿ ಇದರ ಸದಸ್ಯರಾಗಿರುತ್ತಾರೆ. ಈ ಸಮಿತಿಯು ತನ್ನ ಅಧೀನದ ವಾರ್ಡ್‌ ಮಟ್ಟದ ಸಮಿತಿಗಳ ಕಾರ್ಯವೈಖರಿಯನ್ನು ಪ್ರತಿವಾರ ಪರಿಶೀಲನೆ ನಡೆಸಲಿದೆ.

ವಲಯ ಮಟ್ಟದಲ್ಲಿ ಜಂಟಿ ಆಯುಕ್ತರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಮುಖ್ಯ ಎಂಜಿನಿಯರ್‌, ಆರೋಗ್ಯಾಧಿಕಾರಿ, ವಲಯದ ಮಾರ್ಷಲ್‌ಗಳ ಮೇಲ್ವಿಚಾರಕ, ಹಿರಿಯ ಪೊಲೀಸ್‌ ಅಧಿಕಾರಿ ಇದರಲ್ಲಿರುತ್ತಾರೆ. ಈ ಸಮಿತಿಯು ವಿಭಾಗೀಯ ಮಟ್ಟದ ಸಮಿತಿಯ ವರದಿಯ ಆಧಾರದಲ್ಲಿ ವಾರ್ಡ್‌ ಮಟ್ಟದ ಸಮಿತಿಗಳ ಕಾರ್ಯವನ್ನು ಪರಿಶೀಲಿಸಲಿದೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಹಿರಿಯ ಐಎಎಸ್‌ ಅಧಿಕಾರಿ ನವೀನ್‌ರಾಜ್‌ ಸಿಂಗ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವಿಶೇಷ ಆಯುಕ್ತ ಡಿ.ರಂದೀಪ್‌ (ಕಸ ವಿಲೇವಾರಿ), ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ (ಕಸ ವಿಲೇವಾರಿ), ಮಾರ್ಷಲ್‌ಗಳ ಮುಖ್ಯ ಮೇಲ್ವಿಚಾರಕ, ಮಾರ್ಷಲ್‌ಗಳ ವಲಯ ಮಟ್ಟದ ಮೇಲ್ವಿಚಾರಕರು, ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ), ಮುಖ್ಯ ಎಂಜಿನಿಯರ್‌ (ಕಸ ವಿಲೇವಾರಿ), ಹಿರಿಯ ಪೊಲೀಸ್‌ ಅಧಿಕಾರಿಗಳು ಈ ಸಮಿತಿಯಲ್ಲಿರುತ್ತಾರೆ. 

ವಿಭಾಗೀಯ ಮಟ್ಟ, ವಲಯ ಮಟ್ಟ ಹಾಗೂ ಕೇಂದ್ರ ಕಚೇರಿಯ ಸಮಿತಿಗಳು ಪ್ರತಿ ವಾರವೂ ಪರಿಶೀಲನಾ ಸಭೆಗಳನ್ನು ನಡೆಸಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.