ಗುರುವಾರ , ಆಗಸ್ಟ್ 5, 2021
23 °C

ವಾಣಿಜ್ಯ ಕೇಂದ್ರಗಳಲ್ಲಿ ವ್ಯಾಪಿಸುತ್ತಿದೆ ಕೋವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಗೆ ಹಾಗೂ ಸರ್ಕಾರಕ್ಕೆ ಅತ್ಯಧಿಕ ವರಮಾನ ತಂದುಕೊಡುವ ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲೇ ನಾಲ್ಕೈದು ದಿನಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ.

ಕೇಂದ್ರ ವಾಣಿಜ್ಯ ಪ್ರದೇಶ, ಐ.ಟಿ ಹಬ್‌ಗಳನ್ನು ಒಳಗೊಂಡಿರುವ ವಾರ್ಡ್‌ಗಳಲ್ಲೇ ಸೋಂಕು ಹೆಚ್ಚುತ್ತಿದೆ. ಶಾಂತಲನಗರ (ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಅಶೋಕ ನಗರ), ಚಿಕ್ಕಪೇಟೆ (ಚಿನ್ನ, ಬೆಳ್ಳಿ, ರೇಷ್ಮೆ ಸೀರೆ, ಗೃಹೋಪಯೋಗಿ ವಸ್ತುಗಳ ಸಗಟು ವ್ಯಾಪಾರದ ಪ್ರಮುಖ ಕೇಂದ್ರ), ಬಸವಪುರ(ಐಟಿ ಹಬ್), ಮಲ್ಲೇಶ್ವರ (ಮಾರುಕಟ್ಟೆ), ಗಾಂಧಿನಗರ (ಶಾಪಿಂಗ್, ಮಾರುಕಟ್ಟೆ, ತಿನಿಸುಗಳ ಕೇಂದ್ರ), ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ (ಎಲೆಕ್ಟ್ರಾನಿಕ್ ಪರಿಕರಗಳ ಮಾರಾಟ ಕೇಂದ್ರ) ಮತ್ತು ಜಯನಗರ (ವಾಣಿಜ್ಯ ಕೇಂದ್ರ) ವಾರ್ಡ್‌ಗಳಲ್ಲೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

ಶಾಂತಲನಗರ ವಾರ್ಡ್‌ನಲ್ಲೇ ಭಾನುವಾರ ಅತೀ ಹೆಚ್ಚು 59 ಪ್ರಕರಣಗಳು ವರದಿಯಾಗಿವೆ. ‘ಪಾಲಿಕೆಗೆ ಅತೀ ಹೆಚ್ಚು ವರಮಾನ ತಂದುಕೊಡುವ ವಾರ್ಡ್ ಶಾಂತಲನಗರ. ಮೂರು ಕ್ರೀಡಾಂಗಣಗಳು ಈ ವ್ಯಾಪ್ತಿಯಲ್ಲಿವೆ. ಇಲ್ಲಿ ಈಗ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಹೀಗೆ ಮುಂದುವರಿದರೆ ವಹಿವಾಟು ಕಷ್ಟವಾಗಲಿದೆ’ ಎಂದು ಈ ವಾರ್ಡ್‌ನ ಸದಸ್ಯ ಎಂ.ಬಿ.ದ್ವಾರಕನಾಥ ಹೇಳಿದರು.

ದಿನದಲ್ಲಿ ಕೋಟಿಗಟ್ಟಲೆ ವಹಿವಾಟು ನಡೆಯುವ ಚಿಕ್ಕಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ವ್ಯಾಪಾರದಲ್ಲೇ ₹1 ಸಾವಿರ ಕೋಟಿಗಳಷ್ಟು ವಹಿವಾಟು ನಡೆಯುತ್ತಿತ್ತು. ರೇಷ್ಮೆ ಸೀರೆ ಮಾರಾಟದಿಂದಲೇ ದಿನಕ್ಕೆ ₹25 ಲಕ್ಷ ವಹಿವಾಟು ನಡೆಯುತ್ತಿತ್ತು. ಈ ವಾರ್ಡ್‌ನಲ್ಲಿ  ಒಂದೇ ದಿನ 23 ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ಸೋಂಕಿತರ ಸಂಖ್ಯೆ 115ಕ್ಕೆ ಏರಿಕೆಯಾಗಿದೆ.

ಬಿಬಿಎಂಪಿಗೆ ಸುಮಾರು ₹100 ಕೋಟಿ ವರಮಾನ ಈ ವಾರ್ಡ್‌ನಿಂದಲೇ ಬರುತ್ತಿತ್ತು. ಸದ್ಯ ಇಡೀ ವಾರ್ಡ್‌ ಲಾಕ್‌ಡೌನ್‌ ಆಗಿದ್ದು, ಕೂಡಲೇ ವಹಿವಾಟು ಆರಂಭಿಸಬೇಕು ಎಂಬುದು ಇಲ್ಲಿನ ವ್ಯಾಪಾರಿಗಳ ಒತ್ತಾಯ. 

ಜಯನಗರ ವಾರ್ಡ್‌ನಲ್ಲಿ ಸುಮಾರು ₹8.75 ಕೋಟಿ ವರಮಾನವನ್ನು ಬಿಬಿಎಂಪಿಗೆ ತಂದು ಕೊಡಲಿದೆ. ಒಂದೇ ದಿನ 16 ಪ್ರಕರಣಗಳು ಇಲ್ಲಿ ವರದಿಯಾಗಿವೆ.

ಶಾಂತಲಾ ನಗರ ವಾರ್ಡ್‌ನಲ್ಲಿ ಸೋಂಕು ಹೆಚ್ಚು ಕಾಣಿಸಿಕೊಂಡಿರುವ ಬಗ್ಗೆ ಬಿಬಿಎಂಪಿಯ ವಾರ್‌ ರೂಂ ಪ್ರಕಟಿಸಿರುವ ಮಾಹಿತಿ ಕುರಿತು ಪಾಲಿಕೆಯ ‍ಪೂರ್ವ ವಲಯದ ಅಧಿಕಾರಿಗಳೇ ಸಂದೇಹ ವ್ಯಕ್ತಪಡಿಸಿದ್ದಾರೆ.

‘ವಾರ್‌ರೂಂ ಪ್ರಕಟಿಸಿದ ಮಾಹಿತಿ ಐಸಿಎಂಆರ್‌ ಪೋರ್ಟಲ್‌ನಲ್ಲಿರುವ ಮಾಹಿತಿ ಜೊತೆ ತಾಳೆಯಾಗುತ್ತಿಲ್ಲ’ ಎಂದು ಪೂರ್ವ ವಲಯದ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು